ಬೀದಿನಾಯಿಗಳಿಗೆ ಬಾಡೂಟ..! ಟ್ರೋಲಿಗರಿಗೆ ಆಹಾರವಾಯಿತು ಬಿಬಿಎಂಪಿ ನಿರ್ಧಾರ
ಬೆಂಗಳೂರು: ಬೆಂಗಳೂರು ನಗರದಲ್ಲಿರುವ ಬೀದಿ ನಾಯಿಗಳಿಗೆ ಬಿಬಿಎಂಪಿ ವತಿಯಿಂದ ಪೋಷಕಾಂಶಯುಕ್ತ ಆಹಾರ ನೀಡಲು ತೀರ್ಮಾನಿಸಿರುವುದು ಇಂದು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಚರ್ಚೆಯಾಗಿದೆ. ಅಲ್ಲದೇ ತಹರೇವಾರಿ ಮಿಮ್‌ಗಳನ್ನು ಹಂಚಿಕೊಂಡು ಜನರು ಬಿಬಿಎಂಪಿ ಕಾಲೆಳೆದಿದ್ದಾರೆ.
ಬೀದಿ ನಾಯಿಗಳಿಗೆ ಆಹಾರ ನೀಡುವ ವಿಷಯವೂ ಇಂದ ಟ್ರೋಲಿಗರಿಗೆ ದೊಡ್ಡ ಆಹಾರವಾಗಿರುವುದೇ ವಿಶೇಷವಾಗಿದೆ.
ನಾಯಿಗಳಿಗೆ ಚಿಕನ್ ಅಂತಹ ಆಹಾರ ಹಾಕಬೇಕು ಎನ್ನುವುದರ ಪರ ವಿರೋಧದ ಚರ್ಚೆಯೂ ಆಗಿದೆ. ಈ ಬಗ್ಗೆ ಕೆಲವು ಟ್ರೋಲ್‌ಗಳು, ಮಿಮ್‌ಗಳು ಇಲ್ಲಿವೆ..
ಬಿಬಿಎಂಪಿ ನಿರ್ಧಾರ ಏನು?
ಬೀದಿ ನಾಯಿಗಳಿಗೆ ಯಾವ ರೀತಿಯ ಆಹಾರವನ್ನು ಯಾವ ಸಮಯದಲ್ಲಿ ನೀಡಬೇಕೆಂದು ನಿಗದಿಪಡಿಸಿರುವ ಬಿಬಿಎಂಪಿ ಪಶುಸಂಗೋಪನೆ ವಿಭಾಗ, ಪ್ರತಿ ವರ್ಷ ಅಂದಾಜು ₹2.88 ಕೋಟಿ ವೆಚ್ಚದಲ್ಲಿ ಬೀದಿ ನಾಯಿಗಳಿಗೆ ಆಹಾರ ನೀಡಲು ಟೆಂಡರ್ ಆಹ್ವಾನಿಸಿದೆ.
ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದಲ್ಲಿ (ಎಫ್‌ಎಸ್ ಎಸ್‌ಎಐ) ನೋಂದಣಿಯಾಗಿರುವ ಸಂಸ್ಥೆ ಅಥವಾ ಏಜೆನ್ಸಿಗಳು ಟೆಂಡರ್‌ನಲ್ಲಿ ಭಾಗವಹಿಸಬಹುದು. ಯಾವುದೇ ರೀತಿಯ ಕೃತಕ ಬಣ್ಣ ಬಳಸಬಾರದು. ತಾಜಾ ಹಾಗೂ ಸ್ವಚ್ಛವಾಗಿ ಆಹಾರ ವನ್ನು ತಯಾರಿಸಬೇಕು. ಬಿಬಿಎಂಪಿ ಒದಗಿಸಿರುವ ಆಹಾರ ಯೋಜನೆ ಯಂತೆಯೇ ಆಹಾರ ತಯಾರಿಸಬೇಕು. ತಯಾರಿಸಿದ ಆಹಾರವನ್ನು ಸತತ ಎರಡು ದಿನ ಬೀದಿ ನಾಯಿಗಳು ತಿನ್ನದಿದ್ದರೆ ಆಹಾರವನ್ನು ಬದಲಿಸಬೇಕು. ಅಡುಗೆ ಮನೆಯಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು ಎಂಬ ಷರತ್ತುಗಳನ್ನು ವಿಧಿಸಲಾಗಿದೆ.
ಒಂದೇ ಅಡುಗೆ ಮನೆಯಲ್ಲಿ ಆಹಾರ ತಯಾರಿಸಿ, ವಿತರಿಸಬೇಕು. ನಿತ್ಯ 11 ಗಂಟೆಗೆ ಬೀದಿ ನಾಯಿಗಳಿಗೆ ಆಹಾರ ನೀಡಬೇಕು. ಆಹಾರ ಕೊಂಡೊಯ್ಯುವ ವಾಹನಕ್ಕೆ ಜಿಪಿಎಸ್ ಅಳವಡಿಸಿರಬೇಕು ಮತ್ತು ವಾಹನದ ಮೇಲೆ ಬಿಬಿಎಂಪಿ ಹಾಗೂ ಸಂಬಂಧಪಟ್ಟ ಎನ್‌ಜಿಒಗಳ ಮಾಹಿತಿ ಪ್ರಕಟಿಸಬೇಕು ಎಂದು ಜುಲೈ 17ರಂದು ತೆರೆಯಲಾಗುವ ಟೆಂಡರ್ ದಾಖಲೆಗಳಲ್ಲಿ ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.