ಇ.ಡಿ
ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನೀಡುವ ಟಿಡಿಆರ್ (ವರ್ಗಾಯಿಸಬಹುದಾದ ಅಭಿವೃದ್ಧಿ ಹಕ್ಕು) ಹಗರಣಕ್ಕೆ ಸಂಬಂಧಿಸಿದಂತೆ ಟಿಡಿಎಆರ್ ಬ್ರೋಕರ್‌ಗಳು ಮತ್ತು ನಕಲಿ ಮಾಲೀಕರಿಗೆ ಸೇರಿದ ₹4.06 ಕೋಟಿ ಮೌಲ್ಯದ ಜಮೀನು ಮತ್ತು ಫ್ಲ್ಯಾಟ್‌ಗಳನ್ನು ಜಾರಿ ನಿರ್ದೇಶನಾಲಯ (ಇ.ಡಿ) ತಾತ್ಕಾಲಿಕವಾಗಿ ಜಪ್ತಿ ಮಾಡಿದೆ.
ಟಿಡಿಆರ್ ಹಗರಣ ಸಂಬಂಧ ಮೇ 23ರಂದು ಇ.ಡಿ. ಅಧಿಕಾರಿಗಳು ನಗರದ ವಾಲ್ಮಾರ್ಕ್ ರಿಯಾಲ್ಟಿ ಹೋಲ್ಡಿಂಗ್ಸ್ ಪ್ರೈ.ಲಿ.(ವಿಆರ್‌ಎಚ್‌ಪಿಎಲ್) ಕಚೇರಿ, ಅದರ ನಿರ್ದೇಶಕರು ಮತ್ತು ಕೆಲ ಬಿಲ್ಡರ್‌ಗಳು, ಬ್ರೋಕರ್‌ಗಳು, ನಕಲಿ ಟಿಡಿಆರ್ ಅರ್ಜಿದಾರರ ಮನೆಗಳು ಸೇರಿ 9 ಕಡೆ ಏಕಕಾಲಕ್ಕೆ ದಾಳಿ ನಡೆಸಿ, ಶೋಧ ಕೈಗೊಂಡು ಮಹತ್ವದ ದಾಖಲೆಗಳನ್ನು ಜಪ್ತಿ ಮಾಡಿದ್ದರು. ಇದೀಗ ಆರೋಪಿಗಳ ಸ್ಥಿರಾಸ್ತಿಗಳನ್ನು ಜಪ್ತಿ ಮಾಡಿದ್ದಾರೆ.
2009–15ರ ಅವಧಿಯಲ್ಲಿ ಬಿಬಿಎಂಪಿ/ಬಿಡಿಎ ವ್ಯಾಪ್ತಿಯಲ್ಲಿ ನಡೆದಿದ್ದ ಟಿಡಿಆರ್ ಹಗರಣ ಸಂಬಂಧ ಈ ಹಿಂದೆ ಇದ್ದ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ದಲ್ಲಿ ಎಫ್‌ಐಆರ್ ದಾಖಲಾಗಿತ್ತು. ವಿಆರ್‌ಎಚ್‌ಪಿಎಲ್ ಕಂಪನಿಯು ಟಿಡಿಆರ್ ಪಡೆದು ಬಳಿಕ ಅದನ್ನು ರಿಯಲ್ ಎಸ್ಟೇಟ್ ಕಂಪನಿಗಳು ಮತ್ತು ಖಾಸಗಿ ವ್ಯಕ್ತಿಗಳಿಗೆ ಮಾರಾಟ ಮಾಡಿ ಸುಮಾರು ₹27.68 ಕೋಟಿ ಲಾಭ ಮಾಡಿಕೊಂಡಿದ್ದು ಎಸಿಬಿ ತನಿಖೆ ವೇಳೆ ಗೊತ್ತಾಗಿತ್ತು.
ಈ ಪ್ರಕರಣ ಆಧರಿಸಿ ಇ.ಡಿ ಅಧಿಕಾರಿಗಳು ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯಡಿ (ಪಿಎಂಎಲ್‌ಎ) ಪ‍್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದರು. ಹಗರಣದಲ್ಲಿ ಬಿಬಿಎಂಪಿ ಅಧಿಕಾರಿಗಳು, ಡೆವಲಪರ್‌ಗಳು, ಬ್ರೋಕರ್‌ಗಳು ಭಾಗಿಯಾಗಿರುವುದು ತನಿಖೆಯಲ್ಲಿ ಬಯಲಾಗಿತ್ತು. ಇದರ ಆಧಾರದ ಮೇಲೆ ಇ.ಡಿ. ಅಧಿಕಾರಿಗಳು ನಗರದ ವಿವಿಧೆಡೆ ದಾಳಿ ನಡೆಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.