ಬೆಂಗಳೂರು: ಬಿರುಕು ಬಿಟ್ಟಿರುವ ಗೋಡೆಗಳು, ಕಿತ್ತುಹೋದ ವೈರ್‌ಗಳು, ಕಾಣೆಯಾದ ಬಲ್ಬುಗಳು, ಮದ್ಯದ ಬಾಟಲಿಗಳು, ಸುತ್ತಲೂ ಕಸದ ರಾಶಿ, ಎದೆಯೆತ್ತರ ಬೆಳೆದ ಗಿಡ–ಗಂಟಿಗಳು..
ಇದು ಬೆಂಗಳೂರು ಅಭಿವೃದ್ಧಿ ಪ್ರಾಧಿ ಕಾರ(ಬಿಡಿಎ), ಬಿಬಿಎಂಪಿ ಕಾಯಂ ಪೌರಕಾರ್ಮಿಕರಿಗೆ ದಾಸನಪುರ ಹೋಬಳಿ ಆಲೂರಿನಲ್ಲಿ ನಿರ್ಮಿಸಿರುವ ವಸತಿ ಸಮುಚ್ಚಯದ ಸ್ಥಿತಿ.
ನಗರದಿಂದ ಸುಮಾರು 25 ಕಿ.ಮೀ.ದೂರದಲ್ಲಿರುವ ಆಲೂರು ಗ್ರಾಮದಲ್ಲಿ ಆರು ಬ್ಲಾಕ್‌ಗಳಲ್ಲಿ 400 ಫ್ಲ್ಯಾಟ್‌ಗಳ (ಸಿಂಗಲ್ ಬಿಎಚ್‌ಕೆ) ವಸತಿ ಸಮುಚ್ಚಯವನ್ನು 2014-15ರಲ್ಲಿ ನಿರ್ಮಿಸಲಾಗಿದೆ. ಪ್ರತಿ ಫ್ಲ್ಯಾಟ್, ಒಂದು ಮಲಗುವ ಕೋಣೆ, ಅಡುಗೆ ಮನೆ ಮತ್ತು ಹಾಲ್ ಹೊಂದಿದೆ. ಆದರೆ, ಯೋಜನೆ ಪೂರ್ಣಗೊಂಡು ದಶಕ ಕಳೆದರೂ ವಸತಿ ಸಮುಚ್ಚಯದಲ್ಲಿ ಯಾರೂ ವಾಸಿಸುತ್ತಿಲ್ಲ. ಹಾಗಾಗಿ ಸಮುಚ್ಚಯದ ಆವರಣದ ಸುತ್ತ ಕಸದ ರಾಶಿ ಬಿದ್ದಿದೆ. ನಿರ್ವಹಣೆಯಿಲ್ಲದ ಪರಿಣಾಮ, ಗೋಡೆಗಳು ಬಿರುಕು ಬಿಟ್ಟಿದ್ದು, ಅಡುಗೆ ಮನೆಯ ಸ್ಲ್ಯಾಬ್‌ಗಳು ಒಡೆದುಹೋಗಿವೆ.
ಈ ಯೋಜನೆಗೆ ಪೌರಾಡಳಿತ ನಿರ್ದೇಶನಾಲಯ ಮತ್ತು ಬಿಬಿಎಂಪಿ ಅನುದಾನ ಒದಗಿಸಿವೆ. 10ರಿಂದ 15 ವರ್ಷ ಸೇವೆ ಸಲ್ಲಿಸಿರುವ, ಸ್ವಂತ ಮನೆಯಿಲ್ಲದ ಕಾಯಂ ಪೌರಕಾರ್ಮಿಕರನ್ನು ಯೋಜನೆಯ ಫಲಾನುಭವಿ
ಗಳನ್ನಾಗಿ ಪರಿಗಣಿಸಲಾಗುತ್ತದೆ.
‘ಪೌರಕಾರ್ಮಿಕರಿಗೆ ನಿರ್ಮಿಸಿರುವ ಫ್ಲ್ಯಾಟ್‌ಗಳು ನಿರ್ವಹಣೆಯಿಲ್ಲದೆ ಪಾಳುಬಿದ್ದಿವೆ. ನಲ್ಲಿಗಳು, ವೈರ್‌ಗಳನ್ನು ಕಳವು ಮಾಡಲಾಗಿದೆ. ಯೋಜನೆ ಮುಗಿದು ಹಲವು ವರ್ಷಗಳಾಗಿವೆ. ಕೆಲವು ಪೌರಕಾರ್ಮಿಕರು ನಿವೃತ್ತರಾಗಿದ್ದಾರೆ. ಕಾರ್ಮಿಕರಿಗೆ ವಾಸದ ಭಾಗ್ಯ ದೊರೆತಿಲ್ಲ’ ಎಂದು ಪೌರಕಾರ್ಮಿಕರ ಪರಿವರ್ತನಾ ಸಂಘದ ಸಿ.ಎನ್.ಆನಂದ್ ಬೇಸರ ವ್ಯಕ್ತಪಡಿಸಿದರು.
‘ಫ್ಯಾಟ್‌ಗಳಿಗೆ ನೀರು ಮತ್ತು ವಿದ್ಯುತ್ ಸೇರಿದಂತೆ ಮೂಲಸೌಕರ್ಯ ವ್ಯವಸ್ಥೆ ಕಲ್ಪಿಸುವ ಕೆಲಸ ಬಾಕಿಯಿದೆ. ವಸತಿ ಸಮುಚ್ಚಯದ ಜಾಗವನ್ನು ಕಸ ಸುರಿಯುವ ತಾಣವನ್ನಾಗಿ ಮಾಡಿ ಕೊಂಡಿದ್ದಾರೆ’ ಎಂದು ದೂರಿದರು.
‘ಸಂಬಂಧಪಟ್ಟ ಅಧಿಕಾರಿಗಳು ತಕ್ಷಣವೇ ಫ್ಲ್ಯಾಟ್‌ಗಳನ್ನು ದುರಸ್ತಿಗೊಳಿಸಬೇಕು. ಆಲೂರಿನಿಂದ ನಗರದ ಸ್ವಚ್ಛತಾ ಕೆಲಸಕ್ಕೆ ಪೌರಕಾರ್ಮಿಕರು ಬಂದು ಹೋಗಲು ಬಸ್ ಸೇವೆ ಕಲ್ಪಿಸಬೇಕು. ಫ್ಲ್ಯಾಟ್ ನೋಂದಣಿ ವೆಚ್ಚವನ್ನು ಬಿಬಿಎಂಪಿ ಭರಿಸಬೇಕು. ಫ್ಲ್ಯಾಟ್‌ಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸಬೇಕು’ ಎಂದು ಅವರು ಒತ್ತಾಯಿಸಿದರು.
‘ನೋಂದಣಿಗೆ ಫಲಾನುಭವಿಗಳ ಹಿಂದೇಟು’
‘ಫ್ಲ್ಯಾಟ್‌ಗಳನ್ನು ಪೌರಕಾರ್ಮಿಕರಿಗೆ ಹಂಚಿಕೆ ಮಾಡಲಾಗಿದೆ. ಆದರೆ ಫಲಾನುಭವಿಗಳು ತಮ್ಮ ಹೆಸರಿಗೆ ನೋಂದಣಿ ಮಾಡಿಸಿಕೊಳ್ಳುತ್ತಿಲ್ಲ. ನೋಂದಣಿ ಶುಲ್ಕ ₹66 ಸಾವಿರದಿಂದ ₹70 ಸಾವಿರ ಇದೆ. ಬಿಬಿಎಂಪಿ ವತಿಯಿಂದಲೇ ಶುಲ್ಕವನ್ನು ಭರಿಸುವಂತೆ ಪೌರಕಾರ್ಮಿಕರು ಹೇಳುತ್ತಿದ್ದಾರೆ’ ಎಂದು ಬಿಡಿಎ ಸಹಾಯಕ ಎಂಜಿನಿಯರ್ ಬಸವರಾಜು ಹೇಳಿದರು.
‘ಫ್ಲ್ಯಾಟ್ ವೆಚ್ಚ ₹11.20 ಲಕ್ಷ. ಇದನ್ನು ನಿರ್ಮಿಸಿ ಹತ್ತು ವರ್ಷ ಆಗಿದೆ. ಯಾರೂ ಬಂದು ವಾಸ ಮಾಡದ ಕಾರಣ ನಲ್ಲಿಗಳು ಸಣ್ಣಪುಟ್ಟ ಸಾಮಗ್ರಿಗಳ ಕಳ್ಳತನ ಆಗಿದೆ. ಇದರಿಂದ ಬಿಡಿಎಗೆ ₹1 ಕೋಟಿ ನಷ್ಟವಾಗಿದೆ. ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಕ್ಕೆ ನಿರ್ವಹಣೆ ಜವಾಬ್ದಾರಿ ನೀಡಲಾಗಿದೆ. ಫ್ಲ್ಯಾಟ್‌ಗಳನ್ನು ದುರಸ್ತಿ ಮಾಡಿಸಿಕೊಡಲಾಗುವುದು. ಪೌರಕಾರ್ಮಿಕರು ತಮ್ಮ ಹೆಸರಿಗೆ ಫ್ಲ್ಯಾಟ್ ನೋಂದಣಿ ಮಾಡಿಸಿಕೊಳ್ಳಬೇಕು ಅಷ್ಟೇ’ ಎಂದು ಹೇಳಿದರು.
ಆಯೋಗ ಬೇಸರ
ವಸತಿ ಸಮುಚ್ಚಯ ಪೂರ್ಣಗೊಂಡು ಹತ್ತು ವರ್ಷ ಕಳೆದರೂ ಬಿಬಿಎಂಪಿ ಕಾಯಂ ಪೌರಕಾರ್ಮಿಕರಿಗೆ ಹಂಚಿಕೆ ಫ್ಲ್ಯಾಟ್‌ಗಳನ್ನು ಹಂಚಿಕೆ ಮಾಡದಿರು ವುದಕ್ಕೆ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗ ಬೇಸರ ವ್ಯಕ್ತಪಡಿಸಿದೆ. ಈ ಸಂಬಂಧ ಬಿಡಿಎ ಮತ್ತು ಬಿಬಿಎಂಪಿ ಆಯುಕ್ತರಿಗೆ ಪತ್ರ ಬರೆದಿರುವ ಆಯೋಗದ ಕಾರ್ಯದರ್ಶಿ ಚಂದ್ರಕಲಾ ‘ನಿರ್ವಹಣೆಯ ಕೊರತೆಯಿಂದಾಗಿ ಗೋಡೆಗಳು ಬಿರುಕು ಬಿಟ್ಟಿವೆ. ಹಲವಾರು ಮನೆಗಳಲ್ಲಿ ಕಸ ಕಡ್ಡಿ ತುಂಬಿಕೊಂಡಿದೆ. ಪೌರಕಾರ್ಮಿಕರು ಫ್ಲ್ಯಾಟ್‌ಗಳನ್ನು ಪಡೆಯಲು ಯೋಚಿಸಬೇಕಾದ ಸ್ಥಿತಿ ಬಂದಿದೆ. ಎಲ್ಲಾ ನ್ಯೂನತೆಗಳನ್ನು ಸರಿಪಡಿಸಿ ನಿಯಮಾನುಸಾರ ಕಾಯಂ ಪೌರಕಾರ್ಮಿಕರಿಗೆ ಫ್ಯ್ಲಾಟ್‌ಗಳನ್ನು ಹಂಚಿಕೆ ಮಾಡಿ ಆಯೋಗದ ಅಧ್ಯಕ್ಷರಿಗೆ ವರದಿ ಸಲ್ಲಿಸಬೇಕು’ ಎಂದು ಸೂಚಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.