ADVERTISEMENT

ಇನ್ನೂ ಟೆಂಡರ್ ಆಹ್ವಾನಿಸಿಯೇ ಇಲ್ಲ: ಟಿಇಸಿ

ಬಳ್ಳಾರಿ ರಸ್ತೆಯಲ್ಲಿ ಕಾಮಗಾರಿ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2021, 16:07 IST
Last Updated 14 ಆಗಸ್ಟ್ 2021, 16:07 IST

ಬೆಂಗಳೂರು: ‘15ನೇ ಹಣಕಾಸಿನ ಅಡಿಯಲ್ಲಿ ರಸ್ತೆ ದುರಸ್ತಿಗೆ ₹13 ಕೋಟಿ ವೆಚ್ಚವಾಗುವ ಕಾಮಗಾರಿ ಇನ್ನೂ ಟೆಂಡರ್‌ ಕರೆಯುವ ಹಂತದಲ್ಲಿದೆ. ಸಕ್ಷಮ ಪ್ರಾಧಿಕಾರದಿಂದ ಇದಕ್ಕೆ ಅನುಮೋದನೆ ಮಾತ್ರ ಪಡೆದುಕೊಳ್ಳಲಾಗಿದೆ’ ಎಂದು ಬಿಬಿಎಂಪಿ ರಸ್ತೆ ಮೂಲಸೌಕರ್ಯದ ಸಂಚಾರಿ ಎಂಜಿನಿಯರಿಂಗ್ ಕೋಶದ (ಟಿಇಸಿ) ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಟೆಂಡರ್ ಕರೆಯದೇ ಪೂರ್ವ ನಿಗದಿತ ಗುತ್ತಿಗೆದಾರರಿಗೆ ಈ ಕಾಮಗಾರಿ ವಹಿಸಲಾಗಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಟಿಇಸಿಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಅಶೋಕ್ ಬಾಗಿ ಅವರು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.

‘₹13 ಕೋಟಿಯ ಕಾಮಗಾರಿಯನ್ನು ಇನ್ನೂ ಕೈಗೆತ್ತಿಕೊಂಡಿಲ್ಲವೆಂದ ಮೇಲೆ ಕಳಪೆ ಕಾಮಗಾರಿಯ ಪ್ರಶ್ನೆಯೇ ಉದ್ಭವಿಸುವುದಿಲ್ಲ’ ಎಂದೂ ಅವರು ಹೇಳಿದ್ದಾರೆ.

ADVERTISEMENT

‘ಈ ಮೊತ್ತದಲ್ಲಿ ಬಳ್ಳಾರಿ ರಸ್ತೆಯಲ್ಲಿ ದುರಸ್ತಿ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ. ಆದರೆ, ಐಟಿಸಿ ಮತ್ತು ಬೆಳ್ಳಂದೂರು ಮೇಲ್ಸೇತುವೆ ನಿರ್ವಹಣೆ ಕಾಮಗಾರಿಯ ಅನುದಾನದಲ್ಲಿ ಉಳಿದಿರುವ ಹಣದಿಂದ ಬಳ್ಳಾರಿ ರಸ್ತೆ ದುರಸ್ತಿ ಕಾಮಗಾರಿ ನಡೆಸಲಾಗಿದೆ. ಇದಕ್ಕೆ ಸಕ್ಷಮ ಪ್ರಾಧಿಕಾರದಿಂದ ಅನುಮೋದನೆ ಪಡೆದುಕೊಂಡು, ಕೆಆರ್‌ಐಡಿಎಲ್‌ ಸಂಸ್ಥೆಯ ವತಿಯಿಂದಲೇ ನಿರ್ವಹಿಸಲಾಗಿದೆ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಟೆಂಡರ್ ಕರೆಯದೇ ಪೂರ್ವನಿಗದಿತ ಗುತ್ತಿಗೆದಾರರಿಂದ ಕಾಮಗಾರಿ ನಡೆಸಿ, ಕೋಟ್ಯಂತರ ರೂಪಾಯಿ ವಂಚಿಸಲಾಗಿದೆ ಎಂದು ಆರೋಪಿಸಿ, ಬಿಜೆಪಿಯ ಬೆಂಗಳೂರು ದಕ್ಷಿಣ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಆರ್. ರಮೇಶ್‌ ಅವರು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.