ADVERTISEMENT

ಬಿಡಿಎ ಅಕ್ರಮ ದಾಖಲೆ ಸೃಷ್ಟಿ: ಅಧಿಕಾರಿಗಳೂ ಶಾಮೀಲು

ಬಿಡಿಎ ನಿವೇಶನ ಹಂಚಿಕೆ ಪತ್ರ, ಸ್ವಾಧೀನ ಪತ್ರ ಸೃಷ್ಟಿಸುತ್ತಿದ್ದ ನಾಲ್ವರು ಸಿಬ್ಬಂದಿ ಸೇರಿ ಐವರು ಪೊಲೀಸ್‌ ವಶಕ್ಕೆ * ಉಪಕಾರ್ಯದರ್ಶಿಯೂ ಭಾಗಿ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2020, 22:07 IST
Last Updated 4 ಡಿಸೆಂಬರ್ 2020, 22:07 IST
ಇಂದ್ರ ಕುಮಾರ್‌
ಇಂದ್ರ ಕುಮಾರ್‌   

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನಿವೇಶನದಾರರಿಗೆ ನೀಡುವ ಹಂಚಿಕೆ ಪತ್ರ, ಸ್ವಾಧೀನ ಪತ್ರ, ಖಚಿತ ಅಳತೆ ವರದಿ, ಆಯುಕ್ತರ ಲೆಟರ್‌ಹೆಡ್‌ ಸೇರಿದಂತೆ ಹಲವಾರು ದಾಖಲೆಗಳನ್ನು ಬಿಡಿಎ ಅಧಿಕಾರಿಗಳು ಖಾಸಗಿ ವ್ಯಕ್ತಿಗಳ ಜೊತೆ ಸೇರಿ ಅಕ್ರಮವಾಗಿ ಸೃಷ್ಟಿಸುತ್ತಿದ್ದ ಜಾಲವನ್ನು ಪ್ರಾಧಿಕಾರದ ಜಾಗೃತ ದಳ ಭೇದಿಸಿದೆ.

ಸುಮಾರು 200 ಕೋಟಿಗೂ ಅಧಿಕ ಮೌಲ್ಯದ ಬಿಡಿಎ ಆಸ್ತಿ ಲಪಾಟಾಯಿಸಲು ನಡೆದಿದ್ದ ಸಂಚನ್ನು ಬಯಲುಗೊಳಿಸಿದೆ. ಉಪಕಾರ್ಯದರ್ಶಿ ದರ್ಜೆಯ ಅಧಿಕಾರಿಯೂ ಈ ಕೃತ್ಯದಲ್ಲಿ ಶಾಮೀಲಾಗಿರುವುದು ಬಿಡಿಎ ಸಿಬ್ಬಂದಿ ವಲಯದ ಅಚ್ಚರಿಗೆ ಕಾರಣವಾಗಿದೆ.

ಬಿಡಿಎ ಉಪಕಾರ್ಯದರ್ಶಿ–3 ಶಿವೇಗೌಡ, ಅವರ ಕಚೇರಿ ಮೇಲ್ವಿಚಾರಕಿ ಕಮಲಮ್ಮ, ಕಚೇರಿಯ ವಿಷಯ ನಿರ್ವಾಹಕ ಸಂಪತ್‌, ಟಿಡಿಆರ್‌ ವಿಭಾಗದಲ್ಲಿ ಕಾರ್ಯ ‌ನಿರ್ವಹಿಸುತ್ತಿದ್ದ ಪ್ರಥಮ ದರ್ಜೆ ಸಹಾಯಕಿ ಪವಿತ್ರಾ ಹಾಗೂಕನ್ನಿಂಗ್‌ಹ್ಯಾಂ ರಸ್ತೆ ಬಳಿಯ ‘ರೇಧನ್ ದಿ ಸಿನಿಮಾ ಪೀಪಲ್‌ ಸಂಸ್ಥೆಯ ಮಾಲೀಕ ಇಂದ್ರ ಕುಮಾರ್‌ ಆರೋಪಿಗಳು. ಶೇಷಾದ್ರಿಪುರ ಠಾಣೆಯಲ್ಲಿ ಈ ಕೃತ್ಯದ ಬಗ್ಗೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ADVERTISEMENT

ನಡೆದದ್ದೇನು

ಬಿಡಿಎಗೆ ಸಂಬಂಧಿಸಿದ ದಾಖಲೆಗಳನ್ನು ‘ರೇಧನ್’ ಕಚೇರಿಯಲ್ಲಿ ಅಕ್ರಮವಾಗಿ ಸೃಷ್ಟಿಸುತ್ತಿರುವ ಬಗ್ಗೆ ಆಯುಕ್ತ ಎಸ್‌.ಆರ್‌.ಮಹದೇವ್‌ ಅವರಿಗೆ ವ್ಯಕ್ತಿಯೊಬ್ಬರು 15 ದಿನಗಳ ಹಿಂದೆ ಮಾಹಿತಿ ನೀಡಿದ್ದರು. ಈ ಬಗ್ಗೆ ಆಯುಕ್ತರು ಬಿಡಿಎ ಜಾಗೃತ ದಳದ ಪೊಲೀಸ್‌ ವರಿಷ್ಠಾಧಿಕಾರಿ ಶಿವಕುಮಾರ್‌ ಗುನಾರೆ ಅವರನ್ನು ಕರೆದು ಸಮಾಲೋಚನೆ ನಡೆಸಿದ್ದರು. ಈ ಕೃತ್ಯದಲ್ಲಿ ಭಾಗಿಯಾಗಿರುವ ಬಿಡಿಎ ಸಿಬ್ಬಂದಿಯ ಚಲನವಲನದ ಮೇಲೆ ಜಾಗೃತ ದಳದ ಸಿಬ್ಬಂದಿ ಎರಡು ವಾರಗಳಿಂದ ಕಣ್ಣಿಟ್ಟಿದ್ದರು. ಈ ಬಗ್ಗೆ ವಿಡಿಯೊ ಹಾಗೂ ಛಾಯಾಚಿತ್ರದ ದಾಖಲೆಗಳನ್ನು ಗುಪ್ತವಾಗಿ ಕಲೆ ಹಾಕಿದ್ದರು.

ಶಿವಕುಮಾರ್‌ ಗುನಾರೆ ನೇತೃತ್ವದಲ್ಲಿ ಶುಕ್ರವಾರ ರೇಧನ್‌ ಕಚೇರಿ ಮೇಲೆ ದಾಳಿ ನಡೆಸಲಾಯಿತು. ಅದೇ ವೇಳೆ ಇಂದ್ರ ಕುಮಾರ್‌ ಹಾಗೂ ಅವರ ಸಿಬ್ಬಂದಿಯ ರಾಜು ಎಂಬವರ ಮನೆಗೂ ದಾಳಿ ನಡೆಸಲಾಯಿತು. ಅಲ್ಲೂ ನಕಲಿ ದಾಖಲೆಗಳು ಸಿಕ್ಕವು. ಬಿಡಿಎ ಕಚೇರಿಯಲ್ಲಿದ್ದ ಇತರ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆಯಲಾಯಿತು.

ದಾಳಿ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿದ ಬಿಡಿಎ ಆಯುಕ್ತ ಎಚ್‌.ಆರ್‌.ಮಹದೇವ್‌, ‘ಆರೋಪಿಗಳು ರೇಧನ್ ಸಂಸ್ಥೆ ಕಚೇರಿಯನ್ನು ಬಿಡಿಎ ಶಾಖಾ ಕಚೇರಿ ತರಹ ಮಾಡಿಕೊಂಡಿದ್ದರು. ಕೊಳೆಗೇರಿ ನಿವಾಸಿಗಳಿಗೆ ನಿವೇಶನ ಹಂಚಿಕೆ ಮಾಡುವ ಬಗ್ಗೆ ಬಿಡಿಎ ಆಡಳಿತ ಮಂಡಳಿ ಸಭೆಯಲ್ಲಿ ಕೈಗೊಂಡ ನಿರ್ಣಯವನ್ನು ಆಧಾರವಾಗಿಟ್ಟುಕೊಂಡು ಆರೋಪಿಗಳು ಸೇರಿ ನಕಲಿ ಹಂಚಿಕೆ ಪತ್ರ ಸಿದ್ಧಪಡಿಸಿದ್ದರು. ದಾಳಿ ವೇಳೆ 60 ನಿವೇಶನಗಳ ಹಂಚಿಕೆ ಪತ್ರ ಪತ್ತೆಯಾಗಿದೆ. ಅವುಗಳ ಮೌಲ್ಯವೇ ಮೇಲ್ನೋಟಕ್ಕೆ ₹200 ಕೋಟಿಗಿಂತ ಹೆಚ್ಚು ಆಗಲಿದೆ’ ಎಂದರು.

‘ಪೊಲೀಸರು ನಡೆಸುವ ತನಿಖೆ ಆಧರಿಸಿ ಬಿಡಿಎ ಸಿಬ್ಬಂದಿಗೂ ಶಿಕ್ಷೆ ಆಗಲಿದೆ. ಅವರೆಲ್ಲರೂ ಅಮಾನತು ಆಗುವುದಂತೂ ಖಚಿತ. ಈ ಪ್ರಕರಣದ ಬಗ್ಗೆ ಶೀಘ್ರವೇ ಸರ್ಕಾರಕ್ಕೆ ವರದಿ ಸಲ್ಲಿಸಿ ಮುಂದಿನ ಕ್ರಮ ಕೈಗೊಳ್ಳಲಿದ್ದೇವೆ’ ಎಂದು ಮಹದೇವ್‌ ಮಾಹಿತಿ ನೀಡಿದರು.

ಮಹದೇವ್‌ ಅವರು ಆಯುಕ್ತರಾದ ಬಳಿಕ ಬಿಡಿಎ ಅಕ್ರಮಗಳನ್ನು ಒಂದೊಂದಾಗಿ ಪತ್ತೆ ಹಚ್ಚಿ ಕ್ರಮ ಕೈಗೊಳ್ಳುತ್ತಿದ್ದಾರೆ. ಕೆಲ ತಿಂಗಳ ಹಿಂದಷ್ಟೇ ಉಪಕಾರ್ಯದರ್ಶಿ ರಾಜು ಸೇರಿ ಐವರು ಸಿಬ್ಬಂದಿ ಅಮಾನತಾಗಿದ್ದರು. ಈಗ ಉಪಕಾರ್ಯದರ್ಶಿ 3 ಅವರ ವಿರುದ್ಧವೂ ಕ್ರಮವಾದರೆ ಈ ಎರಡು ಪ್ರಮುಖ ಹುದ್ದೆಗಳಲ್ಲಿದ್ದ ಅಧಿಕಾರಿಗಳ ವಿರುದ್ಧವೂ ಕ್ರಮಕೈಗೊಂಡಂತಾಗಲಿದೆ.

ಎಚ್ಚರಿಕೆ ನೀಡಿದ್ದ ಆಯುಕ್ತರು

ಬಿಡಿಎ ಅಧಿಕಾರಿಗಳು ನಡೆಸುತ್ತಿರುವ ಭಾರಿ ಸಂಚನ್ನು ಬಯಲುಗೊಳಿಸುವ ಬಗ್ಗೆ ಸಭೆಯೊಂದರಲ್ಲೆ ಆಯುಕ್ತರು ಮುನ್ಸೂಚನೆ ನೀಡಿದ್ದರು. ‘ಅಧಿಕಾರಿಗಳೇ ಸೇರಿ ಬಿಡಿಎ ಕೆಚ್ಚಲು ಕೊಯ್ಯುವ ಕೆಲಸ ಮಾಡುತ್ತಿದ್ದೀರಿ. ಭ್ರಷ್ಟ ಅಧಿಕಾರಿಗಳನ್ನು ಮಟ್ಟಹಾಕುವುದು ಶತಸ್ಸಿದ್ದ’ ಎಂದು ಗುಡುಗಿದ್ದರು.

***

ರಹಸ್ಯ ಕಾರ್ಯಾಚರಣೆ

ಅಕ್ರಮದ ಬಗ್ಗೆ ಮೊದಲೇ ಮಾಹಿತಿ ಇತ್ತಾದರೂ ಕಾರ್ಯಾಚರಣೆಯನ್ನು ರಹಸ್ಯವಾಗಿಡಲಾಗಿತ್ತು. ಬಿಡಿಎ ಆಯುಕ್ತರು ನಗರ ಪೊಲೀಸ್‌ ಕಮಿಷನರ್‌ ಕಮಲ್‌ ಪಂತ್‌ ಅವರನ್ನು ಗುರುವಾರ ಭೇಟಿ ಮಾಡಿ ಚರ್ಚಿಸಿದ್ದರು. ಜಾಗೃತ ದಳದ ಎಸ್‌ಪಿ ಶಿವಕುಮಾರ್‌, ಡಿವೈಎಸ್‌ಪಿ ಬಾಲಕೃಷ್ಣ ಹಾಗೂ ಡಿಸಿಪಿ ದರ್ಜೆ ಅಧಿಕಾರಿ ಸೇರಿ ಕಾರ್ಯಾಚರಣೆಯ ರೂಪರೇಷೆ ಸಿದ್ಧಪಡಿಸಿದ್ದರು. ಇದಕ್ಕಾಗಿ ಎಂಟು ತಂಡಗಳನ್ನು ರಚಿಸಲಾಗಿತ್ತು. ರೇಧನ್‌ ಕಚೇರಿಗೆ ದಾಳಿ ನಡೆಸಿದ ಸಂದರ್ಭದಲ್ಲೇ ಆರೋಪಿಗಳ ಮನೆಗೂ ದಾಳಿ ನಡೆಸಲಾಗಿತ್ತು.

ಬಿಡಿಎ ಸಿಬ್ಬಂದಿ ಕಚೇರಿ ಅವಧೀಯ ಬಳಿಕ ರೇಧನ್‌ ಕಚೇರಿಗೆ ತೆರಳಿ ನಕಲಿ ದಾಖಲೆ ಸೃಷ್ಟಿಗೆ ನೆರವಾಗುತ್ತಿದ್ದರು. ಈ ಬಗ್ಗೆ ಮಾಹಿತಿ ಕಲೆ ಹಾಕಲು ಜಾಗೃತ ದಳಎರಡು ವಾರಗಳಿಂದ ಅವರನ್ನು ಹಿಂಬಾಲಿಸಿತ್ತು. ಜಾಗೃತ ದಳದ ವರಿಷ್ಠಾಧಿಕಾರಿಯೂ ಖಾಸಗಿ ಕಾರಿನಲ್ಲೇ ಓಡಾಡಿ ಇವರ ಮೇಳೆ ಕಣ್ಣಿಟ್ಟಿದ್ದರು. ಜಾಗೃತ ದಳದಲ್ಲಿ ಅನೇಕ ವರ್ಷಗಳಿಂದ ನಿಯೋಜನೆ ಮೇರೆಗೆ ಇರುವ ಮಂಜು, ನಾಗೇಂದ್ರ, ಮಧು ಅವರು ಮಾಹಿತಿ ಕಲೆ ಹಾಕುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎನ್ನಲಾಗಿದೆ.

***

ಈ ಪ್ರಕರಣದ ಆರೋಪಿಗಳಿಗೆ ಕಠಿಣ ಶಿಕ್ಷೆ ನಿಶ್ಚಿತ. ಈ ಪ್ರಕರಣದ ಬಯಲಿಗೆ ಬಂದಿದ್ದರಿಂದ ಬಿಡಿಎ ಕಾರ್ಯವೈಖರಿಯಲ್ಲಿ ಮಹತ್ತರ ಬದಲಾಣೆ ಆಗಲಿದೆ.

-ಎಚ್‌.ಆರ್‌.ಮಹದೇವ್‌, ಬಿಡಿಎ ಆಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.