ADVERTISEMENT

ಕೋವಿಡ್‌ ನಂತರ ದೀಪಾವಳಿ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ವಾಯುಮಾಲಿನ್ಯ ದಾಖಲೆ ಇಳಿಕೆ

ಕೋವಿಡ್‌ ನಂತರ ಬೆಂಗಳೂರು ನಗರದಲ್ಲಿ ವಾಯು ಮಾಲಿನ್ಯ ಭಾರಿ ಇಳಿಕೆ: ಶಬ್ದ ಮಾಲಿನ್ಯಕ್ಕಿಲ್ಲ ಅಂಕುಶ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2025, 23:53 IST
Last Updated 23 ಅಕ್ಟೋಬರ್ 2025, 23:53 IST
   

ಬೆಂಗಳೂರು: ಕೋವಿಡ್‌ ನಂತರದಲ್ಲಿ ಮೊದಲ ಬಾರಿಗೆ ದೀಪಾವಳಿ ಸಂದರ್ಭದಲ್ಲಿ ವಾಯು ಮಾಲಿನ್ಯ ನಗರದಲ್ಲಿ ದಾಖಲೆ ಪ್ರಮಾಣದಲ್ಲಿ ಇಳಿಕೆಯಾಗಿದೆ.

ಸಾಂಕ್ರಾಮಿಕ ರೋಗ ಕೋವಿಡ್‌ ಬಾಧಿಸಿದ್ದ 2020ರಲ್ಲಿ ಅದರ ಹಿಂದಿನ ವರ್ಷಕ್ಕಿಂತ ದೀಪಾವಳಿ ಸಂದರ್ಭದಲ್ಲಿ ಶೇ 30.34ರಷ್ಟು ವಾಯು ಮಾಲಿನ್ಯ ಕಡಿಮೆಯಾಗಿತ್ತು. 2024ಕ್ಕೆ ಹೋಲಿಸಿದರೆ 2025ರಲ್ಲಿ ವಾಯು ಮಾಲಿನ್ಯ (ವಾಯು ಗುಣಮಟ್ಟ ಇಂಡೆಕ್ಸ್‌– ಎಕ್ಯೂಐ) ಶೇ 44ರಷ್ಟು ಇಳಿಕೆಯಾಗಿದೆ.

2019 ಮತ್ತು 2020ರಲ್ಲಿ ಏಳು ಮಾಪನ ಕೇಂದ್ರಗಳಿದ್ದವು. ಪ್ರಸ್ತುತ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನಗರದ 11 ಸ್ಥಳಗಳಲ್ಲಿ ಎಕ್ಯೂಐ ಮಾಪನ ಕೇಂದ್ರಗಳನ್ನು ಹೊಂದಿದೆ. ಈ ದತ್ತಾಂಶದಂತೆ, ಕಳೆದ ವರ್ಷದ ದೀಪಾವಳಿ ಸಂದರ್ಭಕ್ಕಿಂತ ಈ ಬಾರಿ ಹೆಬ್ಬಾಳದಲ್ಲಿ ಅತಿಕಡಿಮೆ (–179%) ವಾಯು ಮಾಲಿನ್ಯ ದಾಖಲಾಗಿದೆ. 11 ಮಾಪನ ಕೇಂದ್ರದಲ್ಲಿ ಸಾಣೆಗುರುವನಹಳ್ಳಿಯಲ್ಲಿ ಮಾತ್ರ ಶೇ 2ರಷ್ಟು ವಾಯು ಮಾಲಿನ್ಯ ವೃದ್ಧಿಯಾಗಿದೆ.

ADVERTISEMENT

ಶಬ್ದ ಮಾಲಿನ್ಯಕ್ಕಿಲ್ಲ ಅಂಕುಶ:

ವಾಯು ಮಾಲಿನ್ಯ ದಾಖಲೆ ಪ್ರಮಾಣದಲ್ಲಿ ಕಡಿಮೆಯಾಗಿದ್ದರೂ, ದೀಪಾವಳಿ ಸಂದರ್ಭದಲ್ಲಿ ಶಬ್ದ ಮಾಲಿನ್ಯ ಮಾತ್ರ ಇಳಿಕೆಯಾಗಿಲ್ಲ. ‘ಬೆಂಗಳೂರಿನ ಹಿರಿಯ ಪರಿಸರ ಅಧಿಕಾರಿ’ ವ್ಯಾಪ್ತಿಯಲ್ಲಿ 14 ಮಾಪನ ಕೇಂದ್ರಗಳನ್ನು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹೊಂದಿದ್ದು, ಅದರಲ್ಲಿ ಆನೇಕಲ್‌, ನೆಲಮಂಗಲ, ದೊಡ್ಡಬಳ್ಳಾಪುರದಲ್ಲಿ ಮಾತ್ರ ಶಬ್ದ ಮಾಲಿನ್ಯ ಕಡಿಮೆಯಾಗಿದೆ.

ಹೊಸಕೋಟೆಯಲ್ಲಿ ಅತಿಹೆಚ್ಚು ಶಬ್ದ ಮಾಲಿನ್ಯ ದಾಖಲಾಗಿದ್ದು, ದಾಸರಹಳ್ಳಿ, ಪೀಣ್ಯ, ಎಇಸಿಎಸ್‌ ಲೇಔಟ್‌, ಕುಂದಲಹಳ್ಳಿ, ವೈಟ್‌ಫೀಲ್ಡ್, ಯಲಹಂಕ ಆರ್‌ಟಿಒ ಕಚೇರಿ ಪ್ರದೇಶಗಳಲ್ಲಿ ಶಬ್ದ ಮಾಲಿನ್ಯ ದೀಪಾವಳಿ ಸಂದರ್ಭದಲ್ಲಿ ಹೆಚ್ಚಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.