ಬೆಂಗಳೂರು: ಕರ್ತವ್ಯದ ವೇಳೆ ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಗಿದ್ದ ಸಹಾಯಕ ಎಂಜಿನಿಯರ್‌ಗಳಾದ ಎಂ.ಎಸ್. ಶಂಕರಮೂರ್ತಿ, ಡಿ.ಎಂ. ನಾರಾಯಣಸ್ವಾಮಿ ಹಾಗೂ ಆಕೃತಿ ರಚನಕಾರ ಜೆ. ಮುರುಳೀಧರ್ ಅವರನ್ನು ಅಮಾನತುಗೊಳಿಸಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಆಯುಕ್ತ ಜಿ.ಸಿ.ಪ್ರಕಾಶ್ ಗುರುವಾರ ಆದೇಶ ಹೊರಡಿಸಿದ್ದಾರೆ.
ಈ ಅಧಿಕಾರಿಗಳು ಕರ್ತವ್ಯದ ವೇಳೆ ಇಸ್ಪೀಟ್ ಆಡುವ ಜತೆಗೆ ಮದ್ಯಪಾನ ಮತ್ತು ಧೂಮಪಾನ ಮಾಡುತ್ತಿರುವ ದೃಶ್ಯ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು. ಈ ಘಟನೆಯಿಂದ ಮುಜುಗರಕ್ಕೆ ಒಳಗಾದ ಪ್ರಾಧಿಕಾರ ಆ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಂಡಿದೆ.
ಕಚೇರಿಗೆ ಆಯುಕ್ತರ ದಿಢೀರ್ ಭೇಟಿ:ಬಿಡಿಎ ನೂತನ ಆಯುಕ್ತ ಜಿ.ಸಿ. ಪ್ರಕಾಶ್ ಅವರು ಪ್ರಾಧಿಕಾರದ ಕೇಂದ್ರ ಕಚೇರಿಯ ವಿವಿಧ ವಿಭಾಗಗಳಿಗೆ ಬುಧವಾರ ದಿಢೀರ್ ಭೇಟಿ ನೀಡಿದರು. ಈ ವೇಳೆ ಉಪಕಾರ್ಯದರ್ಶಿಗಳು ಹಾಗೂ ಸಿಬ್ಬಂದಿಗಳುಹಾಜರಿಲ್ಲದಿರುವುದು ಕಂಡು ಬಂದಿತು.
ಕಚೇರಿಯ ಕಾರ್ಯವೈಖರಿ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ ಆಯುಕ್ತರು,ಎಲ್ಲಾ ಕಚೇರಿಗಳಲ್ಲೂ ಬಯೋಮೆಟ್ರಿಕ್ ವ್ಯವಸ್ಥೆ ಜಾರಿಗೊಳಿಸುವಂತೆ ಹಾಗೂ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
'ಯಾವುದೇ ಕಡತಗಳನ್ನು ಅನಗತ್ಯವಾಗಿ ಹೆಚ್ಚು ಕಾಲ ಇಟ್ಟುಕೊಳ್ಳುವಂತಿಲ್ಲ. ತಕ್ಷಣವೇ ವಿಲೇವಾರಿ ಮಾಡಬೇಕು. ಕಚೇರಿಗೆ ಬರುವ ಎಲ್ಲರಿಗೂ ಸಕಾಲದಲ್ಲಿ ಸೇವೆ ಸಿಗುವಂತಾಗಬೇಕು’ ಎಂದು ಆದೇಶ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.