ADVERTISEMENT

ಕಸ: ಬಿಲ್‌ ಸಲ್ಲಿಸದವರಿಗೆ ನೋಟಿಸ್‌

ಐದು ತಿಂಗಳಿನಿಂದ ಬಿಲ್‌– ದಾಖಲೆ ಸಲ್ಲಿಸದ ತ್ಯಾಜ್ಯ ವಿಲೇವಾರಿ ಗುತ್ತಿಗೆದಾರರು

ಆರ್. ಮಂಜುನಾಥ್
Published 17 ಸೆಪ್ಟೆಂಬರ್ 2025, 19:04 IST
Last Updated 17 ಸೆಪ್ಟೆಂಬರ್ 2025, 19:04 IST
–
   

ಬೆಂಗಳೂರು: ಎರಡು ವರ್ಷಗಳ ಹಿಂದೆ ಪೂರ್ಣಗೊಂಡಿರುವ ಕಾಮಗಾರಿಗಳಿಗೆ ಬಿಲ್‌ ಪಾವತಿ ಮಾಡಿ ಎಂದು ಗುತ್ತಿಗೆದಾರರು ಒಂದೆಡೆ ಒತ್ತಾಯಿಸುತ್ತಿದ್ದರೆ, ಮತ್ತೊಂದೆಡೆ ಐದು ತಿಂಗಳುಗಳಿಂದ ಬಿಲ್‌ ಸಲ್ಲಿಸದ ತ್ಯಾಜ್ಯ ಗುತ್ತಿಗೆದಾರರಿಗೆ ನೋಟಿಸ್‌ ಜಾರಿಯಾಗಿದೆ.

ತ್ಯಾಜ್ಯ ವಿಲೇವಾರಿ ಮಾಡಿರುವ ಬಿಲ್‌ ಸಲ್ಲಿಸುವಂತೆ ಗುತ್ತಿಗೆದಾರರಿಗೆ ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತ (ಬಿಎಸ್‌ಡಬ್ಲ್ಯುಎಂಎಲ್‌) ನೋಟಿಸ್‌ ಜಾರಿ ಮಾಡಿದೆ.

‘ಘನತ್ಯಾಜ್ಯ ಸಂಗ್ರಹಣೆ ಮತ್ತು ಸಾಗಣೆ ಸರಬರಾಜುದಾರರು, ಗುತ್ತಿಗೆದಾರರು, ಪ್ರಸಕ್ತ ಆರ್ಥಿಕ ವರ್ಷದ ಏಪ್ರಿಲ್‌ನಿಂದ ಆಗಸ್ಟ್‌ವರೆಗೆ ಘನತ್ಯಾಜ್ಯ ಸಂಗ್ರಹ, ಸಾಗಣೆ ಬಿಲ್‌ಗಳನ್ನು ಪಾವತಿಸಿಲ್ಲ. ಬಿಲ್‌ ಜೊತೆಗೆ ಪೂರಕ ದಾಖಲೆಗಳನ್ನು ಕೂಡಲೇ ಸಲ್ಲಿಸಬೇಕು. ಬಿಲ್‌ ಸಲ್ಲಿಸಿದ ನಂತರ ನಿಯಮಾನುಸಾರ ಹಣ ಪಾವತಿಸಲು ಕ್ರಮ ವಹಿಸಲಾಗುವುದು’ ಎಂದು 28 ಗುತ್ತಿಗೆದಾರರಿಗೆ ಬಿಎಸ್‌ಡಬ್ಲ್ಯುಎಂಎಲ್‌ನ ಆಯಾ ವಿಭಾಗದ ಸಹಾಯಕ ಪ್ರಧಾನ ವ್ಯವಸ್ಥಾಪಕರು ಸೆ.11ರಂದು ನೋಟಿಸ್‌ ಜಾರಿ ಮಾಡಿದ್ದಾರೆ.

ADVERTISEMENT

ಇನ್ನಷ್ಟು ಸಮಸ್ಯೆ: ‘ಐದು ತಿಂಗಳುಗಳಿಂದ ಎಲ್ಲ ಮಾಹಿತಿಗಳನ್ನು ಒಳಗೊಂಡ ಬಿಲ್‌ಗಳನ್ನು ಸಲ್ಲಿಸಲಾಗಿದೆ. ಆದರೂ ನೋಟಿಸ್‌ ಜಾರಿ ಮಾಡಿದ್ದಾರೆ. ಭವಿಷ್ಯ ನಿಧಿ (ಪಿಎಫ್‌) ಪಾವತಿಯಲ್ಲಿ ಸಮಸ್ಯೆ ಇದ್ದರೆ, ಅವರು ಹೇಳಿದ ಹಾಗೆ ನಾವು ಮಾಡುತ್ತೇವೆ.  ಐದು ತಿಂಗಳುಗಳಿಂದ ಎಲ್ಲ ಕೆಲಸಗಾರರ ಪಿಎಫ್‌, ಇಪಿಎಫ್‌ ಪಾವತಿಸುತ್ತಿದ್ದೇವೆ. ಒಂದೆರಡು ತಿಂಗಳು ವೇತನವನ್ನೂ ನೀಡಿದ್ದೇವೆ. ಸಂಕಷ್ಟದಲ್ಲಿರುವ ನಮಗೆ ಬಿಎಸ್‌ಡಬ್ಲ್ಯುಎಂಎಲ್‌ನವರು ಇನ್ನಷ್ಟು ಸಮಸ್ಯೆ ನೀಡುತ್ತಿದ್ದಾರೆ’ ಎಂದು ತ್ಯಾಜ್ಯ ಗುತ್ತಿಗೆದಾರ ಸಿ.ವಿ. ರಜನಿಕಾಂತ್‌ ರೆಡ್ಡಿ ಹೇಳಿದರು.

ಶೀಘ್ರ ಸಲ್ಲಿಕೆ: ‘ಏಪ್ರಿಲ್‌ನಿಂದ ಕೆಲಸಗಾರರು ಹಾಗೂ ಆಟೊಗಳ ಹಾಜರಾತಿ ಮಾಹಿತಿಯನ್ನು ಬಿಎಸ್‌ಡಬ್ಲ್ಯುಎಂಎಲ್‌ನವರು ನೀಡಿಲ್ಲ. ಹೀಗಾಗಿ, ಬಿಲ್‌ ಸಲ್ಲಿಕೆ ವಿಳಂಬವಾಗಿದೆ. ನೋಟಿಸ್‌ ಬಂದಮೇಲೆ ಎಲ್ಲ ದಾಖಲೆಗಳನ್ನು ಪಡೆಯುತ್ತಿದ್ದು, ಶೀಘ್ರವೇ ಸಲ್ಲಿಸಲಾಗುವುದು’ ಎಂದು ಅನ್ನಪೂರ್ಣೇಶ್ವರಿ ಅಸೋಸಿಯೇಟ್ಸ್‌ನ ರೂಪೇಶ್‌ ಮಾಹಿತಿ ನೀಡಿದರು.

‘ಎರಡು ಮೂರು ವಾರ್ಡ್‌ಗಳಲ್ಲಿ ಒಂದೇ ಕೆಲಸಗಾರರ ಹಾಜರಾತಿಯನ್ನು ತೋರಿಸಿ ಬಿಲ್ ಸಲ್ಲಿಕೆಯಾಗಿರುವುದು ಬಿಎಸ್‌ಡಬ್ಲ್ಯುಎಂಎಲ್‌ ಅಧಿಕಾರಿಗಳ ಕೂಲಂಕಷ ಪರಿಶೀಲನೆಯಿಂದ ತಿಳಿದುಬಂದಿದೆ. ಅದಕ್ಕಾಗಿ, ನೌಕರರಿಗೆ ಪಾವತಿಸಿರುವ ಹಣದ ಮಾಹಿತಿ, ಖಾತಾ ವಿವರವನ್ನು ನೀಡುವಂತೆ ಹೇಳಲಾಗಿದೆ. ನಿಖರ ಮಾಹಿತಿ ಕೇಳಿರುವುದರಿಂದ ಬಿಲ್‌ ಸಲ್ಲಿಕೆಯಲ್ಲಿ ವಿಳಂಬವಾಗುತ್ತಿದೆ’ ಎಂದು ಮೂಲಗಳು ತಿಳಿಸಿವೆ.

ಎಲ್ಲ ದಾಖಲೆಗಳೂ ಲಭ್ಯ: ಕರೀಗೌಡ

‘ತ್ಯಾಜ್ಯ ಗುತ್ತಿಗೆದಾರರಿಗೆ ಅಗತ್ಯವಾಗಿರುವ ಹಾಜರಾತಿಯನ್ನು ವಾರ್ಡ್‌ ಮಟ್ಟದಲ್ಲೇ ತಿಂಗಳಾಂತ್ಯದಲ್ಲಿ ಒದಗಿಸಲಾಗಿದೆ. ವಾಹನಗಳ ಹಾಜರಾತಿಯ (ಆರ್‌ಎಫ್‌ಐಡಿ) ಮಾಹಿತಿಯನ್ನೂ ನೀಡಲಾಗಿದೆ. ಕಳೆದ 15 ದಿನಗಳಿಂದ ಹೊಸ ಎಸ್ಒಪಿ ಜಾರಿಯಾಗಿದೆ. ಅದಕ್ಕೂ ಏಪ್ರಿಲ್‌ನಿಂದ ಬಾಕಿ ಉಳಿದಿರುವ ಬಿಲ್‌ ಸಲ್ಲಿಕೆಗೂ ಸಂಬಂಧ ಇಲ್ಲ. ತ್ಯಾಜ್ಯ ಗುತ್ತಿಗೆದಾರರು ಅಗತ್ಯ ದಾಖಲೆಗಳೊಂದಿಗೆ ಬಿಲ್ ಸಲ್ಲಿಕೆ ಮಾಡಿದರೆ ನಿಯಮಾನುಸಾರ ಹಣ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗುತ್ತದೆ. ಗುತ್ತಿಗೆದಾರರು– ಸ್ವಚ್ಛತೆ ಕೆಲಸ ನಿರ್ವಹಿಸುವವರಿಗೂ ಇದರಿಂದ ಅನುಕೂಲ ಆಗಲಿದೆ’ ಎಂದು ಬಿಎಸ್‌ಡಬ್ಲ್ಯುಎಂಎಲ್‌ ಸಿಇಒ ಕರೀಗೌಡ ಮಾಹಿತಿ ನೀಡಿದರು.

‘ಎಸ್‌ಒಪಿಯಿಂದ ಗೊಂದಲ

‘ಹೊಸ ಪ್ರಮಾಣಿತ ಕಾರ್ಯಾಚಾರಣಾ ವಿಧಾನದಿಂದ (ಎಸ್‌ಒಪಿ) ಗುತ್ತಿಗೆದಾರರಿಗೆ ಗೊಂದಲ ಉಂಟಾಗಿದೆ. ಹೀಗಾಗಿ ಬಿಲ್‌ ಸಲ್ಲಿಕೆ ವಿಳಂಬವಾಗಿದೆ. ಈ ಗೊಂದಲ ಪರಿಹರಿಸಲು ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಸಭೆ ಕರೆಯವಂತೆ ಬಿಎಸ್‌ಡಬ್ಲ್ಯುಎಂಎಲ್‌ನ  ವ್ಯವಸ್ಥಾಪಕ ನಿರ್ದೇಶಕರಿಗೆ ಎರಡು ಬಾರಿ ಪತ್ರ ಬರೆಯಲಾಗಿದೆ. ಆದರೂ ಕ್ರಮ ಕೈಗೊಳ್ಳದೆ ನೋಟಿಸ್‌ ಜಾರಿ ಮಾಡಿದ್ದಾರೆ’ ಎಂದು ಬೆಂಗಳೂರು ನಗರ ಸ್ವಚ್ಛತೆ ಮತ್ತು ಲಾರಿ ಮಾಲೀಕರು–ಗುತ್ತಿಗೆದಾರರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್‌.ಎನ್‌. ಬಾಲಸುಬ್ರಮಣಿಯಂ ತಿಳಿಸಿದರು.

‘ಏಪ್ರಿಲ್‌ನಿಂದ ಮಾಸಿಕ ಬಿಲ್‌ ಪಾವತಿಯಲ್ಲಿ ಆಗುತ್ತಿರುವ ವಿಳಂಬ ಮಾಸಿಕ ಬಿಲ್‌ ಪಾವತಿಸಲು ಹೆಚ್ಚುವರಿಯಾಗಿರುವ ಟೇಬಲ್‌ಗಳು ಇಎಸ್‌ಐ ಇಪಿಎಫ್‌ಗೆ ಸಂಬಂಧಿಸಿ ವಿಧಿಸುತ್ತಿರುವ ದಂಡ ಮತ್ತು ಬಡ್ಡಿ 2025ರ ಜನವರಿಗೂ ಹಿಂದಿನ ಬಿಲ್‌ ಪಾವತಿಯಲ್ಲಿ ಆಗುತ್ತಿರುವ ವಿಳಂಬ ನೌಕರರು ಬೆಳಿಗ್ಗೆ 5.30ಕ್ಕೆ ಕೆಲಸಕ್ಕೆ ಹಾಜರಾಗಲು ಅವಶ್ಯವಿರುವ ಸಾರ್ವಜನಿಕರ ಸಾರಿಗೆ ವ್ಯವಸ್ಥೆ ಬಗ್ಗೆ ಚರ್ಚೆ ನಡೆಸಿ ಪರಿಹಾರ ಕಲ್ಪಿಸಲು ಕೋರಲಾಗಿದೆ’ ಎಂದರು.

ಯಾವ ವಾರ್ಡ್‌ಗಳ ಗುತ್ತಿಗೆದಾರರಿಗೆ ನೋಟಿಸ್‌?

ಚೌಡೇಶ್ವರಿ ಯಲಹಂಕ ನ್ಯೂಟೌನ್‌ ಕೆಂಪೇಗೌಡ ಅಟ್ಟೂರು ಬೆನ್ನಿಗಾನಹಳ್ಳಿ ಸಿ.ವಿ. ರಾಮನ್‌ನಗರ ಹೊಸ ತಿಪ್ಪಸಂದ್ರ ಸರ್ವಜ್ಞನಗರ ಹೊಯ್ಸಳ ನಗರ ಜೀವನ್‌ ಬಿಮಾ ನಗರ ಕೊನೇನ ಅಗ್ರಹಾರ ಭಾರತಿ ನಗರ ಶಿವಾಜಿನಗರ ವಸಂತನಗರ ರಾಮಸ್ವಾಮಿ ಪಾಳ್ಯ ಜಯಮಹಲ್‌ ಸಂಪಂಗಿರಾಮನಗರ ಬಸವನಗುಡಿ ಹನುಮಂತನಗರ ಎಚ್‌ಎಸ್‌ಆರ್‌ ಲೇಔಟ್‌ ಬೊಮ್ಮನಹಳ್ಳಿ ಹೊಂಗಸಂದ್ರ ಮಂಗಮ್ಮನಪಾಳ್ಯ ಕೆ.ಆರ್‌. ಮಾರುಕಟ್ಟೆ ಜೆಜೆಆರ್‌ ನಗರ ಬೇಗೂರು ಸಿಂಗಸಂದ್ರ ಗೊಟ್ಟಿಗೆರೆ ಕೋಣನಕುಂಟೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.