ADVERTISEMENT

ಕೋವಿಡ್‌: ಶೇ 20ರಷ್ಟು ಹಾಸಿಗೆ ಮಾತ್ರ ಸರ್ಕಾರಿ ಕೋಟಾಕ್ಕೆ

ಹಾಸಿಗೆಗಳನ್ನು ಆಸ್ಪತ್ರೆಗಳಿಗೆ ಬಿಟ್ಟುಕೊಡಲು ಬಿಬಿಎಂಪಿ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 10 ಜೂನ್ 2021, 19:19 IST
Last Updated 10 ಜೂನ್ 2021, 19:19 IST
ಹಾಸಿಗೆಗಳನ್ನು ಆಸ್ಪತ್ರೆಗಳಿಗೆ ಬಿಟ್ಟುಕೊಡಲು ಬಿಬಿಎಂಪಿ ನಿರ್ಧಾರ
ಹಾಸಿಗೆಗಳನ್ನು ಆಸ್ಪತ್ರೆಗಳಿಗೆ ಬಿಟ್ಟುಕೊಡಲು ಬಿಬಿಎಂಪಿ ನಿರ್ಧಾರ   

ಬೆಂಗಳೂರು: ನಗರದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಕಡಿಮೆ ಆಗಿರುವುದರಿಂದ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್‌ ರೋಗಿಗಳ ಚಿಕಿತ್ಸೆಗೆ ಸರ್ಕಾರಿ ಕೋಟಾದಡಿ ಗೊತ್ತುಪಡಿಸಲಾದ ಸ್ವಲ್ಪ ಹಾಸಿಗೆಗಳನ್ನು ಬಿಟ್ಟುಕೊಡಲು ಬಿಬಿಎಂಪಿ ನಿರ್ಧರಿಸಿದೆ.

ಇದುವರೆಗೆ ಚಾಲ್ತಿಯಲ್ಲಿದ್ದ ನಿಯಮದ ಪ್ರಕಾರ ಎಲ್ಲ ಖಾಸಗಿ ಆಸ್ಪತ್ರೆಗಳು ಶೇ 50ರಷ್ಟು ಹಾಗೂ ಖಾಸಗಿ ವೈದ್ಯಕೀಯ ಕಾಲೇಜುಗಳು ಶೇ 75ರಷ್ಟು ಹಾಸಿಗೆಗಳನ್ನು ಸರ್ಕಾರಿ ಕೋಟಾದಡಿ ಚಿಕಿತ್ಸೆಗೆ ಮೀಸಲಿಡಬೇಕಿತ್ತು.

‘ಇನ್ನು ಸಾಮಾನ್ಯ ಹಾಸಿಗೆಗಳಲ್ಲಿ ಶೇ 20ರಷ್ಟನ್ನು ಮಾತ್ರ ಸರ್ಕಾರಿ ಕೋಟಾದಡಿ ಉಳಿಸಿಕೊಂಡು ಉಳಿದವನ್ನು ಆಸ್ಪತ್ರೆಯವರಿಗೆ ಬಿಟ್ಟುಕೊಡಲಿದ್ದೇವೆ. ತೀವ್ರ ನಿಗಾ ಘಟಕಗಳಲ್ಲೂ ಈಗ ಸಾಕಷ್ಟು ಹಾಸಿಗೆಗಳು ಲಭ್ಯ ಇವೆ. ಅವುಗಳೆಲ್ಲವೂ ಈಗ ನಮಗೆ ಅಗತ್ಯ ಇಲ್ಲ. ಅವುಗಳಲ್ಲೂ ಸ್ವಲ್ಪ ಪ್ರಮಾಣದ ಹಾಸಿಗೆಗಳನ್ನು ಆಸ್ಪತ್ರೆಯವರಿಗೆ ಮರಳಿಸಬಹುದು. ಯಾವೆಲ್ಲ ಹಾಸಿಗೆಗಳನ್ನು ಉಳಿಸಿಕೊಳ್ಳಬೇಕು ಎಂಬ ಬಗ್ಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಜೊತೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳುತ್ತೇವೆ’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ ಗುಪ್ತ ಸುದ್ದಿಗಾರರಿಗೆ ತಿಳಿಸಿದರು.

ADVERTISEMENT

‘ಕೋವಿಡ್‌ ಎರಡನೇ ಅಲೆ ಎದುರಿಸಲು ವ್ಯವಸ್ಥೆ ಮಾಡಿರುವ ಆರೋಗ್ಯ ಮೂಲಸೌಕರ್ಯಗಳನ್ನು ಮುಂದುವರಿಸುತ್ತೇವೆ.ಮೂರನೇ ಅಲೆ ಎದುರಾದರೆ ಅವುಗಳ ಅಗತ್ಯ ಬೀಳಲಿದೆ. ಅಗತ್ಯ ಬಿದ್ದರೆ ಇನ್ನಷ್ಟು ಆರೋಗ್ಯ ಮೂಲಸೌಕರ್ಯವನ್ನು ಸೇರ್ಪಡೆಗೊಳಿಸುತ್ತೇವೆ’ ಎಂದರು.

ಕೋವಿಡ್‌: ಸಾವಿನ ಸಂಖ್ಯೆ ಇಳಿಕೆ

ಮೂರು ದಿನಗಳಿಂದ ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್‌ನಿಂದ ಸತ್ತವರ ಸಂಖ್ಯೆಯೂ ಗಣನೀಯ ಇಳಿಕೆ ಕಂಡಿದೆ. ಕಳೆದ ವಾರದವರೆಗೂ ದಿನಕ್ಕೆ 200ಕ್ಕೂ ಅಧಿಕ ಮಂದಿ ಕೊರೊನಾದಿಂದ ಸಾವಿಗೀಡಾಗುತ್ತಿದ್ದರು. ಕೋವಿಡ್‌ ಸಾವಿನ ದರ ಶೇ 7.89ರವರೆಗೂ ಏರಿಕೆ ಕಂಡಿತ್ತು. ಮೂರು ದಿನಗಳಿಂದ ಕೋವಿಡ್‌ನಿಂದ ಸತ್ತವರ ಸಂಖ್ಯೆ 50 ದಾಟಿಲ್ಲ. ಸಾವಿನ ದರವೂ ಶೇ 5.38ಕ್ಕೆ ಇಳಿಕೆ ಕಂಡಿದೆ.

‘ನಗರದಲ್ಲಿ ಕೋವಿಡ್‌ನಿಂದ ಸಾಯುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಹಾಗಾಗಿ, ತೆರೆದ ಪ್ರದೇಶಗಳಲ್ಲಿ ತಾತ್ಕಾಲಿಕ ನೆಲೆಯಲ್ಲಿ ಸ್ಥಾಪಿಸಿರುವ ಸ್ಮಶಾನಗಳನ್ನು ಸ್ಥಗಿತಗೊಳಿಸಿದ್ದೇವೆ. ಕೋವಿಡ್‌ನಿಂದ ಸತ್ತವರ ಅಂತ್ಯಕ್ರಿಯೆ ಚಿತಾಗಾರಗಳಲ್ಲಿ ಮುಂದುವರಿಯಲಿವೆ’ ಎಂದು ಗೌರವ್‌ ಗುಪ್ತ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.