ADVERTISEMENT

ಬೆಂಗಳೂರು: ಆಟೊ ಚಾಲಕರಿಗೆ ಬಿಸಿ ಮುಟ್ಟಿಸಿದ ಪೊಲೀಸರು

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2022, 20:10 IST
Last Updated 25 ಅಕ್ಟೋಬರ್ 2022, 20:10 IST
ಆಟೊ ಜಪ್ತಿ ಮಾಡಿದ ಪೊಲೀಸರು
ಆಟೊ ಜಪ್ತಿ ಮಾಡಿದ ಪೊಲೀಸರು   

ಬೆಂಗಳೂರು: ಸಾಲು ಸಾಲು ರಜೆ ಹಾಗೂ ದೀಪಾವಳಿ ಹಬ್ಬದ ಕಾರಣಕ್ಕೆ ಓಡಾಟ ನಡೆಸುತ್ತಿದ್ದ ಪ್ರಯಾಣಿಕರಿಂದ ದುಪ್ಪಟ್ಟು ದರ ಪಡೆದು ಸುಲಿಗೆ ಮಾಡುತ್ತಿದ್ದ ಆಟೊ ಚಾಲಕರಿಗೆ ನಗರ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ದುಬಾರಿ ಹಣ ವಸೂಲಿ ದೂರು ಬಂದದ್ದರಿಂದ ಮಫ್ತಿಯಲ್ಲಿ ವಿಶೇಷ ಕಾರ್ಯಾಚರಣೆಗೆ ಇಳಿದ ಟ್ರಾಫಿಕ್‌ ಪೊಲೀಸರು, ಒಟ್ಟು 312 ಆಟೊ ಜಪ್ತಿ ಮಾಡಿದ್ದಾರೆ.

‘ಮೀಟರ್ ಮೇಲೆ ₹ 50 ಕೊಡಿ’, ‘ದರಕ್ಕಿಂತ ಒಂದೂವರೆ ಪಟ್ಟು ಹೆಚ್ಚು ಕೊಡಿ’, ‘ಕತ್ರಿಗುಪ್ಪೆಗೆ ಬರೋಲ್ಲಾ ಕಣ್ರಿ...’ ಈ ರೀತಿ ಹೇಳಿ ನಿಯಮ ಉಲ್ಲಂಘನೆ ಮಾಡುತ್ತಿದ್ದ ಆಟೊ ಚಾಲಕರ ವಿರುದ್ಧ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ಜಪ್ತಿ ಮಾಡಿದ ಆಟೊಗಳ ಪೈಕಿ 307 ಆಟೊಗಳನ್ನು ಬಿಡುಗಡೆ ಮಾಡಿದ್ದಾರೆ. 5 ಆಟೊಗಳು ಠಾಣೆ ಆವರಣದಲ್ಲಿಯೇ ಇವೆ.

ADVERTISEMENT

ಮೆಟ್ರೊ ರೈಲಿನ ಸೌಲಭ್ಯವಿಲ್ಲದ ಕಡೆಗಳಲ್ಲಿ ಆಟೊದಲ್ಲಿ ತೆರಳುವುದು ಪ್ರಯಾಣಿಕರಿಗೆ ಅನಿವಾರ್ಯ. ಸ್ವಂತ ವಾಹನವಿಲ್ಲದವರು ದೀಪಾವಳಿ ಹಬ್ಬದ ಶಾಪಿಂಗ್‌ ಹಾಗೂ ಅಗತ್ಯ ವಸ್ತುಗಳ ಖರೀದಿಗೆ ಆಟೊ ಅವಲಂಬಿಸಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡಿದ್ದ ಚಾಲಕರು ದುಬಾರಿ ದರ ವಸೂಲಿ ಮಾಡಿದ್ದಾರೆ. ದೂರದ ಊರುಗಳಿಂದ ಬರುವ ಪ್ರಯಾಣಿಕರಿಗೆ ನೆಪ ಹೇಳಿ ಹೆಚ್ಚಿನ ಹಣ ವಸೂಲಿ ಮಾಡುತ್ತಿದ್ದರು. ಅಂತಹ ಚಾಲಕರನ್ನು ಪತ್ತೆಹಚ್ಚಿ ಆಟೊ ಜಪ್ತಿ ಮಾಡಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ನಿಗದಿಯಾದದ್ದಕ್ಕಿಂತ ದುಬಾರಿ ದರ ಪಡೆಯುತ್ತಿದ್ದ ಕಾರಣಕ್ಕೆ ಕಬ್ಬನ್‌ಪಾರ್ಕ್‌ ಭಾಗದಲ್ಲಿ 7, ಹೈಗ್ರೌಂಡ್ಸ್‌ನಲ್ಲಿ 15, ಸದಾಶಿವನಗರದಲ್ಲಿ 18, ಹಲಸೂರು ಗೇಟ್‌ನಲ್ಲಿ 11, ಚಿಕ್ಕಪೇಟೆಯಲ್ಲಿ 12, ಕೆಂಗೇರಿಯಲ್ಲಿ 12, ಮಲ್ಲೇಶ್ವರದಲ್ಲಿ 15, ರಾಜಾಜಿನಗರದಲ್ಲಿ 12, ಚಾಮರಾಜಪೇಟೆಯಲ್ಲಿ 28 ಆಟೊಗಳನ್ನು ಜಪ್ತಿ ಮಾಡಲಾಗಿದೆ. ‘ಚಾಮರಾಜಪೇಟೆ ಭಾಗದಲ್ಲಿ ಹೆಚ್ಚಿನ ದರ ಪಡೆಯುವುದು ಮಾಮೂಲಿ ಆಗಿದೆ’ ಎಂದು ಪ್ರಯಾಣಿಕರು ದೂರಿದ್ದಾರೆ.

ರಾತ್ರಿ ವೇಳೆ ವಸೂಲಿ:
ಹೊರ ರಾಜ್ಯ ಹಾಗೂ ಹೊರ ಜಿಲ್ಲೆಗಳಿಂದ ಮೆಜಿಸ್ಟಿಕ್‌ಗೆ ಮಧ್ಯರಾತ್ರಿ ಬರುವ ಪ್ರಯಾಣಿಕರಿಂದ ನಿಗದಿತ ದರಕ್ಕಿಂತ ನಾಲ್ಕುಪಟ್ಟು ಹೆಚ್ಚು ದರ ಪಡೆಯುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕು ಎಂದು ಪ್ರಯಾಣಿಕರು ಆಗ್ರಹಿಸಿದ್ದಾರೆ.

ಬಾಡಿಗೆಗೆ ಬರಲು ಹಿಂದೇಟು:
ತಾವು ಕೇಳಿದಷ್ಟು ಹಣ ನೀಡಿಲ್ಲ ಎಂಬ ಕಾರಣಕ್ಕೆ ಕೆಲವು ಸ್ಥಳಗಳಲ್ಲಿ ಬಾಡಿಗೆಗೆ ಬರಲು ಆಟೊ ಚಾಲಕರು ಹಿಂದೇಟು ಹಾಕುತ್ತಿದ್ದರು. ಅಂತಹ 270 ಆಟೊಗಳನ್ನು ಪತ್ತೆ ಮಾಡಿ ಚಾಲಕರಿಗೆ ಎಚ್ಚರಿಕೆ ನೀಡಲಾಗಿದೆ.

ಕಬ್ಬನ್‌ ಪಾರ್ಕ್‌ ಬಳಿ 11, ಹೈಗ್ರೌಂಡ್ಸ್‌ ಭಾಗದಲ್ಲಿ 10, ಬಾಣಸವಾಡಿ 12, ಚಿಕ್ಕಪೇಟೆ 11, ರಾಜಾಜಿನಗರ 12, ಚಾಮರಾಜಪೇಟೆಯಲ್ಲಿ 17 ಆಟೊ ಚಾಲಕರಿಗೆ ಎಚ್ಚರಿಕೆ ನೀಡಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

‘ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಬಸ್‌ಗಳು, ಟರ್ಮಿನಲ್‌ ಬಳಿಗೆ ಬರುವುದನ್ನೇ ಆಟೊ ಚಾಲಕರು ಕಾಯುತ್ತಿರುತ್ತಾರೆ. ಬಸ್‌ ಬಂದ ತಕ್ಷ
ಣವೇ ಪ್ರಯಾಣಿಕರು ಬಸ್ಸಿ ನಿಂದ ಇಳಿಯುವುದಕ್ಕೂ ಸ್ಥಳಾವಕಾಶ ನೀಡುವುದಿಲ್ಲ. ಇದರಿಂದ ಪ್ರಯಾಣಿಕರಿಗೆ ಕಿರಿಕಿರಿ ಉಂಟಾಗುತ್ತಿದೆ. ಸುಗಮ ಸಂಚಾರಕ್ಕೂ ತೊಂದರೆ ಆಗುತ್ತಿದೆ’ ಎಂದು ಪ್ರಯಾಣಿಕರು ದೂರಿದ್ದಾರೆ.

ನಿಯಮ ಉಲ್ಲಂಘನೆ ಪ್ರಕರಣಗಳು (ಕಳೆದ ಮೂರು ದಿನಗಳಲ್ಲಿ)

ಬಾಡಿಗೆಗೆ ಬರಲು ಹಿಂದೇಟು;270

ದುಪ್ಪಟ್ಟು ದರ ವಸೂಲಿ;312

ಇತರೆ ಪ್ರಕರಣಗಳು;532

ಒಟ್ಟು; 1,114

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.