ಬಿಬಿಎಂಪಿ ಕೇಂದ್ರ ಕಚೇರಿ
ಬೆಂಗಳೂರು: ಬಿಬಿಎಂಪಿಯನ್ನು 2025ರಲ್ಲಿ ಕ್ಷಯಮುಕ್ತವನ್ನಾಗಿಸಲು ಎಲ್ಲರೂ ಶ್ರಮವಹಿಸಿ ಕಾರ್ಯನಿರ್ವಹಿಸಬೇಕು ಎಂದು ಮುಖ್ಯ ಆರೋಗ್ಯಾಧಿಕಾರಿ ಡಾ. ಸೈಯದ್ ಸಿರಾಜುದ್ದಿನ್ ಮದನಿ ಹೇಳಿದರು.
ವಿಶ್ವ ಕ್ಷಯ ರೋಗ ದಿನಾಚರಣೆ ಅಂಗವಾಗಿ ಪಾಲಿಕೆಯ ಆರೋಗ್ಯ ವಿಭಾಗದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಕ್ಷಯ ರೋಗ (ಟಿಬಿ) ನಿರ್ಮೂಲನೆ ಆರೋಗ್ಯ ಸಿಬ್ಬಂದಿಯಿಂದ ಮಾತ್ರ ಸಾಧ್ಯವಿಲ್ಲ. ನಾಗರಿಕರು ಕೈ ಜೋಡಿಸಿದರೆ ಮಾತ್ರ ತ್ವರಿತಗತಿಯಲ್ಲಿ ಕ್ಷಯ ರೋಗವನ್ನು ನಿರ್ಮೂಲನೆ ಮಾಡಬಹುದು’ ಎಂದರು.
‘ನಾಗರಿಕರಿಗೆ ಕ್ಷಯ ರೋಗದ ಕುರಿತು ಹೆಚ್ಚು ಜಾಗೃತಿ ಮೂಡಿಸುವ ಕೆಲಸ ಮಾಡಬೇಕು. ಕ್ಷಯರೋಗ ಬಂದವರು ಔಷಧಗಳನ್ನು ಸರಿಯಾಗಿ ತೆಗೆದುಕೊಂಡರೆ ಮಾತ್ರ ನಿರ್ಮೂಲನೆ ಆಗಲು ಸಾಧ್ಯ. ಆದ್ದರಿಂದ ಕ್ಷಯ ರೋಗ ಬಂದವರು ಆರು ತಿಂಗಳು ಔಷಧಗಳನ್ನು ತಪ್ಪದೆ ಪಡೆದುಕೊಳ್ಳಬೇಕು. ಈ ಸಂಬಂಧ ನಾಗರಿಕರಲ್ಲಿ ಹೆಚ್ಚು ಅರಿವು ಮೂಡಿಸುವ ಕೆಲಸ ಮಾಡಬೇಕು’ ಎಂದು ಹೇಳಿದರು.
ಬಿಬಿಎಂಪಿ ವ್ಯಾಪ್ತಿಯಲ್ಲಿ ಕ್ಷಯ ರೋಗ ನಿರ್ಮೂಲನೆಯು ನಿರೀಕ್ಷೆಗೂ ಮೀರಿ ನಿಯಂತ್ರಣಕ್ಕೆ ಬಂದಿದೆ. ಅದರ ಮೇಲೆ ಮತ್ತಷ್ಟು ಪರಿಣಾಮಕಾರಿಯಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
2024ರ ಡಿಸೆಂಬರ್ 7ರಿಂದ 2025ರ ಮಾರ್ಚ್ 18ರವರೆಗೆ ಆಯೋಜಿಸಲಾಗಿದ್ದ ಕ್ಷಯ ರೋಗ– 100 ದಿನದ ಅಭಿಯಾನದಲ್ಲಿ ಒಟ್ಟು 13.13 ಲಕ್ಷ ಜನರನ್ನು ಪರೀಕ್ಷಿಸಲಾಗಿದೆ. 4,010 ಜನರಲ್ಲಿ ಕ್ಷಯರೋಗ ದೃಢಪಟ್ಟಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಕ್ಷಯರೋಗ ಪ್ರಮಾಣ (2023ರಲ್ಲಿ 15,543 ಪ್ರಕರಣ–2024ರಲ್ಲಿ 14,059 ಪ್ರಕರಣ) ಮತ್ತು ಮರಣ ಪ್ರಮಾಣ (2023ರಲ್ಲಿ 750 ಸಾವು– 2024ರಲ್ಲಿ 702 ಮರಣ) ಕಡಿಮೆಯಾಗಿದೆ ಎಂದು ಮಾಹಿತಿ ನೀಡಿದರು.
ಟಿಬಿ ಕಾರ್ಯಕ್ರಮ ಅಧಿಕಾರಿ ಡಾ. ಸುರೇಶ್, ಆರೋಗ ಸಿಬ್ಬಂದಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.