
ಬೆಂಗಳೂರು: ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್–1ರ ಆಗಮನ ದ್ವಾರದ ಪಿಕಪ್ ಪ್ರದೇಶದ ಉಚಿತ ಪಾರ್ಕಿಂಗ್ ಸಮಯವನ್ನು ಹೆಚ್ಚಿಸಲಾಗಿದೆ.
ಈ ಬದಲಾವಣೆಯು ಇಂದಿನಿಂದಲೇ ಜಾರಿಗೆ ಬರುತ್ತಿದ್ದು, ಇದುವರೆಗೂ ಇದ್ದ 10 ನಿಮಿಷದ ಉಚಿತ ಪಾರ್ಕಿಂಗ್ ಅನ್ನು 15 ನಿಮಿಷಕ್ಕೆ ಹೆಚ್ಚಳ ಮಾಡಲಾಗಿದೆ. ವಾಣಿಜ್ಯ ವಾಹನಗಳು ಮತ್ತು ಟ್ಯಾಕ್ಸಿ ಸೇವೆಗಳಿಗೆ ಈ ನಿಯಮ ಅನ್ವಯವಾಗಲಿದೆ ಎಂದು ವಿಮಾನ ನಿಲ್ದಾಣದ ನಿರ್ವಹಣೆ ಮಾಡುವ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರವು(ಬಿಐಎಎಲ್) ಹೇಳಿದೆ.
ಪ್ರಯಾಣಿಕರು ಮತ್ತು ಈ ಸೌಲಭ್ಯ ಬಳಸುವ ಇತರರ ಪ್ರತಿಕ್ರಿಯೆ ಆಧರಿಸಿ ಈ ಪರಿಷ್ಕರಣೆ ಮಾಡಲಾಗಿದೆ. ಪ್ರಯಾಣಿಕರು ಮತ್ತು ಅವರ ಕುಟುಂಬಗಳಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಈ ಬದಲಾವಣೆ ಮಾಡಲಾಗಿದೆ ಎಂದು ಬಿಐಎಎಲ್ ತಿಳಿಸಿದೆ.
ಡಿಸೆಂಬರ್ 13ರಂದು ಟರ್ಮಿನಲ್ 1ರಲ್ಲಿ ಜಾರಿಗೆ ತರಲಾದ ಹೊಸ ಪಿಕಪ್ ನಿಯಮಗಳ ಪ್ರಕಾರ, ವಾಣಿಜ್ಯ ವಾಹನಗಳು ಗೊತ್ತುಪಡಿಸಿದ ಪಾರ್ಕಿಂಗ್ ವಲಯಗಳಾದ ಪಿ3 ಮತ್ತು ಪಿ 4ರಲ್ಲಿ ಕಾಯಬೇಕಿತ್ತು. ಅಲ್ಲಿ ಆ ವಾಹನಗಳಿಗೆ 10 ನಿಮಿಷಗಳ ಉಚಿತ ಪಾರ್ಕಿಂಗ್ ಸೌಲಭ್ಯ ನೀಡಲಾಗಿತ್ತು. ಈಗ ಅದನ್ನು 15 ನಿಮಿಷಗಳಿಗೆ ವಿಸ್ತರಿಸಲಾಗಿದೆ. ಇದರ ನಂತರ, ಕ್ಯಾಬ್ ಚಾಲಕರು ಮೊದಲ ಅರ್ಧ ಗಂಟೆಯ ಸ್ಲಾಟ್‌ಗೆ ₹100. ಮತ್ತು ಆ ನಂತರದ ಹೆಚ್ಚುವರಿ ಪ್ರತಿ ಗಂಟೆಗೆ ₹50 ಶುಲ್ಕ ಪಾವತಿಸಬೇಕಾಗುತ್ತದೆ.
‘ಪಿ3/ಪಿ4 ಪಿಕಪ್ ಜಾಗಗಳಿಂದ ಪ್ರತೀ ಏಳು ನಿಮಿಷಕ್ಕೊಮ್ಮೆ ಬರುವ ಶಟ್ಟಲ್ ಗಾಡಿಗಳು, ಆರು ಕಾರುಗಳು, 10 ಬಗ್ಗೀಗಳಲ್ಲಿ ಪ್ರಯಾಣಿಕರು ಯಾವುದನ್ನಾದರೂ ಆಯ್ಕೆ ಮಾಡಿಕೊಳ್ಳಬಹುದು. ಇದರಿಂದ ಪ್ರಯಾಣಿಕರ ಸಂಚಾರ ಸುಗಮವಾಗುತ್ತದೆ’ ಎಂದು ಬಿಐಎಎಲ್ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.