ADVERTISEMENT

ಕನ್ನಡಕ್ಕೆ ಆದ್ಯತೆ ನೀಡಲಾಗಿದೆ: ಬೆಮೆಲ್‌ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 31 ಜನವರಿ 2026, 10:20 IST
Last Updated 31 ಜನವರಿ 2026, 10:20 IST
<div class="paragraphs"><p>ಬೆಮೆಲ್‌</p></div>

ಬೆಮೆಲ್‌

   

ಬೆಂಗಳೂರು: ‘ಬಿಇಎಂಎಲ್ ಕನ್ನಡ ಸಂಘದ ಚುನಾವಣೆಯು ನಮ್ಮದಲ್ಲದ ಕಾರಣದಿಂದ ಮುಂದೂಡಲಾಗಿದೆ. ಉಳಿದಂತೆ ಕನ್ನಡಕ್ಕೆ ಉತ್ತಮ ಪ್ರೋತ್ಸಾಹವನ್ನು ನೀಡುತ್ತಾ ಬರಲಾಗಿದೆ’ ಎಂದು ಬೆಮೆಲ್‌ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.

ನಿಷ್ಕ್ರಿಯಗೊಂಡಿರುವ ಕನ್ನಡ ಸಂಘವನ್ನು ಕೂಡಲೇ ಆರಂಭಿಸಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅವರು ಬೆಮೆಲ್ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ ಎಂಬ ವರದಿಗೆ ಸಂಬಂಧಿಸಿ ಅವರು ಪ್ರತಿಕ್ರಿಯಿಸಿದ್ದಾರೆ.

ADVERTISEMENT

ಬಿಇಎಂಎಲ್ ಕನ್ನಡ ಸಂಘವನ್ನು 1968ರಲ್ಲಿ ಸ್ಥಾಪಿಸಿದ್ದು ರಾಜ್ಯ ಸಹಕಾರ ಸಂಘಗಳ ಕಾಯ್ದೆಯಡಿಯಲ್ಲಿ ನೋಂದಾಯಿಸಲಾಗಿದೆ. ಸಂಘವು ಏಳು ಪದಾಧಿಕಾರಿಗಳು ಮತ್ತು ಇಪ್ಪತ್ತನಾಲ್ಕು ಕಾರ್ಯಕಾರಿ ಸಮಿತಿ ಸದಸ್ಯರನ್ನು ಒಳಗೊಂಡಿದೆ. ಅದರ ಸಂವಿಧಾನದ ಪ್ರಕಾರ, ಪ್ರತಿ ಐದು ವರ್ಷಗಳಿಗೊಮ್ಮೆ ಸಂಘದ ಚುನಾವಣೆ ನಡೆಸಬೇಕು. 

ಕನ್ನಡ ಸಂಘಕ್ಕೆ 2021ರ ಅಕ್ಟೋಬರ್‌ನಲ್ಲಿ ಚುನಾವಣೆ ನಡೆಯಬೇಕಿತ್ತು. ಕನ್ನಡ ಸಂಘ ತೆಗೆದುಕೊಂಡ ನಿರ್ಧಾರಗಳು ಮತ್ತು ನಂತರದ ಮುಂದೂಡಿಕೆಗಳಿಂದಾಗಿ ಅದನ್ನು ನಡೆಸಲು ಸಾಧ್ಯವಾಗಲಿಲ್ಲ. 2023ರ ಮೇಯಲ್ಲಿ ನಿಗದಿಯಾಗಿದ್ದ ಚುನಾವಣೆಯನ್ನು ಸಹಕಾರ ಸಂಘಗಳ ನಿಬಂಧಕರು ಕನ್ನಡ ಸಂಘವನ್ನು ವಹಿಸಿಕೊಂಡಿದ್ದರಿಂದ ನಡೆಸಲು ಸಾಧ್ಯವಾಗಲಿಲ್ಲ. ಕೊನೆಯ ಅಧಿಸೂಚಿತ ದಿನಾಂಕ 2024ರ ನವೆಂಬರ್‌ 17 ಆಗಿತ್ತು. ಇದನ್ನು ಆಡಳಿತಾತ್ಮಕ ಕಾರಣಗಳಿಂದ ಮುಂದೂಡಲಾಯಿತು ಎಂದು ವಿವರಿಸಿದ್ದಾರೆ.

ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಉತ್ತೇಜಿಸಲು, ಸಂರಕ್ಷಿಸಲು ಮತ್ತು ಅಭಿವೃದ್ಧಿಪಡಿಸಲು ಕನ್ನಡ ಸಂಘದ ಪ್ರಯತ್ನಗಳಲ್ಲಿ ಬೆಮೆಲ್‌ ಆಡಳಿತ ಮಂಡಳಿಯು ನಿರಂತರವಾಗಿ ಬೆಂಬಲ ಮತ್ತು ಗೌರವವನ್ನು ನೀಡಿದೆ. ಕನ್ನಡ ಭಾಷಿಕರಲ್ಲದ ಉದ್ಯೋಗಿಗಳಿಗೆ ಕನ್ನಡ ಭಾಷಾ ತರಬೇತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಕಂಪನಿಯ ಸುದ್ದಿಪತ್ರದಲ್ಲಿ ಕನ್ನಡಕ್ಕಾಗಿ ಪುಟಗಳನ್ನು ಮೀಸಲಿಡಲಾಗಿದೆ. ಕಂಪನಿಯ ಲೋಗೋ ಮತ್ತು ಅಡಿ ಶೀರ್ಷಿಕೆಯಲ್ಲಿ ಕನ್ನಡ ಬಳಕೆ ಮಾಡಲಾಗಿದೆ. ಕನ್ನಡಕ್ಕೆ ಪ್ರಾಮುಖ್ಯ ನೀಡಿ ಮೂರು ಭಾಷೆಗಳಲ್ಲಿ ಅಧಿಕೃತ ಅಧಿಸೂಚನೆಗಳು ಮತ್ತು ಸುತ್ತೋಲೆಗಳನ್ನು ಹೊರಡಿಸಲಾಗಿದೆ. ಸ್ಥಳೀಯ ಕನ್ನಡ ಅಭ್ಯರ್ಥಿಗಳಿಗೆ, ವಿಶೇಷವಾಗಿ ಕೆಜಿಎಫ್‌ನಲ್ಲಿ ಅಪ್ರೆಂಟಿಸ್‌ಶಿಪ್ ಅವಕಾಶಗಳನ್ನು ಒದಗಿಸಲಾಗುತ್ತಿದೆ. ತ್ರೈಮಾಸಿಕ ಫಲಿತಾಂಶಗಳು, ಟೆಂಡರ್‌ಗಳು ಮತ್ತು ಹಣಕಾಸು ಬಹಿರಂಗಪಡಿಸುವಿಕೆಯ ಪ್ರಕಟಣೆ ಕನ್ನಡ ಭಾಷೆಯಲ್ಲಿಯೂ ನೀಡಲಾಗಿದೆ.

ಬಿಇಎಂಎಲ್‌ನ ಎಲ್ಲ ಸಂಕೀರ್ಣಗಳಲ್ಲಿ ವಾರ್ಷಿಕವಾಗಿ ಕರ್ನಾಟಕ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಉದ್ಯೋಗ ಮೇಳವನ್ನು ಏರ್ಪಡಿಸಲಾಗುತ್ತಿದೆ. ಅಧಿಕೃತ ಬಿಇಎಂಎಲ್ ಲೆಟರ್‌ಹೆಡ್‌ಗಳ ಮೇಲ್ಭಾಗದಲ್ಲಿ ಕನ್ನಡ ಭಾಷೆಯನ್ನು ಸೇರಿಸುವುದು ಸೇರಿದಂತೆ ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.