ADVERTISEMENT

ವಿಶ್ವೇಶ್ವರಯ್ಯ ಬಡಾವಣೆಯ ಆಸ್ಪತ್ರೆ ಸಿಎ ನಿವೇಶನ ನೋಂದಣಿಗೆ ಬಿಬಿಎಂಪಿ ನಿರ್ಲಕ್ಷ್ಯ

ಬಿಡಿಎ ಹಂಚಿಕೆ ಮಾಡಿರುವ ಸಿಎ ನಿವೇಶನಕ್ಕೆ 2024ರ ಜನವರಿಯಲ್ಲಿ ₹1.71 ಕೋಟಿ ಪಾವತಿ

ಆರ್. ಮಂಜುನಾಥ್
Published 21 ಜೂನ್ 2025, 1:05 IST
Last Updated 21 ಜೂನ್ 2025, 1:05 IST
ಬಿಡಿಎ ಸರ್‌ ಎಂ. ವಿಶ್ವೇಶ್ವರಯ್ಯ 2ನೇ ಬ್ಲಾಕ್‌ ಬಡಾವಣೆಯಲ್ಲಿ ಬಿಬಿಎಂಪಿಗೆ ಆಸ್ಪತ್ರೆಗಾಗಿ ಹಂಚಿಕೆಯಾಗಿರುವ ಸಿಎ ನಿವೇಶನ
ಬಿಡಿಎ ಸರ್‌ ಎಂ. ವಿಶ್ವೇಶ್ವರಯ್ಯ 2ನೇ ಬ್ಲಾಕ್‌ ಬಡಾವಣೆಯಲ್ಲಿ ಬಿಬಿಎಂಪಿಗೆ ಆಸ್ಪತ್ರೆಗಾಗಿ ಹಂಚಿಕೆಯಾಗಿರುವ ಸಿಎ ನಿವೇಶನ   

ಬೆಂಗಳೂರು: ಆಸ್ಪ‍ತ್ರೆ ನಿರ್ಮಿಸಲು ಬಿಡಿಎ ಹಂಚಿಕೆ ಮಾಡಿರುವ ನಾಗರಿಕ ಸೌಲಭ್ಯ (ಸಿಎ) ನಿವೇಶನಕ್ಕೆ ಗುತ್ತಿಗೆ ಮೊತ್ತ ಪಾವತಿಸಿ ಒಂದೂವರೆ ವರ್ಷವಾದರೂ ನೋಂದಣಿ ಮಾಡಿಸಿಕೊಳ್ಳಲು ಬಿಬಿಎಂಪಿ ನಿರ್ಲಕ್ಷ್ಯ ವಹಿಸಿದೆ.

ಸರ್‌ ಎಂ. ವಿಶ್ವೇಶ್ವರಯ್ಯ ಬಡಾವಣೆಯ 2ನೇ ಬ್ಲಾಕ್‌ನಲ್ಲಿ ಬಿಡಿಎ ಹಂಚಿಕೆ ಮಾಡಿದ್ದ ಸಿಎ ನಿವೇಶನಕ್ಕಾಗಿ ₹1.71 ಕೋಟಿಯನ್ನು ಬಿಬಿಎಂಪಿ  2024ರ ಜನವರಿ 17ರಂದು ಪಾವತಿಸಿದೆ. ಆದರೆ, ಬಿಬಿಎಂಪಿ ರಾಜರಾಜೇಶ್ವರಿ ನಗರ ವಲಯದ ಅಧಿಕಾರಿಗಳು ಈ ನಿವೇಶನ ನೋಂದಣಿ ಬಗ್ಗೆ ಈವರೆಗೂ ಕ್ರಮಕೈಗೊಂಡಿಲ್ಲ.

ಸಿಎ ನಿವೇಶನವನ್ನು 2011ರ ಜನವರಿ 6ರಂದು ಬಿಬಿಎಂಪಿಗೆ ಹಂಚಿಕೆ ಮಾಡಿ, ಬಿಡಿಎ ಪತ್ರವನ್ನು ನೀಡಿತ್ತು. ಇದಾಗಿ 11 ವರ್ಷವಾದರೂ ಬಿಬಿಎಂಪಿ ಕ್ರಮ ಕೈಗೊಂಡಿರಲಿಲ್ಲ. ಈ ಬಗ್ಗೆ ‘ಪ್ರಜಾವಾಣಿ’ಯಲ್ಲಿ 2022ರ ಅಕ್ಟೋಬರ್‌ 7ರಂದು ‘ಬಿಬಿಎಂಪಿ ಮರೆತ ಆಸ್ಪತ್ರೆ ನಿವೇಶನ’ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟವಾಗಿತ್ತು. ಇದಾದ ನಂತರ ಪ್ರಕ್ರಿಯೆ ಆರಂಭಿಸಿದ ಬಿಬಿಎಂಪಿ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರ ಮಧ್ಯಪ್ರವೇಶದ ನಂತರ 2024ರಲ್ಲಿ ಗುತ್ತಿಗೆ ಹಣ ಪಾವತಿಸಿತ್ತು.

ADVERTISEMENT

ಗುತ್ತಿಗೆ ಮೊತ್ತ ಪಾವತಿಸಿ ಒಂದೂವರೆ ವರ್ಷವಾದರೂ ನೋಂದಣಿ ಪ್ರಕ್ರಿಯೆಯನ್ನು ರಾಜರಾಜೇಶ್ವರಿ ನಗರ ವಲಯ ಆಯುಕ್ತರು, ಜಂಟಿ ಆಯುಕ್ತರು ನಡೆಸಿಲ್ಲ. 

ಖಾಸಗಿ ಒತ್ತಡಕ್ಕೆ ಮಣೆ: ‘ಕೆಂಗೇರಿ ಭಾಗದಲ್ಲಿ ಮಲ್ಟಿ ಸ್ಪೆಷಾಲಿಟಿ, ಹೆರಿಗೆ ಆಸ್ಪತ್ರೆಯ ಕೊರತೆ ಇದೆ. ಸುಮಾರು ಒಂದು ಎಕರೆ ನಿವೇಶನವಿದ್ದರೂ ಅದನ್ನು ನೋಂದಾಯಿಸಿಕೊಳ್ಳುತ್ತಿಲ್ಲ. ಖಾಸಗಿ ಆಸ್ಪತ್ರೆಗಳಿಗೆ ಮಣೆ ಹಾಕಿರುವ ಬಿಬಿಎಂಪಿ ಅಧಿಕಾರಿಗಳು, ಆಸ್ಪತ್ರೆ ನಿರ್ಮಾಣ ಪ್ರಕ್ರಿಯೆಯನ್ನು ಬೇಕೆಂದೇ ವಿಳಂಬ ಮಾಡುತ್ತಿದ್ದಾರೆ’ ಎಂದು ಜಯಪ್ರಕಾಶ್‌ ನಾರಾಯಣ್‌ ವಿಚಾರ ವೇದಿಕೆಯ ಶಿವಕುಮಾರ್‌ ದೂರಿದರು.

ಬಿಡಿಎ ಹಂಚಿಕೆ ಮಾಡಿರುವ ನಿವೇಶನಕ್ಕೆ ಬಿಬಿಎಂಪಿ ಗುತ್ತಿಗೆ ಹಣ ಪಾವತಿಸಲು ಅಧಿಕಾರಿಗಳು ಹಾಗೂ ಉಪ ಮುಖ್ಯಮಂತ್ರಿಯವರಿಗೆ ಶಾಸಕ ಎಸ್.ಟಿ. ಸೋಮಶೇಖರ್‌ ಪತ್ರ ಬರೆದು ಒತ್ತಡ ಹಾಕಿದ್ದರು. ಈಗ ನಿವೇಶನವನ್ನು ನೋಂದಣಿ ಮಾಡಿಕೊಳ್ಳಿ ಎಂದು ಅಧಿಕಾರಿಗಳಿಗೆ ಹೇಳುತ್ತಲೇ ಇದ್ದಾರೆ. ಆದರೆ, ಅಧಿಕಾರಿಗಳು ನೋಂದಣಿ ಪ್ರಕ್ರಿಯೆಯನ್ನು ಆರಂಭಿಸಿಲ್ಲ.

ಶುಲ್ಕ ಕಟ್ಟಲು ಅನುಮತಿ: ಸತೀಶ್‌

‘ಬಿಡಿಎ ಹಂಚಿಕೆ ಮಾಡಿರುವ ಸಿಎ ನಿವೇಶನದ ಬಗ್ಗೆ ನಮಗೆ ಮಾಹಿತಿ ಇರಲಿಲ್ಲ. ಶಾಸಕ ಎಸ್‌.ಟಿ. ಸೋಮಶೇಖರ್‌ ಅವರು ಇತ್ತೀಚಿನ ಸಭೆಯೊಂದರಲ್ಲಿ ಈ ಬಗ್ಗೆ ಗಮನ ಸೆಳೆದಿದ್ದರು. ಈ ವಿಷಯದ ಬಗ್ಗೆ ಪರಿಶೀಲಿಸಲಾಗಿದೆ. ಆಸ್ಪತ್ರೆ ನಿವೇಶನದ ನೋಂದಣಿಗೆ ನೋಂದಣಿ ಶುಲ್ಕ ಹಾಗೂ ಇತರೆ ವೆಚ್ಚಗಳನ್ನು ಯಾವ ‘ಲೆಕ್ಕ ಶೀರ್ಷಿಕೆ’ಯಿಂದ ನೀಡಬೇಕೆಂಬ ಗೊಂದಲವಿತ್ತು. ಅದನ್ನು ಪರಿಹರಿಸಿ ವೆಚ್ಚ ಭರಿಸಲು ಕಳೆದ ವಾರ ಅನುಮತಿ ನೀಡಲಾಗಿದೆ. ಜಂಟಿ ಆಯುಕ್ತರು ಹಾಗೂ ಸಹಾಯಕ ಕಂದಾಯ ಅಧಿಕಾರಿಗಳು ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ’ ಎಂದು ಬಿಬಿಎಂಪಿ ರಾಜರಾಜೇಶ್ವರಿ ನಗರ ವಲಯದ ಆಯುಕ್ತ ಸತೀಶ್‌ ಮಾಹಿತಿ ನೀಡಿದರು. ರಾಜರಾಜೇಶ್ವರಿ ನಗರದ ಜಂಟಿ ಆಯುಕ್ತರು ಪ್ರತಿಕ್ರಿಯೆಗೆ ಲಭ್ಯರಾಗಲಿಲ್ಲ.

ಆಸ್ಪತ್ರೆಗಳು ಆರೋಗ್ಯ ಇಲಾಖೆಗೆ: ಸುರಳ್ಕರ್‌ ವಿಕಾಸ್‌ ಕಿಶೋರ್

‘ನಿವೇಶನ ನೋಂದಣಿ ಪ್ರಕ್ರಿಯೆಗಳನ್ನು ಆಯಾ ವಲಯ ಅಧಿಕಾರಿಗಳೇ ಪೂರ್ಣಗೊಳಿಸಬೇಕು. ಬಿಬಿಎಂಪಿ ವಶಕ್ಕೆ ನಿವೇಶನ ಬಂದ ಮೇಲೆ ಅದನ್ನು ಆರೋಗ್ಯ ವಿಭಾಗಕ್ಕೆ ತೆಗೆದುಕೊಂಡು ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುತ್ತದೆ. ಈ ನಡುವೆ ಬಿಬಿಎಂಪಿ ನಿರ್ಮಿಸಿರುವ ಎಲ್ಲ ಬೃಹತ್‌ ಆಸ್ಪತ್ರೆಗಳನ್ನು ಆರೋಗ್ಯ ಇಲಾಖೆಗೆ ಹಸ್ತಾಂತರಿಸುವ ಪ್ರಸ್ತಾವವಿದೆ. ವೈದ್ಯರು ಹಾಗೂ ಸಿಬ್ಬಂದಿ ಕೊರತೆಯಿಂದ ಹಲವು ಬೃಹತ್‌ ಆಸ್ಪತ್ರೆಗಳಲ್ಲಿ ಸೌಲಭ್ಯ ನೀಡಲಾಗುತ್ತಿಲ್ಲ. ಹೀಗಾಗಿ ಆರೋಗ್ಯ ಇಲಾಖೆಗೆ ಹಸ್ತಾಂತರಿಸಲು ತೀರ್ಮಾನಿಸಿದ್ದು ಸರ್ಕಾರ ಈ ಬಗ್ಗೆ ಮುಂದಿನ ಕ್ರಮ ಕೈಗೊಳ್ಳಲಿದೆ’ ಎಂದು ಬಿಬಿಎಂಪಿ ಆರೋಗ್ಯ ಮತ್ತು ನೈರ್ಮಲ್ಯ ವಿಭಾಗದ ವಿಶೇಷ ಆಯುಕ್ತ ಸುರಳ್ಕರ್‌ ವಿಕಾಶ್‌ ಕಿಶೋರ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.