ADVERTISEMENT

ಬಿಡಿಎ ಅಕ್ರಮ: ನೌಕರರು ಸೇರಿ ಆರು ಮಂದಿ ಬಂಧನ

​ಪ್ರಜಾವಾಣಿ ವಾರ್ತೆ
Published 27 ಜನವರಿ 2022, 21:31 IST
Last Updated 27 ಜನವರಿ 2022, 21:31 IST

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ನಿವೇಶನಗಳನ್ನು ನಕಲಿ ದಾಖಲೆ ಸೃಷ್ಟಿಸಿ ಮಾರಿ ವಂಚಿಸುತ್ತಿದ್ದ ಆರೋಪದಡಿ, ಪ್ರಾಧಿಕಾರದ ನೌಕರರು ಸೇರಿ ಆರು ಮಂದಿಯನ್ನು ಶೇಷಾದ್ರಿಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ದ್ವಿತೀಯ ದರ್ಜೆ ಸಹಾಯಕ (ಎಸ್‌ಡಿಎ) ಲೋಹಿತ್ (32), ಕಂಪ್ಯೂಟರ್ ಆಪರೇಟರ್ ಸುನೀಲ್ (28), ಮಧ್ಯವರ್ತಿಗಳಾದ ವಿಕ್ರಮ್ ಜೈನ್, ಪವನ್, ಮಂಜು ನಾಯಕ್ ಹಾಗೂ ರಾಮಚಂದ್ರ ಬಂಧಿತರು. ಬಿಡಿಎ ನಿವೇಶನ ವಂಚನೆ ಸಂಬಂಧ ಇತ್ತೀಚೆಗೆ ಪ್ರತ್ಯೇಕ ಎಫ್‌ಐಆರ್‌ಗಳು ದಾಖಲಾಗಿದ್ದವು. ಅದರ ತನಿಖೆ ಕೈಗೊಂಡು ಪುರಾವೆಗಳನ್ನು ಸಂಗ್ರಹಿಸಿ ಆರೋಪಿಗಳನ್ನು ಸೆರೆಹಿಡಿಯಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಬಿಡಿಎ ವತಿಯಿಂದ ಎಚ್‌ಬಿಆರ್ ಬಡಾವಣೆ, ವಿಶ್ವೇಶ್ವರಯ್ಯ ಬಡಾವಣೆ, ಕೆಂಪೇಗೌಡ ಬಡಾವಣೆ ಹಾಗೂ ಇತರೆಡೆ ನಿವೇಶನಗಳನ್ನು ಅಭಿವೃದ್ಧಿಪಡಿಸಲಾಗಿದೆ. ನಿವೇಶನಗಳು ಮುಂಜೂರಾಗದಿದ್ದರೂ ಭೋಗ್ಯ ಮತ್ತು ಖರೀದಿ ಕರಾರು ಪತ್ರವನ್ನು ಆರೋಪಿಗಳು ನಕಲಿಯಾಗಿ ಸೃಷ್ಟಿಸುತ್ತಿದ್ದರು. ಅದೇ ನಿವೇಶನವನ್ನು ಅಕ್ರಮವಾಗಿ ಮಾರಾಟ ಮಾಡಿ ಹಣ ಸಂಪಾದಿಸುತ್ತಿದ್ದರು.‘

ADVERTISEMENT

‘ಆರೋಪಿಗಳ ಅಕ್ರಮದ ಬಗ್ಗೆ ಬಿಡಿಎ ವಿಶೇಷ ಕಾರ್ಯಪಡೆ ಮತ್ತು ವಿಚಕ್ಷಣಾ ದಳದ ಅಧಿಕಾರಿಗಳು ತನಿಖೆ ನಡೆಸಿದ್ದರು. ಬಿಡಿಎ ಉಪ ಕಾರ್ಯದರ್ಶಿ ಹಾಗೂ ಕಚೇರಿಯ ಕೆಲ ಸಿಬ್ಬಂದಿ, ಮಧ್ಯವರ್ತಿಗಳು, ನಿವೇಶನ ಫಲಾನುಭವಿಗಳು ಅಕ್ರಮದಲ್ಲಿ ಭಾಗಿಯಾಗಿರುವುದು ಗೊತ್ತಾಗಿತ್ತು‘ ಎಂದೂ ಅಧಿಕಾರಿ ತಿಳಿಸಿದರು.

‘ಲಭ್ಯವಿರುವ ಪುರಾವೆಗಳನ್ನು ಆಧರಿಸಿ 6 ಮಂದಿಯನ್ನು ಬಂಧಿಸಲಾಗಿದೆ. ಮತ್ತಷ್ಟು ಮಂದಿ ಅಕ್ರಮದಲ್ಲಿ ಭಾಗಿಯಾಗಿದ್ದು, ಅವರನ್ನು ಪತ್ತೆ ಮಾಡಲಾಗುತ್ತಿದೆ. ಆರೋಪಿಗಳ ಕೃತ್ಯದಿಂದ ಯಾರಿಗಾದರೂ ವಂಚನೆಯಾಗಿದ್ದರೆ, ಠಾಣೆಗೆ ದೂರು ನೀಡಬಹುದು’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.