ADVERTISEMENT

ಬಿಬಿಎಂಪಿ ಪರಿಷ್ಕೃತ ಬಜೆಟ್‌ ಗಾತ್ರ ₹ 12,574 ಕೋಟಿ

ವೆಚ್ಚ ಮರು ಹೊಂದಾಣಿಕೆಗೆ ಖಾತೆ ಬದಲಾವಣೆ ಶುಲ್ಕವೇ ಆಸರೆ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2019, 20:19 IST
Last Updated 24 ಫೆಬ್ರುವರಿ 2019, 20:19 IST
   

ಬೆಂಗಳೂರು: ಹೊಸ ಯೋಜನೆಗಳು, ಸೇರ್ಪಡೆ, ತಿದ್ದುಪಡಿಗಳಿಂದಾಗಿ ಬಿಬಿಎಂಪಿಯ 2019–20ನೇ ಸಾಲಿನ ಬಜೆಟ್‌ ಗಾತ್ರ ₹10,691 ಕೋಟಿಯಿಂದ ₹ 12,574 ಕೋಟಿಗೆ ಏರಿಕೆ ಕಂಡಿದೆ.

ಬಜೆಟ್‌ನ ಪರಿಷ್ಕೃತ ವೆಚ್ಚವನ್ನು ಸರಿದೂಗಿಸಲು ಎಲ್ಲ ಆಸ್ತಿ ಖಾತೆಗಳನ್ನು ‘ಎ’ಗೆ ಬದಲಾಯಿಸುವಾಗ ಸಿಗುವ ಸೇವಾ ಶುಲ್ಕ ಹಾಗೂ ತೆರಿಗೆಯ ಮೂಲಕ ಭರಿಸಲು ಪಾಲಿಕೆ ಆಡಳಿತ ನಿರ್ಧರಿಸಿದೆ. ಆದರೆ, ಇದೇ ಅಂತಿಮವಲ್ಲ. ಪಾಲಿಕೆಯ ಆದಾಯದ ಇತಿಮಿತಿಯೊಳಗೆ ಬಜೆಟ್‌ ಮಂಡಿಸಬೇಕು ಎಂದು ನಗರಾಭಿವೃದ್ಧಿ ಇಲಾಖೆ ಸೂಚನೆ ನೀಡಿತ್ತು. ಪರಿಷ್ಕೃತ ಬಜೆಟ್‌ನ್ನು ಪರಿಶೀಲಿಸಿ ಸರ್ಕಾರ ಎಷ್ಟು ಮೊತ್ತಕ್ಕೆ ಅನುಮೋದನೆ ನೀಡಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಆದಾಯ ಮೂಲಗಳು

ADVERTISEMENT

₹ 3,500 ಕೋಟಿ ಎಂದು ಗುರಿಯಿರಿಸಿದ್ದ ಆಸ್ತಿ ತೆರಿಗೆ ಸಂಗ್ರಹ ಪ್ರಮಾಣವನ್ನು ₹ 4 ಸಾವಿರ ಕೋಟಿಗೆ ಏರಿಸಲಾಗಿದೆ. ₹ 500 ಕೋಟಿ ಹೆಚ್ಚುವರಿ ಆಸ್ತಿ ತೆರಿಗೆ ಸಂಗ್ರಹವಾಗುವ ನಿರೀಕ್ಷೆಯಿರಿಸಲಾಗಿದೆ. ಕಟ್ಟಡ ಪರವಾನಗಿ ಶುಲ್ಕವನ್ನು ₹ 250 ಕೋಟಿಯಿಂದ ₹ 500 ಕೋಟಿಗೆ, ಖಾತೆ ವರ್ಗಾವಣೆ ಶುಲ್ಕವನ್ನು ₹ 100 ಕೋಟಿಯಿಂದ ₹ 200 ಕೋಟಿಗೆ, ಕಾಂಪೌಂಡಿಂಗ್‌ ಶುಲ್ಕವನ್ನು 200 ಕೋಟಿಯಿಂದ 300 ಕೋಟಿಗೆ, ಭದ್ರತಾ ಠೇವಣಿ ಮೊತ್ತವನ್ನು 100ರಿಂದ 200 ಕೋಟಿಗೆ, ₹ 525 ಕೋಟಿ ನಿರೀಕ್ಷಿಸಿದ್ದ ಆರೋಗ್ಯ ಕರವನ್ನು ₹ 600 ಕೋಟಿಗೆ, ಗ್ರಂಥಾಲಯ ಕರವನ್ನು ₹ 210 ಕೋಟಿಯಿಂದ ₹ 240 ಕೋಟಿಗೆ, ಭಿಕ್ಷಾಟನೆ ಕರವನ್ನು ₹ 105 ಕೋಟಿಯಿಂದ, ₹ 120 ಕೋಟಿಗೆ ಪರಿಷ್ಕರಿಸಿ ಆದಾಯ ಮೂಲ ಗುರಿಯನ್ನು ಮರುನಿಗದಿ ಮಾಡಲಾಗಿದೆ.

‘ಕೆಲವೇ ಕ್ಷೇತ್ರಗಳಿಗೆ ಅನುದಾನ ಮೀಸಲಿರಿಸಲಾಗಿದೆ. ಮಲತಾಯಿ ಧೋರಣೆ ಎಸಗಲಾಗಿದೆ ಎಂದು ಪ್ರತಿಪಕ್ಷದವರು ಆರೋಪ ಮಾಡಿದ್ದರು. ಕೆಲವು ಹೊಸ ಯೋಜನೆಗಳನ್ನು ಸೇರ್ಪಡೆಗೊಳಿಸಬೇಕಾದ ಅನಿವಾರ್ಯ ಎದುರಾಯಿತು. ಸದಸ್ಯರ ಸಲಹೆಗಳನ್ನು ಪರಿಗಣಿಸಿ ಬಜೆಟನ್ನು ಪರಿಷ್ಕರಿಸಬೇಕಾಗಿ ಬಂದಿದೆ’ ಎಂದು ಮೇಯರ್‌ ಗಂಗಾಂಬಿಕೆ ತಿಳಿಸಿದರು.

ಈ ಮೊದಲು ₹ 15 ಕೋಟಿಗೆ ಮೀಸಲಿಟ್ಟಿದ್ದ ಜಯನಗರ ವಿಧಾನಸಭಾ ಕ್ಷೇತ್ರಕ್ಕೆ ಮತ್ತೆ ₹ 10 ಕೋಟಿ ಹೆಚ್ಚುವರಿ ಅನುದಾನ ನೀಡಲಾಗಿದೆ. ಬಿಟಿಎಂ ಬಡಾವಣೆ ಕ್ಷೇತ್ರಕ್ಕೆ ಸದ್ಯ ನಿಗದಿಯಾಗಿದ್ದ ₹ 10 ಕೋಟಿ ಜತೆಗೆ ₹ 15 ಕೋಟಿ ನೀಡಲಾಗಿದೆ.

ಮೇಯರ್ ವಾರ್ಡ್‌ಗೆ ಸಿಂಹಪಾಲು

ಮೇಯರ್‌ ಪ್ರತಿನಿಧಿಸುವ ಜಯನಗರ ವಾರ್ಡ್‌ನ ಮಾಧವನ್‌ ಪಾರ್ಕ್ ಹಾಗೂ ಸುತ್ತಮುತ್ತಲಿನ ಉದ್ಯಾನಗಳ ಅಭಿವೃದ್ಧಿಗೆ ₹ 5 ಕೋಟಿ, ಕೃಷ್ಣರಾವ್‌ ಉದ್ಯಾನ ಅಭಿವೃದ್ಧಿಗೆ ₹ 5 ಕೋಟಿ, ಜಯನಗರ ವಾಣಿಜ್ಯ ಸಂಕೀರ್ಣ ದುರಸ್ತಿಗೆ 10 ಕೋಟಿ, ಮೇಯರ್‌ ವಿವೇಚನೆಯ ವೈದ್ಯಕೀಯ ಅನುದಾನದ ಮೊತ್ತವನ್ನು ₹ 4 ಕೋಟಿಯಿಂದ ₹ 10 ಕೋಟಿಗೆ ಹೆಚ್ಚಿಸಲಾಗಿದೆ.

ಸದಸ್ಯರ ವಿವೇಚನೆಯ ವೈದ್ಯಕೀಯ ವೆಚ್ಚದ ಮೊತ್ತವನ್ನು ತಲಾ ₹ 6 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಇದಕ್ಕಾಗಿ ಮೊದಲು ನೀಡಿದ್ದ ಒಟ್ಟಾರೆ ₹ 59 ಕೋಟಿಗಳ ಬಜೆಟ್‌ ಮೊತ್ತವನ್ನು ₹ 118 ಕೋಟಿಗೆ ಪರಿಷ್ಕರಿಸಲಾಗಿದೆ.

ಮಾಧ್ಯಮ ಕೇಂದ್ರ ಸ್ಥಾಪನೆಗೆ ಮೀಸಲಿಟ್ಟಿದ್ದ ₹ 1 ಕೋಟಿಯನ್ನು ₹ 3 ಕೋಟಿಗೆ, ಪತ್ರಕರ್ತರು, ಮಾಧ್ಯಮದವರ ವೈದ್ಯಕೀಯ ವೆಚ್ಚಕ್ಕಾಗಿ ಮೀಸಲಿಟ್ಟಿರುವ ಅನುದಾನವನ್ನು ₹ 50 ಲಕ್ಷದಿಂದ ₹ 1 ಕೋಟಿಗೆ ಹೆಚ್ಚಿಸಲಾಗಿದೆ. ಕೆಲವು ಹೊಸ ವಾರ್ಡ್‌ಗಳ ಅಭಿವೃದ್ಧಿಗೆ ₹ 46 ಕೋಟಿ ಇದ್ದ ಮೀಸಲು ಹಣವನ್ನು ₹ 525 ಕೋಟಿಗೆ ಪರಿಷ್ಕರಿಸಲಾಗಿದೆ.

ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷೆ ಎಸ್‌.ಪಿ.ಹೇಮಲತಾ ಪ್ರತಿನಿಧಿಸುವ ವೃಷಭಾವತಿ ನಗರ ವಾರ್ಡ್‌ಗೂ ಹೆಚ್ಚುವರಿ ಅನುದಾನ ಸಿಕ್ಕಿದೆ. ಕಾಂಗ್ರೆಸ್‌, ಜೆಡಿಎಸ್‌ ಶಾಸಕರ ವಿಧಾನಸಭಾ ಕ್ಷೇತ್ರಗಳಾದ ದಾಸರಹಳ್ಳಿ ಕ್ಷೇತ್ರಕ್ಕೆ ₹ 20 ಕೋಟಿ ಬದಲು ₹ 70 ಕೋಟಿ, ಹೆಬ್ಬಾಳ – ₹ 20 ಕೋಟಿ ಬದಲು ₹ 30 ಕೋಟಿ, ಕೆ.ಆರ್‌.ಪುರ ಕ್ಷೇತ್ರಕ್ಕೆ ₹ 50 ಕೋಟಿ, ಜಯನಗರ, ಬಿಟಿಎಂ ಕ್ಷೇತ್ರಗಳಿಗೆ ತಲಾ ₹ 40 ಕೋಟಿ, ಚಾಮರಾನಗರ ಪೇಟೆ ಕ್ಷೇತ್ರಕ್ಕೆ ₹ 25 ಕೋಟಿ ಅನುದಾನ ಮೀಸಲಿಡಲಾಗಿದೆ.

ಬಿಜೆಪಿ ಶಾಸಕರಿರುವ ಪದ್ಮನಾಭನಗರ, ರಾಜಾಜಿನಗರ, ಮಲ್ಲೇಶ್ವರ, ಸಿ.ವಿ.ರಾಮನ್‌ ನಗರ, ಬಸವನಗುಡಿ, ಚಿಕ್ಕಪೇಟೆ, ಬೆಂಗಳೂರು ದಕ್ಷಿಣ ಕ್ಷೇತ್ರಗಳಿಗೆ ತಲಾ ₹ 5 ಕೋಟಿ ಬದಲು ₹ 10 ಕೋಟಿ ನೀಡಲಾಗಿದೆ. ಮಹಾಲಕ್ಷ್ಮಿಲೇಔಟ್‌ ಕ್ಷೇತ್ರಕ್ಕೆ ₹ 20 ಕೋಟಿ ಹೆಚ್ಚುವರಿ ಅನುದಾನ ಒದಗಿಸಲಾಗಿದೆ.

***

ರಾಜ್ಯ ಸರ್ಕಾರ ಈ ಬಜೆಟನ್ನು ಎಷ್ಟು ಮೊತ್ತಕ್ಕೆ ಅನುಮೋದಿಸುತ್ತದೆಯೋ ಅದಕ್ಕೆ ಪಾಲಿಕೆ ಬದ್ಧವಾಗಿರುತ್ತದೆ

– ಗಂಗಾಂಬಿಕೆ, ಮೇಯರ್‌ ಬಿಬಿಎಂಪಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.