ADVERTISEMENT

ಬೆಂಗಳೂರು: ಸೊರಗಿದ ನಾಯಿಗಳಿಗಷ್ಟೇ ಆಹಾರ

ಸ್ಪಷ್ಟನೆ ನೀಡಿದ ಪಶುಪಾಲನಾ ವಿಭಾಗದ ವಿಶೇಷ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್

​ಪ್ರಜಾವಾಣಿ ವಾರ್ತೆ
Published 13 ಜುಲೈ 2025, 15:44 IST
Last Updated 13 ಜುಲೈ 2025, 15:44 IST
ಬೀದಿ ನಾಯಿಗಳು
ಬೀದಿ ನಾಯಿಗಳು   

ಬೆಂಗಳೂರು: ನಗರದಲ್ಲಿರುವ 2.7 ಲಕ್ಷ ನಾಯಿಗಳ ಪೈಕಿ ಆಹಾರ ಇಲ್ಲದೆ ಸೊರಗುವ ಆಯ್ದ 4,000 ನಾಯಿಗಳಿಗೆ ಮಾತ್ರ  ಬಿಬಿಎಂಪಿ ವತಿಯಿಂದ ಆಹಾರ ನೀಡಲಾಗುತ್ತದೆ. ಇದಕ್ಕೆ ಸಂಬಂಧಿಸಿದಂತೆ ಟೆಂಡರ್‌ ಆಹ್ವಾನಿಸಿದ್ದು, ಅಂತಿಮಗೊಂಡಿಲ್ಲ. ಅಲ್ಲದೇ ಬಿರಿಯಾನಿ ನೀಡುವ ಯಾವುದೇ ಪ್ರಸ್ತಾವ ಟೆಂಡರ್‌ನಲ್ಲಿ ಇಲ್ಲ ಎಂದು ಪಶುಪಾಲನಾ ವಿಭಾಗದ ವಿಶೇಷ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್ ಸ್ಪಷ್ಟನೆ ನೀಡಿದ್ದಾರೆ.

ಸಾಧಕ-ಬಾಧಕಗಳನ್ನು ಪರಿಶೀಲಿಸಿದ ನಂತರ ಅಂತಿಮ ನಿರ್ಣಯ ಕೈಗೊಳ್ಳಲಾಗುವುದು. ಬೀದಿ ನಾಯಿಗಳಿಗೆ ಆಹಾರ ನೀಡುವುದನ್ನು ಕೋವಿಡ್ ಸಮಯದಲ್ಲಿಯೇ ಕೈಗೆತ್ತಿಕೊಳ್ಳಲಾಗಿತ್ತು. ಅದರ ಮುಂದುವರಿಕೆಯಾಗಿ ಕಳೆದ ವರ್ಷವೂ ನಿಗದಿತ ಸಂಖ್ಯೆಯಲ್ಲಿ ನಾಯಿಗಳಿಗೆ ಆಹಾರ ನೀಡಲಾಗಿತ್ತು. ಅಲ್ಲಿ ಕಲಿತ ಪಾಠಗಳ ಆಧಾರದ ಮೇಲೆ, ಈ ಯೋಜನೆಯನ್ನು ಇನ್ನಷ್ಟು ಸುಧಾರಣೆ ಮಾಡಲಾಗಿದೆ. ಕೇಂದ್ರ ಸರ್ಕಾರ ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಯ ಮೂಲಕ ಪ್ರಾಣಿ ಜನನ ನಿಯಂತ್ರಣ ನಿಯಮಗಳನ್ನು ರೂಪಿಸಿದೆ. ಅದರಂತೆ ಬಿಬಿಎಂಪಿ ಈಗ ಪ್ರತಿ ವಲಯದಲ್ಲಿ ಆಯಾ ವಲಯ ಸಹಾಯಕ ನಿರ್ದೇಶಕರು ಗುರುತಿಸಿದ ಮತ್ತು ಮೇಲ್ವಿಚಾರಣೆ ಮಾಡುವ ಸ್ಥಳಗಳಲ್ಲಿ ಸಮತೋಲನ ಆಹಾರವನ್ನು ಒದಗಿಸಲು ಟೆಂಡರ್ ಆಹ್ವಾನಿಸಿದೆ ಎಂದು ಅವರು ತಿಳಿಸಿದ್ದಾರೆ.

ಆಹಾರ ಯೋಜನೆಯ ಮೂಲಕ ಭಯ ಹುಟ್ಟಿಸುವ ನಾಯಿಗಳನ್ನು ಹಿಡಿಯಬಹುದು. ನಾಯಿ ಕಡಿತ ನಿಯಂತ್ರಿಸಬಹುದು. ರೇಬಿಸ್‌ ವಿರೋಧಿ ಲಸಿಕೆಯನ್ನು ಸುಲಭವಾಗಿ ನಾಯಿಗಳಿಗೆ ನೀಡಬಹುದು. ಸಂತಾನಶಕ್ತಿ ಹರಣ ಚಿಕಿತ್ಸೆಯನ್ನು ಈಗಾಗಲೇ ಶೇ 70ರಷ್ಟು ಮಾಡಿದ್ದು, ಉಳಿದ ನಾಯಿಗಳಿಗೂ ಆಹಾರ ನೀಡುವಾಗ ಮಾಡಲು ಸಾಧ್ಯ ಎಂದು ವಿವರಿಸಿದ್ದಾರೆ.

ADVERTISEMENT

ಒಟ್ಟು ಯೋಜನಾ ವೆಚ್ಚ ₹2.88 ಕೋಟಿ ಇದ್ದು, ಪ್ರತಿ ವಲಯದಲ್ಲಿ 100 ಆಹಾರ ಸ್ಥಳ, ಪ್ರತಿ ವಲಯದಲ್ಲಿಯೂ 500 ನಾಯಿಗಳಿಗೆ ದಿನಕ್ಕೆ ಒಂದು ಬಾರಿಯಂತೆ 365 ದಿನ ಆಹಾರ ನೀಡಲಾಗುತ್ತದೆ. ಆಹಾರ ಸಾಗಣೆ ವೆಚ್ಚ ₹8 ಮತ್ತು ಆಹಾರದ ವೆಚ್ಚ ₹11 ಸೇರಿ ಪ್ರತಿ ನಾಯಿಗೆ ಪ್ರತಿದಿನ ₹19 ವೆಚ್ಚ ತಗಲುತ್ತದೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.