ಬೆಂಗಳೂರು: ಕನ್ನಳ್ಳಿಯಲ್ಲಿ ತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸುವ ಘಟಕ ಸ್ಥಾಪಿಸಲು ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತ (ಬಿಎಸ್‌ಡಬ್ಲ್ಯುಎಂಎಲ್) ಅಧಿಕಾರಿಗಳೊಂದಿಗೆ ಕನ್ನಳ್ಳಿ ತ್ಯಾಜ್ಯ ಸಂಸ್ಕರಣೆ ಘಟಕಕ್ಕೆ ಗುರುವಾರ ಭೇಟಿ ನೀಡಿದ್ದ ಮಹೇಶ್ವರ್ ರಾವ್, ಈ ಘಟಕದಲ್ಲಿ 350 ಟನ್ ತ್ಯಾಜ್ಯ ಸಂಸ್ಕರಣೆ ಮಾಡಲಾಗುತ್ತಿದೆ. ಈ ಘಟಕವನ್ನು ಸತಾರಾಂ ಎಂಬ ಖಾಸಗಿ ಸಂಸ್ಥೆ ನಿರ್ವಹಿಸುತ್ತಿದೆ. ಇದನ್ನು ವಿದ್ಯುತ್ ಉತ್ಪಾದನಾ ಘಟಕವನ್ನಾಗಿ ಪರಿವರ್ತಿಸಲು ಯೋಜನೆ ರೂಪಿಸಬೇಕು ಎಂದು ಹೇಳಿದರು.
ಸೀಗೇಹಳ್ಳಿ ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ 120 ಟನ್ ತ್ಯಾಜ್ಯ ಸಂಸ್ಕರಿಸುವ ಸಾಮರ್ಥ್ಯವಿದ್ದು, ಐದು ಲಕ್ಷ ಟನ್ ಹಳೆಯ ತ್ಯಾಜ್ಯ ಇದೆ. ಇದನ್ನು ಟ್ರಾಮಲ್ ಯಂತ್ರ ಬಳಸಿ ಸಂಸ್ಕರಿಸಬೇಕು. ಈ ತ್ಯಾಜ್ಯದಿಂದ ಉತ್ಪಾದನೆಯಾಗುವ ಇಂಧನವು ಬಿಡದಿಯಲ್ಲಿರುವ ವಿದ್ಯುತ್ ಉತ್ಪಾದನಾ ಘಟಕಕ್ಕೆ ಪೂರೈಕೆಯಾಗುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.
ಸುಬ್ಬರಾಯನ ಪಾಳ್ಯ ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ 150 ಟನ್ ತ್ಯಾಜ್ಯ ಸಂಸ್ಕರಿಸಬಹುದು. ಆದರೆ, ಪ್ರತಿ ದಿನ 120 ಟನ್ ತ್ಯಾಜ್ಯ ಮಾತ್ರ ಸ್ವೀಕರಿಸಲಾಗುತ್ತಿದೆ. ಸಂಪೂರ್ಣ ಸಾಮರ್ಥ್ಯದಷ್ಟು ತ್ಯಾಜ್ಯ ಸಂಸ್ಕರಣೆಯಾಗಬೇಕು. ದುರಸ್ತಿ ಕಾರ್ಯವಿದ್ದರೆ ಅದನ್ನು ಸರಿಪಡಿಸಿಕೊಂಡು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುವಂತೆ ಮಾಡಬೇಕು. ಸ್ಥಳೀಯ ನಿವಾಸಿಗಳಿಗೆ ಯಾವುದೇ ರೀತಿಯ ದುರ್ವಾಸನೆ ಬಾರದಂತೆ ಔಷಧಿ ಸಿಂಪಡಣೆ ಮಾಡಿ, ವೈಜ್ಞಾನಿಕ ರೀತಿಯಲ್ಲಿ ಸಂಸ್ಕರಣೆ ಮಾಡಬೇಕು ಎಂದರು.
ನಾಗರಬಾವಿಯ ಟೀಚರ್ಸ್ ಕಾಲೊನಿಯಲ್ಲಿ ಮಳೆಗಾಲದ ವೇಳೆ ಪ್ರವಾಹ ಸಮಸ್ಯೆ ಎದುರಾಗುತ್ತಿದೆ. ಆ ಸಮಸ್ಯೆಯನ್ನು ಬಗೆಹರಿಸಬೇಕಾದರೆ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ ಆವರಣದಲ್ಲಿರುವ ಕಚ್ಚಾ ರಾಜಕಾಲುವೆಯನ್ನು ಪಕ್ಕಾ ರಾಜಕಾಲುವೆಯನ್ನಾಗಿ ಮಾಡಬೇಕಿದೆ. ಈ ಬಗ್ಗೆ ಕುಲಪತಿಯವರೊಂದಿಗೆ ಜಂಟಿ ಸಭೆ ನಡೆಸಿ, ಕ್ರಮ ಕೈಗೊಳ್ಳಬೇಕು ಎಂದು ಬಿಬಿಎಂಪಿ ಅಧಿಕಾರಿಗಳಿಗೆ ಸೂಚಿಸಿದರು.
ರಾಜಕಾಲುವೆ ವಿಭಾಗದ ಮುಖ್ಯ ಎಂಜಿನಿಯರ್ ರಾಜೇಶ್, ಬಿಎಸ್‌ಡಬ್ಲ್ಯುಎಂಎಲ್‌ನ ಉಪ ಪ್ರಧಾನ ವ್ಯವಸ್ಥಾಪಕ ಧಾನ್ ನಾಯ್ಕ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.