ADVERTISEMENT

ಹೊಸಕೆರೆಹಳ್ಳಿ | ಒಕ್ಕೆಲೆಬ್ಬಿಸಿದ್ದ ಪ್ರಕರಣ: ಅನರ್ಹರಿಗೂ ನಿವೇಶನ

ಉಪಕಾರ್ಯದರ್ಶಿಗಳಾಗಿದ್ದ ನಾಲ್ವರು ಕೆಎಎಸ್‌ ಅಧಿಕಾರಿಗಳು ಸಹಿತ 11 ಸಿಬ್ಬಂದಿಗೆ ನೋಟಿಸ್‌

ಪ್ರವೀಣ ಕುಮಾರ್ ಪಿ.ವಿ.
Published 22 ಡಿಸೆಂಬರ್ 2020, 21:30 IST
Last Updated 22 ಡಿಸೆಂಬರ್ 2020, 21:30 IST
ಮಳೆಯಿಂದಾಗಿ ತುಂಬಿದ ಹೊಸಕೆರೆಹಳ್ಳಿ ಕೆರೆ –ಪ್ರಜಾವಾಣಿ ಚಿತ್ರ
ಮಳೆಯಿಂದಾಗಿ ತುಂಬಿದ ಹೊಸಕೆರೆಹಳ್ಳಿ ಕೆರೆ –ಪ್ರಜಾವಾಣಿ ಚಿತ್ರ    

ಬೆಂಗಳೂರು: ಹೊಸಕೆರೆಹಳ್ಳಿಯ ಕೊಳೆಗೇರಿಯಲ್ಲಿ ಒಕ್ಕಲೆಬ್ಬಿಸಿದ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ನಿವೇಶನ ಹಂಚಿಕೆಯಲ್ಲಿ ಭಾರಿ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದೆ.

ಅರ್ಹರಲ್ಲದವರಿಗೂ ನಿವೇಶನಗಳನ್ನು ಹಂಚಿಕೆ ಮಾಡಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಪ್ರಾಧಿಕಾರದಲ್ಲಿ ಈ ಹಿಂದೆ ಉಪಕಾರ್ಯದರ್ಶಿಗಳಾಗಿದ್ದ ನಾಲ್ವರು ಕೆಎಎಸ್‌ ಅಧಿ ಕಾರಿಗಳೂ ಸೇರಿದಂತೆ 11 ಮಂದಿಗೆ ಈ ಕುರಿತು ಕಾರಣ ಕೇಳಿ ನೋಟಿಸ್‌ ಜಾರಿ ಮಾಡಲಾಗಿದೆ.

ಅಕ್ರಮ ಆಸ್ತಿ ಸಂಪಾದನೆ ಆರೋಪ ದಲ್ಲಿ ಇತ್ತೀಚೆಗಷ್ಟೇ ಅಮಾನತುಗೊಂಡಿದ್ದ ಜೈವಿಕ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಆಡಳಿತಾಧಿಕಾರಿ ಡಾ.ಬಿ.ಸುಧಾ, ಚಿಕ್ಕಬಳ್ಳಾಪುರ ನಗರಾ ಭಿವೃದ್ಧಿ ಪ್ರಾಧಿಕಾರದ ಆಯುಕ್ತ ಭಾಸ್ಕರ್‌, ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ ಯಲ್ಲಿ ವಿಶೇಷ ಭೂಸ್ವಾಧೀನಾಧಿಕಾರಿ ಅನಿಲ್‌ ಕುಮಾರ್‌ ಹಾಗೂಈಗಿನ ಉಪಕಾರ್ಯದರ್ಶಿ–1 ಚಿದಾನಂದ್‌ ಅವರುನೋಟೀಸ್‌ ಜಾರಿಯಾಗಿರುವವ ರಲ್ಲಿ ಪ್ರಮುಖರು. ಸುಧಾ ಅವರು ಬಿಡಿಎ ಉಪಕಾರ್ಯದರ್ಶಿ–1, ಭಾಸ್ಕರ್‌, ಅನಿಲ್‌ ಕುಮಾರ್‌ ಹಾಗೂ ಚಿದಾ ನಂದ್‌ ಉಪಕಾರ್ಯದರ್ಶಿ–3 ಆಗಿ ಕರ್ತವ್ಯ ನಿರ್ವಹಿಸಿದ್ದ ಅವಧಿಯಲ್ಲಿ ನಿವೇಶನಗಳ ಹಂಚಿಕೆ ಆಗಿದೆ.

ADVERTISEMENT

ಉಪಕಾರ್ಯದರ್ಶಿ–1 ಅವರ ಕಚೇರಿಯ ಮೇಲ್ವಿಚಾರ ಕರಾಗಿದ್ದ ಅಶ್ವತ್ಥನಾರಾಯಣ (ಪ್ರಸ್ತುತ ಪಶ್ಚಿಮ ಕಂದಾಯ ವಿಭಾಗ ದಲ್ಲಿದ್ದಾರೆ), ಕೆ.ಎಂ.ರವಿಶಂಕರ್‌ (ಪ್ರಸ್ತುತಉತ್ತರ ಕಂದಾಯ ವಿಭಾಗದಲ್ಲಿದ್ದಾರೆ) ವಿಷಯ ನಿರ್ವಾಹಕ ಸಂಜಯ ಕುಮಾರ್‌, ಉಪಕಾರ್ಯದರ್ಶಿ–3 ಅವರ ಕಚೇರಿಯ ಮೇಲ್ವಿಚಾರಕಿಯರಾಗಿದ್ದ ಎಂ.ವಿ.ಕಮಲಾ (ಇತ್ತೀಚೆಗೆ ಖಾಸಗಿ ಸಂಸ್ಥೆ ಕಚೇರಿಯಲ್ಲಿ ಬಿಡಿಎ ಕುರಿತ ನಕಲಿ ದಾಖಲೆಗಳನ್ನು ಸೃಷ್ಟಿಸುತ್ತಿದ್ದ ಪ್ರಕರಣದಲ್ಲಿ ಅಮಾನತಾ ಗಿದ್ದಾರೆ), ಮೇಲ್ವಿಚಾರಕಿ ವಿ.ಮಹದೇವಮ್ಮ (ಪ್ರಸ್ತುತ ದಾಖಲೆ ವಿಭಾಗದಲ್ಲಿ ದ್ದಾರೆ), ದ್ವಿತೀಯ ದರ್ಜೆ ಸಹಾಯಕರಾಗಿದ್ದ ಮುನಿಬಚ್ಚೇಗೌಡ (ನಿವೃತ್ತರಾಗಿದ್ದಾರೆ), ವೆಂಕಟರಮಣಪ್ಪ (ಕಂದಾಯ ಪಶ್ಚಿಮ ವಿಭಾಗದಲ್ಲಿದ್ದ ಇವರು ಕಾಡು ಗೋಡಿಯಲ್ಲಿ ನಕಲಿ ದಾಖಲೆ ಸೃಷ್ಟಿಸಿ ಅಕ್ರಮವಾಗಿ ನಿವೇಶನ ಹಂಚಿಕೆ ಮಾಡಿದ ಪ್ರಕರಣದಲ್ಲಿ ಅಮಾನತಿನಲ್ಲಿ ದ್ದಾರೆ) ನೋಟಿಸ್‌ ಪಡೆದ ಇತರ ಸಿಬ್ಬಂದಿ.

ಏನಿದು ಪ್ರಕರಣ?: ಬಿಡಿಎ ಬನಶಂಕರಿ 3ನೇ ಹಂತದ ಹೊಸಕೆರೆಹಳ್ಳಿ ಗ್ರಾಮದಲ್ಲಿ ಬಿಡಿಎಯ ಜಾಗದಲ್ಲಿ (ಸರ್ವೆ ನಂಬರ್‌ 89, 90, 91 ಹಾಗೂ 94) ಗುಡಿಸಲುಗಳಲ್ಲಿ ವಾಸವಾಗಿದ್ದ ಕೆಲವು ಕುಟುಂಬಗಳನ್ನು ಒಕ್ಕಲೆಬ್ಬಿಸಲಾಗಿತ್ತು. ಅವರಿಗೆ ಪುನರ್ವಸತಿ ಕಲ್ಪಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ಅನಾಥ ಮಕ್ಕಳ ಅಭಿವೃದ್ಧಿ ಸಂಸ್ಥೆಯು ಹೋರಾಟ ನಡೆಸಿತ್ತು. ಇಂತಹ ಒಟ್ಟು 541 ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಮಾಡಲು ಸರ್ಕಾರ ಆದೇಶ ಮಾಡಿತ್ತು. ಸರ್ಕಾರದ ಆದೇಶದನ್ವಯ ಹೊಸಕೆರೆಹಳ್ಳಿ ಗ್ರಾಮದ ಸರ್ವೆ ನಂಬರ್‌ 90ರಲ್ಲಿ 20x30 ಅಡಿ ವಿಸ್ತೀರ್ಣದ ಒಟ್ಟು 238 ನಿವೇಶನಗಳನ್ನು 2005ರ ಮಾ.11ರಂದು ಬಿಡಿಎ ಹಂಚಿಕೆ ಮಾಡಿತ್ತು. ಕೆಲವು ಅರ್ಹರಿಗೆ ನಿವೇಶನ ಸಿಕ್ಕಿರಲಿಲ್ಲ. ಬಿಡಿಎ ದಕ್ಷಿಣ ವಿಭಾಗದ ಅಧಿಕಾರಿಗಳು ಮಹಜರು ನಡೆಸಿ 180 ಮಂದಿ ಮಾತ್ರ ಇನ್ನು ನಿವೇಶನ ಪಡೆ ಯಲು ಅರ್ಹರಿದ್ದಾರೆ ಎಂದು ವರದಿ ನೀಡಿದ್ದರು.

2017ರ ಅ.7ರಂದು ಕೆಲವರು ಪುನರ್ವಸತಿ ಯೋಜನೆಯಡಿ ನಿವೇಶನ ನೀಡುವಂತೆ ಒತ್ತಾಯಿಸಿ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದರು. ಈಗಿನ ನಿಯಮಾವಳಿಯಂತೆ ಸೂಕ್ತ ದರವನ್ನು ಕಟ್ಟಿಸಿಕೊಂಡು ಅರ್ಹ ಫಲಾನುಭವಿಗಳಿಗೆ ಮಾತ್ರ ನಿವೇಶನ ಹಂಚಿಕೆ ಮಾಡ ಬಹುದು ಎಂದು ಸರ್ಕಾರ ಆದೇಶ ಮಾಡಿತ್ತು. 2018ರ ಅ .31 ರಂದು ನಡೆದಿದ್ದ ಪ್ರಾಧಿಕಾರದ ಆಡಳಿತ ಮಂಡಳಿ ಸಭೆಯಲ್ಲಿ ಅರ್ಹ 180 ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಮಾಡಲುನಿರ್ಣಯ ಕೈಗೊಳ್ಳಲಾಗಿತ್ತು. ಜ್ಞಾನಭಾರತಿ (ನಾಗದೇವನಹಳ್ಳಿ), ನಾಗರಬಾವಿ, ಎಚ್‌ಬಿ ಆರ್‌ ಬಡಾವಣೆ, ಬಿಟಿಎಂ ಬಡಾವಣೆಗಳಲ್ಲೂ ನಿವೇಶನ ಹಂಚಿಕೆ ಮಾಡ ಲಾಗಿತ್ತು.

ಈ ನಿವೇಶನ ಹಂಚಿಕೆಯಲ್ಲಿ ಅಕ್ರಮ ನಡೆದಿದೆ ಎಂದು ಪ್ರಶಾಂತನಗರದ ನವೀನ್‌ ಕುಮಾರ್‌ ಎಂಬುವರು ಬಿಡಿಎಗೆ ಹಾಗೂ ನಗರಾಭಿವೃದ್ಧಿ ಇಲಾಖೆಗೆ ದೂರು ನೀಡಿದ್ದರು. 44 ನಿವೇಶನಗಳ ಹಂಚಿಕೆಗೆ ಸಂಬಂಧಿಸಿದ ದಾಖಲೆಗಳನ್ನೂ ಒದಗಿಸಿದ್ದರು. ಈ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ನಗರಾಭಿವೃದ್ಧಿ ಇಲಾಖೆಯು 2020ರ ಅ.28ರಂದು ಬಿಡಿಎಗೆ ಸೂಚನೆ ನೀಡಿತ್ತು. ಬಳಿಕ ಪ್ರಾಧಿಕಾರದ ವಿಶೇಷ ಜಾಗೃತ ದಳವು ಪ್ರಕರಣದ ತನಿಖೆ ಕೈಗೆತ್ತಿಕೊಂಡಾಗ 180 ಮಂದಿ ಫಲಾನುಭವಿಗಳ ಪಟ್ಟಿಯ ಲ್ಲಿರದ 32 ಮಂದಿಗೆ ಅಕ್ರಮವಾಗಿ ನಿವೇಶನ ಹಂಚಿಕೆ ಮಾಡಿರುವುದು ಸಾಬೀತಾಗಿತ್ತು.

ಬಿಡಿಎಯ ಉಪಕಾರ್ಯದರ್ಶಿ– 1, ಉಪಕಾರ್ಯದರ್ಶಿ–3 ಅವರ ಕಚೇ ರಿಗಳ ಮೂಲಕ ನಿವೇಶನಗಳ ಅಕ್ರಮ ಹಂಚಿಕೆ ನಡೆದಿದೆ. ಈ ಅವಧಿಯಲ್ಲಿ ಈ ಕಚೇರಿಯಲ್ಲಿ ಕಾರ್ಯ ನಿರ್ವಹಿಸಿದ್ದವರಿಗೆ ಬಿಡಿಎ ಆಯುಕ್ತರ ಎಚ್‌.ಆರ್‌.ಮಹದೇವ ಅವರು ಇದೇ 19ರಂದು ಕಾರಣ ಕೇಳಿ ನೋಟೀಸ್‌ ಜಾರಿಗೊಳಿಸಿ ದ್ದಾರೆ. ಕಾನೂನುಬಾಹಿರವಾಗಿ ನಿವೇ ಶನ ಹಂಚಿಕೆ ಮಾಡಿರುವುದರಿಂದ ಪ್ರಾಧಿಕಾರಕ್ಕ ಕೋಟ್ಯಂತರ ರೂಪಾಯಿ ನಷ್ಟ ಉಂಟಾಗಿದೆ. ಈ ಅಕ್ರಮದಲ್ಲಿ ಶಾಮೀಲಾಗಿರುವ ನಿಮ್ಮ ವಿರುದ್ಧ 1976ರ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಕಾಯ್ದೆ ಕಲಂ 50 ಹಾಗೂ 1957ರ ನಾಗರಿಕ ಸೇವೆ (ವರ್ಗೀಕರಣ ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳ ಅಡಿಯಲ್ಲಿ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಆಯುಕ್ತರು ನೋಟಿಸ್‌ನಲ್ಲಿ ತಿಳಿಸಿದ್ದಾರೆ.

ನಡೆದಿರುವ ಅಕ್ರಮಗಳೇನು?
* ಅರ್ಹರಲ್ಲದವರಿಗೆ ನಿವೇಶನ ಹಂಚಿಕೆ
* ನಿಯಮ ಮೀರಿ 20x30ಕ್ಕೂ ಹೆಚ್ಚಿನ ಅಳತೆಯ ನಿವೇಶನಗಳ ಹಂಚಿಕೆ
* ಒಮ್ಮೆ ನಿವೇಶನ ಪಡೆದಿದ್ದವರಿಗೂ ಪುನಃ ನಿವೇಶನ ಹಂಚಿಕೆ
* ನಿವೇಶನದ ಮೌಲ್ಯ ಪಾವತಿಸಿಕೊಳ್ಳದೇ ಹಂಚಿಕೆ
* ಅನುಮೋದಿತ ನಕ್ಷೆಯಲ್ಲಿರದ ಹಾಗೂ ಮೂಲೆ ನಿವೇಶನಗಳ ಹಂಚಿಕೆ

‘ತಪ್ಪೆಸಗಿದವರ ವಿರುದ್ಧ ಎಫ್‌ಐಆರ್‌’
‘ಪ್ರಾಧಿಕಾರದಲ್ಲಿ ಉಪಕಾರ್ಯದರ್ಶಿಗಳಾಗಿ ಕಾರ್ಯನಿರ್ವಹಿಸಿದ್ದ ನಾಲ್ವರು ಅಧಿಕಾರಿಗಳು ಅಕ್ರಮ ನಡೆಸಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಕೆಲವು ಸಿಬ್ಬಂದಿಯೂ ಕೈಜೋಡಿಸಿದ್ದಾರೆ. ಅವರಿಗೆಲ್ಲ ಕಾರಣ ಕೇಳಿ ನೋಟಿಸ್‌ ನೀಡಿದ್ದೇವೆ. ಅವರ ಉತ್ತರ ನೀಡುತ್ತಾರೆ ನೋಡಿಕೊಂಡು ಮುಂದಿನ ಕ್ರಮ ಕೈಗೊಳ್ಳುತ್ತೇವೆ. ತಪ್ಪು ಮಾಡಿರುವ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ಎಫ್‌ಐಆರ್‌ ದಾಖಲಿಸುತ್ತೇವೆ’ ಎಂದು ಬಿಡಿಎ ಆಯುಕ್ತ ಎಚ್‌.ಆರ್‌.ಮಹದೇವ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.