ADVERTISEMENT

‘ರಸ್ತೆಗುಂಡಿ ಅವಘಡ: ಅಧಿಕಾರಿಗಳೇ ಹೊಣೆ’

ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ; ಹೈಕೋರ್ಟ್‌ ಮೌಖಿಕ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 30 ಜುಲೈ 2019, 19:39 IST
Last Updated 30 ಜುಲೈ 2019, 19:39 IST
   

ಬೆಂಗಳೂರು: ‘ಬೃಹತ್‌ ಬೆಂಗಳೂರು ಮಹಾನಗರ ‌ಪಾಲಿಕೆ (ಬಿಬಿಎಂಪಿ) ವ್ಯಾಪ್ತಿ‌ಯಲ್ಲಿ ರಸ್ತೆ ಗುಂಡಿಗಳಿಂದ ವಾಹನ ಸವಾರರು ಅಪಘಾತಕ್ಕೀಡಾಗಿ ಗಾಯಗೊಂಡರೆ ಪಾಲಿಕೆ ಅಧಿಕಾರಿಗಳೇ ಹೊಣೆ ಹೊರಬೇಕು ಮತ್ತು ಸೂಕ್ತ ಪರಿಹಾರ ನೀಡಬೇಕಾಗುತ್ತದೆ’ ಎಂದು ಹೈಕೋರ್ಟ್ ಮೌಖಿಕ ಎಚ್ಚರಿಕೆ ನೀಡಿದೆ.

‘ರಸ್ತೆ ಗುಂಡಿಗಳಿಂದಾಗಿ ಸಾವು ನೋವು ಸಂಭವಿಸುತ್ತಿವೆ’ ಎಂದು ಆಕ್ಷೇಪಿಸಿ ಕೋರಮಂಗಲದ ವಿಜಯನ್ ಮೆನನ್ ಸೇರಿ ನಾಲ್ವರು 2015ರಲ್ಲಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಮುಖ್ಯ ನ್ಯಾಯಮೂರ್ತಿ ಅಭಯ್‌ ಎಸ್‌.ಓಕಾ, ನ್ಯಾಯಮೂರ್ತಿ ಪಿ.ಎಂ.ನವಾಜ್‌ ಅವರಿದ್ದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಬಿಬಿಎಂಪಿ ಪರ ವಕೀಲ ವಿ.ಶ್ರೀನಿಧಿ ನ್ಯಾಯಪೀಠಕ್ಕೆ ಜ್ಞಾಪನಾ ಪತ್ರ (ಮೆಮೊ) ಸಲ್ಲಿಸಿದರು. ‘ಜುಲೈ 27ವರೆಗಿನ ಮಾಹಿತಿ ಪ್ರಕಾರ, ನಗರದ 108 ಮುಖ್ಯ ರಸ್ತೆಗಳ 401 ಕಿ.ಮೀ ಉದ್ದದ ವ್ಯಾಪ್ತಿಯಲ್ಲಿ ಗುಂಡಿಗಳಿವೆ’ ಎಂದು ತಿಳಿಸಿದರು.

ADVERTISEMENT

‘362 ರಸ್ತೆಗಳ ಪೈಕಿ 943.74 ಕಿ.ಮೀ ಉದ್ದದ ವ್ಯಾಪ್ತಿಯಲ್ಲಿ ಗುಂಡಿಗಳಿಲ್ಲ. ಮೆಟ್ರೊ ಕಾಮಗಾರಿಯಂತಹ ಸಂದರ್ಭಗಳಿಂದ ಆಯಾ ವ್ಯಾಪ್ತಿಯಲ್ಲಿ ರಸ್ತೆ ಗುಂಡಿಗಳಿವೆ. ಆದಾಗ್ಯೂ ಭಾರತೀಯ ರಸ್ತೆ ಕಾಂಗ್ರೆಸ್ (ಐಆರ್‌ಸಿ) ನಿಯಮಗಳ ಅನುಸಾರ ರಸ್ತೆಗಳನ್ನು ನಿರಂತರ ಅಭಿವೃದ್ಧಿಗೊಳಿಸಲಾಗುತ್ತಿದೆ’ ಎಂದು ವಿವರಿಸಿದರು.

ನ್ಯಾಯಪೀಠವು ಇದಕ್ಕೆ, ‘ರಸ್ತೆಗುಂಡಿಗಳಿಂದ ಅವಘಡ ಸಂಭವಿಸಿದರೆ ಕಾನೂನು ಪ್ರಕಾರ ಬಿಬಿಎಂಪಿಯೇ ಹೊಣೆ. ಈ ದಿಸೆಯಲ್ಲಿ ಅಧಿಕಾರಿಗಳಿಗೆ ನಿರ್ದಿಷ್ಟ ಹೊಣೆಗಾರಿಕೆ ನಿಗದಿಪಡಿಸದ ಹೊರತು ಈ ಸಮಸ್ಯೆ ಬಗೆಹರಿಯುವುದಿಲ್ಲ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿತು.

‘ರಸ್ತೆಗಳ ಸ್ಥಿತಿಗತಿ, ನಿರ್ವಹಣೆ ಬಗ್ಗೆ ಐಐಟಿ (ಭಾರತೀಯ ತಂತ್ರಜ್ಞಾನ ಸಂಸ್ಥೆ), ಐಐಎಸ್‌ಸಿಂತಹ (ಭಾರತೀಯ ವಿಜ್ಞಾನ ಸಂಸ್ಥೆ) ಸಂಸ್ಥೆಗಳ ತಜ್ಞರ ನೆರವು ಪಡೆಯಬೇಕು’ ಎಂದು ಹೇಳಿತು. ಬುಧವಾರ (ಜು.31) ವಿಸ್ತೃತ ಆದೇಶ ಹೊರಡಿಸುವುದಾಗಿಯೂ ತಿಳಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.