ADVERTISEMENT

‘ಅಗತ್ಯಕ್ಕಿಂತ ಹೆಚ್ಚು ನೀರಿನ ಸುಂಕ ವಸೂಲಿ ವಿರುದ್ಧ ಅಭಿಯಾನ’

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2021, 13:30 IST
Last Updated 30 ಆಗಸ್ಟ್ 2021, 13:30 IST
ಫ್ಲ್ಯಾಟ್‌ಗಳು–ಸಾಂದರ್ಭಿಕ ಚಿತ್ರ
ಫ್ಲ್ಯಾಟ್‌ಗಳು–ಸಾಂದರ್ಭಿಕ ಚಿತ್ರ   

ಬೆಂಗಳೂರು: ಜಲಮಂಡಳಿಯು (ಬಿಡಬ್ಲ್ಯುಎಸ್‌ಎಸ್‌ಬಿ) ಬಹುಮಹಡಿ ಕಟ್ಟಡಗಳಲ್ಲಿ ವಾಸಿಸುತ್ತಿರುವವರಿಂದ ಅಗತ್ಯಕ್ಕಿಂತಲೂ ಅಧಿಕ ನೀರಿನ ಸುಂಕ ವಸೂಲಿ ಮಾಡುತ್ತಿದೆ ಎಂದು ಆರೋಪಿಸಿ ಕಲ್ಲಹಳ್ಳಿಯ ಬಿಡಿಎ ಫ್ಲ್ಯಾಟ್‌ ಮಾಲೀಕರು ಹಾಗೂ ಹಂಚಿಕೆದಾರರ ಸಂಘವು ಅಭಿಯಾನ ಆರಂಭಿಸಿದೆ.

ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಫ್ಲ್ಯಾಟ್‌ ಮಾಲೀಕರು ‘ನಾಲ್ಕು ಅಂತಸ್ತಿಗಿಂತಲೂ ಕಡಿಮೆ ಇರುವ ಕಟ್ಟಡಗಳಲ್ಲಿ ವಾಸಿಸುವವರಿಂದ ಪ್ರತಿ 1,000 ಲೀಟರ್‌ಗೆ ₹22 ಶುಲ್ಕವನ್ನಷ್ಟೇ ಪಡೆಯಬೇಕೆಂಬ ನಿಯಮವಿದೆ. ಇದರ ಪ್ರಕಾರ ವ್ಯಕ್ತಿಯೊಬ್ಬರು ತಿಂಗಳಿಗೆ 15,000 ಲೀಟರ್‌ ನೀರು ಬಳಸಿದರೆ ಅವರಿಗೆ ₹133 ಶುಲ್ಕ ವಿಧಿಸಬೇಕು. ಆದರೆ ಜಲಮಂಡಳಿಯು ₹330 ಶುಲ್ಕ ಪಡೆಯುತ್ತಿದೆ’ ಎಂದುಆರೋಪಿಸಿದರು.

‘ನಾಲ್ಕಕ್ಕಿಂತ ಅಧಿಕ ಅಂತಸ್ತಿನ ಕಟ್ಟಡಗಳಲ್ಲಿ ವಾಸಿಸುವವರಿಂದ ಪಡೆಯುವಷ್ಟು ಶುಲ್ಕವನ್ನು ನಮ್ಮಿಂದಲೂ ಪಡೆಯುತ್ತಿರುವುದು ಎಷ್ಟು ಸರಿ. ಇದರಿಂದ ಮಧ್ಯಮ ವರ್ಗದ ಜನರ ಮೇಲೆ ಹೊರೆ ಬೀಳುತ್ತಿದೆ. ನೆಲಮಹಡಿಯಿಂದ ಫ್ಲ್ಯಾಟ್‌ಗಳಿಗೆ ನೀರು ಸಾಗಿಸಲು ಅಗತ್ಯವಿರುವ ಪೈಪ್‌ಲೈನ್‌ ವ್ಯವಸ್ಥೆಯನ್ನೂ ನಾವೇ ಮಾಡಿಕೊಳ್ಳಬೇಕಾಗಿದೆ. ಅದಕ್ಕೆ ಪ್ರತ್ಯೇಕವಾಗಿ ಹಣ ನೀಡಬೇಕಾಗುತ್ತದೆ. ಕೇರಳ, ಚೆನ್ನೈ, ಮುಂಬೈಗೆ ಹೋಲಿಸಿದರೆ ನಮ್ಮಲ್ಲಿ ಪಡೆಯುತ್ತಿರುವ ಶುಲ್ಕ ದುಬಾರಿ. ಇದಕ್ಕೆ ಕಡಿವಾಣ ಹಾಕಬೇಕು’ ಎಂದು ಒತ್ತಾಯಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.