ADVERTISEMENT

ಹರಾಜು: ₹ 5 ಸಾವಿರ ಕೋಟಿ ಸಿಕ್ಕರೆ ಹೆಚ್ಚು

ಬಿಡಿಎ: 12 ಸಾವಿರ ಮೂಲೆ ನಿವೇಶನ ಮಾರಾಟ ಸದ್ಯಕ್ಕೆ ಕಷ್ಟ

ಪ್ರವೀಣ ಕುಮಾರ್ ಪಿ.ವಿ.
Published 18 ಏಪ್ರಿಲ್ 2020, 19:01 IST
Last Updated 18 ಏಪ್ರಿಲ್ 2020, 19:01 IST
   

ಬೆಂಗಳೂರು: ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ರಾಜ್ಯ ಸರ್ಕಾರ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅಭಿವೃದ್ಧಿಪಡಿಸಿರುವ ವಿವಿಧ ಬಡಾವಣೆಗಳಲ್ಲಿ ಲಭ್ಯವಿರುವ 12 ಸಾವಿರ ಮೂಲೆ ನಿವೇಶನಗಳನ್ನು ಹರಾಜು ಹಾಕಿ ಸಂಪನ್ಮೂಲ ಸಂಗ್ರಹಕ್ಕೆ ಮುಂದಾಗಿದೆ. ಅಸಲಿಗೆ ಬಿಡಿಎ ಬಳಿ ಅಷ್ಟೊಂದು ಪ್ರಮಾಣದ ಮೂಲೆ ನಿವೇಶನಗಳು ಹರಾಜಿಗೆ ಲಭ್ಯವಿಲ್ಲ. ನಿವೇಶನಗಳ ಮಾರಾಟದಿಂದ ಸರ್ಕಾರ ನಿರೀಕ್ಷೆ ಮಾಡಿದಂತೆ ₹ 15 ಸಾವಿರ ಕೋಟಿ ವರಮಾನ ಬರುವುದೂ ಕನ್ನಡಿಗೊಳಗಿನ ಗಂಟು.

ಮೂಲೆ ನಿವೇಶನಗಳ ಪಟ್ಟಿಯನ್ನು ಸಿದ್ಧಪಡಿಸುವಾಗ, ಬಿಡಿಎ ಈಗ ಅಭಿವೃದ್ಧಿಪಡಿಸುತ್ತಿರುವ ನಾಡಪ್ರಭು ಕೆಂಪೇಗೌಡ (ಎನ್‌ಪಿಕೆ) ಬಡಾವಣೆಯ ನಿವೇಶನಗಳನ್ನೂ ಸೇರಿಸಿಕೊಂಡಿತ್ತು. ಅಲ್ಲಿನ ಯಾವುದೇ ನಿವೇಶನಕ್ಕೂ ಇನ್ನೂ ಪೂರ್ಣ ಪ್ರಮಾಣದಲ್ಲಿ ಮೂಲಸೌಕರ್ಯ ಕಲ್ಪಿಸಿಲ್ಲ. ಇಂತಹ ಹಂತದಲ್ಲಿ ಮೂಲೆ ನಿವೇಶನ ಹರಾಜು ಹಾಕಿದರೆ ಅದರಿಂದ ಬಿಡಿಎಗೇ ನಷ್ಟ. ಈ ಬಗ್ಗೆ ಪ್ರಾಧಿಕಾರದ ಕೆಲವು ಅಧಿಕಾರಿಗಳಿಂದಲೇ ಅಪಸ್ವರ ಕೇಳಿಬಂದಿದೆ. ಹರಾಜು ಹಾಕಲು ಬಿಡಿಎ ಸಿದ್ಧಪಡಿಸಿರುವ ಮೂಲೆ ನಿವೇಶನಗಳ ಪಟ್ಟಿಯಿಂದ ಎನ್‌ಪಿಕೆ ಬಡಾವಣೆಯ ನಿವೇಶನಗಳನ್ನು ಕೈಬಿಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಪ್ರಸ್ತುತ ಬಿಡಿಎ ಸಿದ್ಧಪಡಿಸಿರುವ ಪರಿಷ್ಕೃತ ಅಂದಾಜಿನ ಪ್ರಕಾರ ಲಭ್ಯ ಮೂಲೆ ನಿವೇಶನಗಳ ಹರಾಜಿನಿಂದ ಅದರ ಮೂರನೇ ಒಂದು ಭಾಗದಷ್ಟು ವರಮಾನ ಬರುವುದೂ ಅನುಮಾನ. ಕೆಂಪೇಗೌಡ ಬಡಾವಣೆಯ ನಿವೇಶನಗಳನ್ನು ಹೊರತಾಗಿ 7,608 ನಿವೇಶನಗಳು ಮಾತ್ರ ಮಾರಾಟಕ್ಕೆ ಲಭ್ಯ. ಅವುಗಳಿಂದ ಹೆಚ್ಚು ಎಂದರೆ ₹ 5,354 ಕೋಟಿ ಆದಾಯ ಬರಬಹುದು ಎಂದು ಬಿಡಿಎ ಅಂದಾಜು ಮಾಡಿದೆ.

ADVERTISEMENT

‘ಒಮ್ಮೆಲೆ ಹೆಚ್ಚು ಸಂಖ್ಯೆಯ ಮೂಲೆ ನಿವೇಶನಗಳನ್ನು ಹರಾಜು ಹಾಕಿದರೆ ಹೆಚ್ಚಿನ ವರಮಾನ ಬರುವುದಿಲ್ಲ. ಸ್ವಲ್ಪ ಸ್ವಲ್ಪವೇ ನಿವೇಶನಗಳನ್ನು ಹರಾಜು ಹಾಕುತ್ತಿದ್ದರೆ, ಅವುಗಳಿಗೆ ಬೇಡಿಕೆ ಹೆಚ್ಚು. ಒಂದೇ ವರ್ಷದಲ್ಲಿ ಇಷ್ಟು ನಿವೇಶನಗಳನ್ನು ಹರಾಜು ಹಾಕುವ ನಿರ್ಧಾರ ಅಷ್ಟು ಸೂಕ್ತವಲ್ಲ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

‘ಅಸ್ತಿತ್ವಕ್ಕೆ ಕುತ್ತು’

‘ಸಾಲದಲ್ಲಿ ಮುಳುಗಿರುವ ಬಿಡಿಎ ಅಧಿಕಾರಿಗಳ ಸಂಬಳ ನೀಡಲು ಈಗ ಉಳಿದಿರುವುದು ಮೂಲೆ ನಿವೇಶನಗಳು ಮಾತ್ರ. ಅವೆಲ್ಲವನ್ನೂ ಮಾರಾಟ ಮಾಡಿದರೆ ಖಂಡಿತಾ ಬಿಡಿಎ ಅಸ್ತಿತ್ವಕ್ಕೆ ಕುತ್ತು ಬರಲಿದೆ’ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಸಾಯಿದತ್ತ ಕಳವಳ ವ್ಯಕ್ತಪಡಿಸಿದರು.

‘ಕೆಂಪೇಗೌಡ ಬಡಾವಣೆ ಮಾತ್ರವಲ್ಲ ಬೆಂಗಳೂರು ದಕ್ಷಿಣದ ಅಂಜನಾಪುರ ಬಡಾವಣೆ, ಬನಶಂಕರಿ ಆರನೇ ಹಂತ ಮುಂತಾದ ಬಡಾವಣೆಗಳಿಗೆ ಈಗಲೂ ಮೂಲಸೌಕರ್ಯ ಕಲ್ಪಿಸಿಲ್ಲ. ಅಂತಹ ಬಡಾವಣೆಯ ಮೂಲೆ ನಿವೇಶನಗಳು ಮಾರಾಟವಾಗುವುದಾದರೂ ಹೇಗೆ’ ಎಂದು ಅವರು ಪ್ರಶ್ನಿಸಿದರು.

ಮಾರಾಟಕ್ಕೆ ಲಭ್ಯವಿರುವ ಮೂಲೆ ನಿವೇಶನಗಳು

ವಿಭಾಗ; ನಿವೇಶನಗಳ ಸಂಖ್ಯೆ; ವಿಸ್ತೀರ್ಣ (ಚ.ಮೀ); ಅಂದಾಜು ಮೌಲ್ಯ (₹ ಕೋಟಿಗಳಲ್ಲಿ)

ಉತ್ತರ; 726; 65,714; 467.65

ದಕ್ಷಿಣ; 4613; 3,43,350;3281.99

ಪೂರ್ವ; 92; 16,812; 203.41

ಪಶ್ಚಿಮ; 2177; 3,11,472;1401.61

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.