ADVERTISEMENT

40 ದಿನಗಳಲ್ಲೇ ನೌಕರನ ಅಮಾನತು ತೆರವು

ನಿವೇಶನ ಹಂಚಿಕೆ ಅಕ್ರಮ l ಒತ್ತಡಕ್ಕೆ ಮಣಿದ ಬಿಡಿಎ ಅಧಿಕಾರಿಗಳು: ಆರೋಪ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2018, 19:31 IST
Last Updated 2 ಸೆಪ್ಟೆಂಬರ್ 2018, 19:31 IST
   

ಬೆಂಗಳೂರು: ನಿವೇಶನ ಹಂಚಿಕೆಯಲ್ಲಿ ಅಕ್ರಮ ಎಸಗಿರುವ ಆರೋಪ ಎದುರಿಸುತ್ತಿದ್ದ ಬೆಂಗಳೂರು ಪ್ರಾಧಿಕಾರದ ಉಪ ಕಾರ್ಯದರ್ಶಿ–4 ವಿಭಾಗದ ನೌಕರ ಬಿ.ವೆಂಕಟರಮಣಪ್ಪ ಅವರ ಅಮಾನತನ್ನು 40 ದಿನಗಳಲ್ಲೇ ತೆರವುಗೊಳಿಸಲಾಗಿದೆ.‍ ಪ್ರಾಧಿಕಾರದ ಹಿರಿಯ ಅಧಿಕಾರಿಗಳು ಒತ್ತಡಕ್ಕೆ ಮಣಿದು ಈ ಕ್ರಮ ಕೈಗೊಂಡಿದ್ದಾರೆ ಎಂಬ ಆರೋಪ ವ್ಯಕ್ತವಾಗಿದೆ.

ಎಪಿಎಂಸಿಯಿಂದ ₹10.24 ಕೋಟಿ ಪಾವತಿಸಿಕೊಳ್ಳದೆ ಮತ್ತು ಯಾವುದೇ ಸರ್ಕಾರಿ ಆದೇಶವಿಲ್ಲದೆ ಕಮಲಾಬಾಯಿ ಹಾಗೂ ಅವರ ಪುತ್ರ ಕೃಷ್ಣ ರಾವ್‌ ಅವರಿಗೆ 13 ಬದಲಿ ನಿವೇಶನಗಳನ್ನು ಹಂಚಿಕೆ ಮಾಡಲಾಗಿತ್ತು. ಅದಲ್ಲದೆ, ‘ಬಿಡಿಎ ಹಂಚಿಕೆ ನಿಯಮ 1984’ ಉಲ್ಲಂಘಿಸಿ ವೆಂಕಟರಮಣಪ್ಪ ಕುಟುಂಬದ ಸದಸ್ಯರಿಗೆ ನಾಲ್ಕು ನಿವೇಶನಗಳನ್ನು ಹಂಚಲಾಗಿತ್ತು. ‘ಕಾನೂನುಬಾಹಿರವಾಗಿ ನಿವೇಶನ ಹಂಚಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಹೀಗಾಗಿ, ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ ವೆಂಕಟರಮಣಪ್ಪ ಅವರನ್ನು ಅಮಾನತು ಮಾಡಲಾಗಿದೆ’ ಎಂದು ಬಿಡಿಎ ಆಯುಕ್ತ ರಾಕೇಶ್‌ ಸಿಂಗ್‌ ಜುಲೈ 21ರಂದು ಆದೇಶ ಹೊರಡಿಸಿದ್ದರು.

‘ಪ್ರಾಧಿಕಾರದ (ನಿವೇಶನಗಳ ಹಂಚಿಕೆ) ನಿಯಮಾವಳಿ 1984ರ ಪ್ರಕಾರ ನಿವೇಶನ ಮೌಲ್ಯ ಪಾವತಿಸಿದ ಬಳಿಕವೇ ಶುದ್ಧ ಕ್ರಯಪತ್ರ/ ಸ್ವಾಧೀನಪತ್ರಗಳನ್ನು ನೀಡಬೇಕು. ಆದರೆ, ತಾಯಿ, ಮಗನಿಗೆ 13 ಬದಲಿ ನಿವೇಶನ ಪ್ರಕರಣದಲ್ಲಿ ಹಣ ಕಟ್ಟಿಸಿಕೊಳ್ಳದೆ ಅಥವಾ ಹಂಚಿಕೆದಾರರಿಂದ ನಿವೇಶನ ಮೌಲ್ಯ ಪಾವತಿಸಿಕೊಳ್ಳದೆ ಶುದ್ಧ ಕ್ರಯಪತ್ರ ನೀಡಲಾಗಿದೆ. ಇದು ಕರ್ತವ್ಯ ಲೋಪ’ ಎಂದು ಆದೇಶದಲ್ಲಿ ತಿಳಿಸಲಾಗಿತ್ತು.

ADVERTISEMENT

ನಿವೇಶನ ಹಂಚಿಕೆ ಬಗ್ಗೆ ವರದಿ ನೀಡುವಂತೆ ಮುಖ್ಯಮಂತ್ರಿ ಸಚಿವಾಲಯ ಸೂಚಿಸಿತ್ತು. ಈ ಸಂಬಂಧ ಅಗತ್ಯ ಕ್ರಮ ಕೈಗೊಳ್ಳುವಂತೆ ಬೆಂಗಳೂರು ಅಭಿವೃದ್ಧಿ ಸಚಿವ ಜಿ.ಪರಮೇಶ್ವರ ನಿರ್ದೇಶನ ನೀಡಿದ್ದರು. ಪ್ರಕರಣದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್‌ ಅವರು ಆಗಸ್ಟ್‌ 8ರಂದು ಬಿಡಿಎ ಆಯುಕ್ತರಿಗೆ ಪತ್ರ ಬರೆದಿದ್ದರು. ಈ ಪತ್ರಕ್ಕೆ ಆಯುಕ್ತರು ಉತ್ತರ ನೀಡಿಲ್ಲ.

‘ಪುನಃ ಕರ್ತವ್ಯಕ್ಕೆ ತೆಗೆದುಕೊಳ್ಳಬೇಕು ಎಂದು ವೆಂಕಟರಮಣಪ್ಪ ಮನವಿ ಸಲ್ಲಿಸಿದ್ದರು. ಹೀಗಾಗಿ, ಬಿಡಿಎ ಆಯುಕ್ತರು ಪ್ರಾಧಿಕಾರದ 1976ರ ಕಾಯ್ದೆ ಸೆಕ್ಷನ್‌ 50ರ ಅಡಿ ದತ್ತವಾಗಿರುವ ಅಧಿಕಾರ ಚಲಾಯಿಸಿ ಅಮಾನತು ರದ್ದುಪಡಿಸಲು ನಿರ್ದೇಶನ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ನೌಕರನ ಅಮಾನತು ತೆರವುಗೊಳಿಸಲಾಗಿದೆ ಹಾಗೂ ವಿಚಾರಣೆ ಕಾಯ್ದಿರಿಸಲಾಗಿದೆ’ ಎಂದು ಪ್ರಾಧಿಕಾರದ ಉಪ ಕಾರ್ಯದರ್ಶಿ–1 ಅವರು ಆಗಸ್ಟ್‌ 30ರಂದು ಆದೇಶ ಹೊರಡಿಸಿದ್ದಾರೆ.

‘ವೆಂಕಟರಮಣಪ್ಪ ಅವರು ಸಾಕ್ಷಿ ನಾಶಪಡಿಸುವ ಹಾಗೂ ಸಾಕ್ಷಿಗಳನ್ನು ಹೆದರಿಸುವ ಸಾಧ್ಯತೆ ಇದೆ. ಜತೆಗೆ, ಭ್ರಷ್ಟಾಚಾರ ನಡೆಸಲು ಬೇರೆ ನೌಕರರಿಗೆ ಅವಕಾಶ ನೀಡಿದಂತಾಗಿದೆ’ ಎಂದು ಪ್ರಾಧಿಕಾರದ ನಿವೃತ್ತ ನೌಕರ ಬಿ.ಎಂ. ಚಿಕ್ಕಯ್ಯ ಎಚ್ಚರಿಸಿದರು.

*
ಹಿರಿಯ ಅಧಿಕಾರಿಗಳು ಒತ್ತಡಕ್ಕೆ ಮಣಿದು ವೆಂಕಟರಮಣಪ್ಪ ಅವರನ್ನು ಪುನಃ ಕೆಲಸಕ್ಕೆ ತೆಗೆದುಕೊಂಡಿದ್ದಾರೆ. ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುತ್ತೇನೆ.
-ಬಿ.ಎಂ. ಚಿಕ್ಕಯ್ಯ, ನಿವೃತ್ತ ನೌಕರ

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.