ADVERTISEMENT

ಕೋನದಾಸಪುರದಲ್ಲಿ 52 ಎಕರೆ ವಾಣಿಜ್ಯ ಭೂಮಿ ಹರಾಜು: ಬಿಡಿಎಗೆ ₹2,097 ಕೋಟಿ ಸಂಗ್ರಹ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2026, 18:25 IST
Last Updated 2 ಫೆಬ್ರುವರಿ 2026, 18:25 IST
ಬಿಡಿಎ
ಬಿಡಿಎ   

ಬೆಂಗಳೂರು: ಹಳೆ ಮದ್ರಾಸ್ ರಸ್ತೆ ಸಮೀಪದ ಕೋನದಾಸಪುರದಲ್ಲಿರುವ 52 ಎಕರೆ ವಾಣಿಜ್ಯ ಭೂಮಿ ಹರಾಜು ಮೂಲಕ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ₹2,097 ಕೋಟಿ ಸಂಗ್ರಹಿಸಿದೆ.

ಮೂಲ ಅಂದಾಜಿಗಿಂತ ₹468 ಕೋಟಿಯಷ್ಟು ಹೆಚ್ಚು ಆದಾಯ ತಂದುಕೊಟ್ಟಿದ್ದು, ಇ–ಹರಾಜು 20ಕ್ಕೂ ಹೆಚ್ಚು ಸುತ್ತುಗಳವರೆಗೆ ಮುಂದುವರಿಯಿತು. ಪ್ರಮುಖ ಕಂಪನಿಗಳ ಪ್ರತಿನಿಧಿಗಳು ಬಿಡ್ಡಿಂಗ್‌ಗೆ ಪೈಪೋಟಿ ನಡೆಸಿದ್ದು ಕಂಡು ಬಂತು. 

ಬ್ರಿಗೇಡ್ ಗ್ರೂಪ್ ಮತ್ತು ಗೋದ್ರೆಜ್ ಪ್ರಾಪರ್ಟೀಸ್ ಸೇರಿ ಒಟ್ಟು ಐದು ಬಿಡ್ಡರ್‌ಗಳು ಹರಾಜಿನಲ್ಲಿ ಭಾಗವಹಿಸಿದ್ದರು. ಈ ಜಾಗದ ಒಂದು ಬದಿಯಲ್ಲಿ 80 ಅಡಿ ಅಗಲದ ರಸ್ತೆ ಇದ್ದು, ಮತ್ತೊಂದು ಬದಿಯಲ್ಲಿ ಹೊಸಕೋಟೆ–ವೈಟ್‌ಫೀಲ್ಡ್ ರಸ್ತೆ ಇದೆ. ಅಂತಿಮವಾಗಿ ಹೈದರಾಬಾದ್‌ನ ಶ್ರೀನಿ ನಿರ್ಮಾಣ್ ಪ್ರೈವೇಟ್ ಲಿಮಿಟೆಡ್ ₹2,097 ಕೋಟಿಯನ್ನು ಉಲ್ಲೇಖಿಸಿತು. ಅಂದರೆ ಪ್ರತಿ ಎಕರೆಗೆ ₹40.13 ಕೋಟಿಯಾಗಿದೆ.

ADVERTISEMENT

ಎರಡು ದಶಕಗಳ ಹಿಂದೆ ಸ್ಟೀಲ್ ಯಾರ್ಡ್ ಸ್ಥಾಪಿಸಲು ಬಿಡಿಎ ಪ್ರಸ್ತಾಪಿಸಿತ್ತು. ಆದರೆ, ಯಾರೂ ಆಸಕ್ತಿ ತೋರಿಸದ ಕಾರಣ 52 ಎಕರೆ ಜಮೀನು, ಪ್ರಾಧಿಕಾರ ನೇರ ಬಿಡ್ಡಿಂಗ್‌ಗಾಗಿ ಪಟ್ಟಿ ಮಾಡಿದ ಮೂರು ಆಸ್ತಿಗಳಲ್ಲಿ ಒಂದಾಗಿದೆ. ಕೋನದಾಸಪುರದಲ್ಲೇ ಇರುವ ಇನ್ನೂ ಎರಡು ಸಣ್ಣ ಜಾಗಗಳು 2.19 ಎಕರೆ ಮತ್ತು 1.31 ಎಕರೆ ನೀರಿನ ಪ್ರದೇಶಕ್ಕೆ ಹೊಂದಿಕೊಂಡಿರುವ ಕಾರಣ ಬಿಡ್ಡರ್‌ಗಳನ್ನು ಆಕರ್ಷಿಸುವಲ್ಲಿ ವಿಫಲವಾದವು.

2026ನೇ ಹಣಕಾಸು ವರ್ಷದ ಅಂತ್ಯದೊಳಗೆ ವಿವಿಧ ಕ್ರಮಗಳ ಮೂಲಕ ಕನಿಷ್ಠ ₹10,000 ಕೋಟಿ ಸಂಗ್ರಹಿಸುವ ಗುರಿಯನ್ನು ಪ್ರಾಧಿಕಾರ ಹೊಂದಿದೆ. ಇದರಲ್ಲಿ ದೊಡ್ಡ ಪ್ರಮಾಣದ ಭೂಮಿ ಮತ್ತು ವಸತಿ ನಿವೇಶನಗಳ ಇ-ಹರಾಜು, ಡಾ. ಶಿವರಾಮ ಕಾರಂತ ಬಡಾವಣೆಗೆ ಸಲ್ಲಿಸಿದ ಅರ್ಜಿಗಳ ಮೂಲಕ ಸಂಗ್ರಹಿಸಿದ ಠೇವಣಿಗಳು, ಫ್ಲ್ಯಾಟ್‌ಗಳು, ವಿಲ್ಲಾಗಳು ಹಾಗೂ ಸಿ.ಎ ಸೈಟ್‌ಗಳ ಮಾರಾಟ  ಒಳಗೊಂಡಿದೆ. 

ಈ ಹಣವನ್ನು ಬಳಸಿಕೊಂಡು, ಉತ್ತರ ಮತ್ತು ಪೂರ್ವ ಬೆಂಗಳೂರಿನಲ್ಲಿ ಆರು ವಸತಿ ಬಡಾವಣೆಗಳ ನಿರ್ಮಾಣ ಹಾಗೂ ಹೆಬ್ಬಾಳದಲ್ಲಿ ಅಂದಾಜು ₹ 2,215 ಕೋಟಿ ವೆಚ್ಚದಲ್ಲಿ 2.1 ಕಿ.ಮೀ ಉದ್ದದ ಸಣ್ಣ ಸುರಂಗ ಮಾರ್ಗ ನಿರ್ಮಾಣ ಸೇರಿದಂತೆ ಹಲವು ಮೂಲಸೌಕರ್ಯ ಯೋಜನೆಗಳನ್ನು ಬಿಡಿಎ ಪ್ರಸ್ತಾಪಿಸಿದೆ.

‘ಬಿಡ್ಡಿಂಗ್‌ನಲ್ಲಿ ಪಾರದರ್ಶಕತೆ ಖಚಿತಪಡಿಸಿ ಹಾಗೂ ಇ-ಹರಾಜಿನ ಬಗ್ಗೆ ವ್ಯಾಪಕ ಪ್ರಚಾರ ನೀಡುವ ಮೂಲಕ ಪ್ರಮುಖ ಕಂಪನಿಗಳು ಭಾಗವಹಿಸಲು ಪ್ರೋತ್ಸಾಹಿಸಲಾಗಿದೆ. ಅದರ ಫಲಿತಾಂಶ ಎಲ್ಲರಿಗೂ ಗೋಚರಿಸುತ್ತದೆ. ಈ ಹಣವನ್ನು ಬಳಸಿಕೊಳ್ಳಲು ಸರ್ಕಾರದ ಅನುಮೋದನೆ ಪಡೆಯಲಾಗುವುದು’ ಎಂದು ಬಿಡಿಎ ಅಧಿಕಾರಿಯೊಬ್ಬರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.