ADVERTISEMENT

ಸಂಚಾರ ಸಮಸ್ಯೆ ನಿವಾರಣೆಗೆ ಆದ್ಯತೆ

ಸಮಾಲೋಚನೆ– ಶೀಘ್ರ ಪರಿಹಾರ: ಸಚಿವರ ಭರವಸೆ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2019, 20:35 IST
Last Updated 31 ಆಗಸ್ಟ್ 2019, 20:35 IST
ಡಾ. ಸಿ.ಎನ್. ಅಶ್ವತ್ಥನಾರಾಯಣ
ಡಾ. ಸಿ.ಎನ್. ಅಶ್ವತ್ಥನಾರಾಯಣ   

ಬೆಂಗಳೂರು: ಬೆಂಗಳೂರು ನಗರದಲ್ಲಿ ಸಂಚಾರ ದಟ್ಟಣೆಯೇ ಪ್ರಮುಖ ಸಮಸ್ಯೆ. ಸಾರ್ವಜನಿಕ ಸಂಪರ್ಕ ವ್ಯವಸ್ಥೆಯನ್ನು ರೂಪಿಸುವಲ್ಲಿ ವೇಗವನ್ನು ಮೈಗೂಡಿಸಿಕೊಳ್ಳದೆ ಹೋದರೆ ಬೆಂಗಳೂರು ಜೀವನ ಕಷ್ಟ ಎಂಬ ತಜ್ಞರ ಸಲಹೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ.

ವಿಧಾನಸೌಧದಲ್ಲಿ ಶನಿವಾರ ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಅವರ ಅಧ್ಯಕ್ಷತೆಯಲ್ಲಿ ನಡೆದ ಬೆಂಗಳೂರು ಅಭಿವೃದ್ಧಿ ಕುರಿತ ಸಮಾಲೋಚನಾ ಸಭೆಯ ಬಳಿಕ ಅವರು ಈ ವಿಷಯ ತಿಳಿಸಿದರು.

‘ಸಂಚಾರ ದಟ್ಟಣೆಗೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳುವುದೇ ಸರ್ಕಾರದ ಮೊದಲ ಆದ್ಯತೆಯಾಗಬೇಕು. ಅದುವೇ ಎಲ್ಲ ಸಮಸ್ಯೆಗಳ ಕೇಂದ್ರ ಬಿಂದು ಎಂಬುದನ್ನು ತಜ್ಞರು ವಿವರಿಸಿದ್ದಾರೆ. ಮಾಸ್ಟರ್‌ಪ್ಲಾನ್‌ ಅನ್ನು ಪರಿಷ್ಕರಿಸುವಂತೆ ತಿಳಿಸಿದ್ದಾರೆ. ಸಂಬಂಧಪಟ್ಟ ವಿವಿಧ ಇಲಾಖೆಗಳ ಅಧಿಕಾರಿಗಳು ಈ ಸಲಹೆಗಳನ್ನು ಬರೆದಿಟ್ಟುಕೊಂಡಿದ್ದಾರೆ. ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿ, ಶೀಘ್ರ ಕ್ರಮ ಕೈಗೊಳ್ಳಲಿದ್ದೇವೆ’ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

ADVERTISEMENT

‘ಹಲವು ವಿಷಯಗಳು ಹಳೆ ವಿಚಾರವೇ ಇರಬಹುದು, ಆದರೆ ಅನುಷ್ಠಾನದಲ್ಲಿ ಹೊಸ ವೇಗ ಬೇಕು ಎಂಬುದು ತಜ್ಞರ ಸಲಹೆ. ಅದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಲಿದೆ. ಬಿಬಿಎಂಪಿ, ನೀರು ಸರಬರಾಜು ಮಂಡಳಿ, ಬಿಡಿಎ ಸಹಿತ ವಿವಿಧ ಇಲಾಖೆಗಳ ನಡುವೆ ಸಮನ್ವಯ ಸಾಧಿಸಿ ಮುಂದಿನ ದಿನಗಳಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲಾಗುವುದು’ ಎಂದು ಸಚಿವರು ಹೇಳಿದರು.

ಸಭೆಯಲ್ಲಿ ಬಯೋಕಾನ್‌ ಮುಖ್ಯಸ್ಥೆ ಕಿರಣ್‌ ಮಜುಂದಾರ್‌ ಷಾ, ಮಣಿಪಾಲ ಗ್ಲೋಬಲ್‌ ಎಜುಕೇಶನ್‌ನ ಅಧ್ಯಕ್ಷಟಿ. ವಿ. ಮೋಹನದಾಸ್‌ ಪೈ, ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯ ದರ್ಶಿ ಇ.ವಿ. ರಮಣರೆಡ್ಡಿ, ಪೊಲೀಸ್‌ ಕಮಿಷನರ್ ಭಾಸ್ಕರ ರಾವ್‌, ಬಿಎಂ ಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಅಜಯ್‌ ಸೇಠ್‌ ಇದ್ದರು.

**

250 ಕಿ.ಮೀ. -ಮೆಟ್ರೊ ರೈಲು ಮಾರ್ಗ ಪ್ರಸ್ತಾವ

5 ಕಿ.ಮೀ. -ಈಗ ವರ್ಷಕ್ಕೆ ನಿರ್ಮಾಣವಾಗುತ್ತಿರುವ ಮೆಟ್ರೊ ರೈಲು ಮಾರ್ಗ

45 ಕಿ.ಮೀ. - ಈಗ ಇರುವ ಮೆಟ್ರೊ ರೈಲುಮಾರ್ಗದ ಉದ್ದ

30 ಲಕ್ಷ - 250 ಕಿ.ಮೀ.ಉದ್ದದ ಮೆಟ್ರೊ ರೈಲುಮಾರ್ಗ ನಿರ್ಮಾಣವಾದರೆ ಪ್ರತಿದಿನ ಸಂಚರಿಸುವ ಪ್ರಯಾಣಿಕರ ಸಂಖ್ಯೆ

6,500 - ನಗರದಲ್ಲಿ ಈಗ ಸಂಚರಿಸುತ್ತಿರುವ ಸಾರಿಗೆ ಬಸ್‌ಗಳು

10,000 - ಅಗತ್ಯವಿರುವ ಸಾರಿಗೆ ಬಸ್‌ಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.