ADVERTISEMENT

ರಸ್ತೆ ಗುಂಡಿ ಮುಚ್ಚಲು ಕಾರ್ಯಪಡೆ ರಚನೆ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2021, 21:09 IST
Last Updated 4 ಸೆಪ್ಟೆಂಬರ್ 2021, 21:09 IST
ಗೌರವ್ ಗುಪ್ತ
ಗೌರವ್ ಗುಪ್ತ   

ಬೆಂಗಳೂರು: ನಗರದ ರಸ್ತೆಗಳಲ್ಲಿನ ಗುಂಡಿ ಮುಚ್ಚಲು ಪ್ರತಿ ವಲಯದಲ್ಲಿ ಆಯಾ ವಲಯದ ಮುಖ್ಯ ಎಂಜಿನಿಯರ್, ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಮತ್ತು ವಾರ್ಡ್‌ ಎಂಜಿನಿಯರ್‌ ಒಳಗೊಂಡ ಕಾರ್ಯಪಡೆ ರಚಿಸಲಾಗುವುದು ಎಂದು ಬಿಬಿಎಂಪಿ ಹೇಳಿದೆ.

ಎಲ್ಲ ವಾರ್ಡ್‌ಗಳಲ್ಲಿನ ರಸ್ತೆ ಗುಂಡಿಗಳನ್ನು ಮುಚ್ಚಿ, ಸುಗಮ ವಾಹನ ಸಂಚಾರಕ್ಕೆ ಅನುವಾಗುವಂತೆ ಮಾಡಬೇಕು. ಪಾಲಿಕೆಯ ಡಾಂಬರು ಮಿಶ್ರಣ ತಯಾರಿಕಾ ಘಟಕಗಳಲ್ಲಿ ಡಾಂಬರು ಮಿಶ್ರಣ ಉತ್ಪಾದಿಸಿ, ರಸ್ತೆಗುಂಡಿಗಳನ್ನು ಮುಚ್ಚಲು ಗುತ್ತಿಗೆ ನೀಡಲಾಗಿದೆ ಎಂದು ಮುಖ್ಯ ಆಯುಕ್ತ ಗೌರವ್ ಗುಪ್ತ ಹೇಳಿದ್ದಾರೆ.

‘ವಲಯ ಮಟ್ಟದಲ್ಲಿನ ವಿಭಾಗದ ಕಾರ್ಯ ನಿರ್ವಾಹಕ ಎಂಜಿನಿಯರ್‌ಗಳು ತಮ್ಮ ವ್ಯಾಪ್ತಿಗೆ ಒಳಪಡುವ ಎಲ್ಲ ರಸ್ತೆಗಳ ಪಟ್ಟಿ ಮಾಡಿ ರಸ್ತೆಗುಂಡಿಗಳನ್ನು ಗುರುತಿಸಬೇಕು. ಅಗತ್ಯಕ್ಕೆ ತಕ್ಕಂತೆ ಡಾಂಬರು ಮಿಶ್ರಣದ ಪ್ರಮಾಣಕ್ಕೆ ಬೇಡಿಕೆ ಸಲ್ಲಿಸಬೇಕು’ ಎಂದು ಅವರು ಸೂಚನೆ ನೀಡಿದ್ದಾರೆ.

ADVERTISEMENT

‘ಕಾರ್ಯನಿರ್ವಾಹಕ ಎಂಜಿನಿಯರ್‌ಗಳು, ರಸ್ತೆ ಮೂಲಸೌಕರ್ಯ ವಿಭಾಗದವರು ವಲಯದ ಕಾರ್ಯನಿರ್ವಾಹಕ ಎಂಜಿನಿಯರ್‌ಗಳ ಬೇಡಿಕೆ ಅನುಸಾರ ಯಾವುದೇ ವಿಳಂಬಕ್ಕೆ ಆಸ್ಪದ ನೀಡದೇ ಡಾಂಬರು ಮಿಶ್ರಣ ಸರಬರಾಜು ಮಾಡಬೇಕು. ಡಾಂಬರು ಮಿಶ್ರಣ ತಯಾರಿಕಾ ಘಟಕದಿಂದ ಪ್ರತಿದಿನ ವಲಯವಾರು ಸರಬರಾಜು ಮಾಡಿರುವ ಡಾಂಬರು ಮಿಶ್ರಣದ ಪ್ರಮಾಣದ ಮಾಹಿತಿಯನ್ನು ಆಯಾ ವಲಯದ ಮುಖ್ಯ ಎಂಜಿನಿಯರ್‌ಗಳಿಗೆ ಸಲ್ಲಿಸಬೇಕು’ ಎಂದು ಸೂಚಿಸಿದ್ದಾರೆ.

‘ವಲಯದ ಮುಖ್ಯ ಎಂಜಿನಿಯರ್‌ಗಳು ಪ್ರತಿದಿನ ತಮ್ಮ ವಲಯ ವ್ಯಾಪ್ತಿಯಲ್ಲಿ ರಸ್ತೆಗುಂಡಿಗಳನ್ನು ಮುಚ್ಚಿರುವ ಬಗ್ಗೆ ವಿಭಾಗವಾರು ರಸ್ತೆಗಳ ವಿವರವನ್ನು ಕ್ರೋಡೀಕರಿಸಿ ತಮ್ಮ ವಲಯ ಆಯುಕ್ತರಿಗೆ, ನಂತರ ಆಡಳಿತಾಧಿಕಾರಿ ಕಚೇರಿಗೆ ಸಲ್ಲಿಸಬೇಕು’ ಎಂದು ಗೌರವ್ ಗುಪ್ತ ಸೂಚನೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.