
ದೇವನಹಳ್ಳಿ: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎರಡನೇ ದಿನವಾದ ಗುರುವಾರವೂ 99 ಇಂಡಿಗೊ ವಿಮಾನಗಳ ಹಾರಾಟ ರದ್ದಾಗಿದೆ.
ತಾವು ಪ್ರಯಾಣಿಸಬೇಕಿರುವ ವಿಮಾನಗಳ ಹಾರಾಟ ಸಮಯದ ಮಾಹಿತಿ ಪಡೆಯಲು ಸಹಾಯ ಕೇಂದ್ರಗಳಿಗೆ ಪ್ರಯಾಣಿಕರು ದಾಂಗುಡಿ ಇಟ್ಟರು. ಇದರಿಂದಾಗಿ ಭಾರಿ ಜನಸಂದಣಿ ಕಂಡು ಬಂದಿತು. ಕಳೆದೆರಡು ದಿನಗಳಲ್ಲಿ ಇಂಡಿಗೊ ಸಂಸ್ಥೆಯ 161 ವಿಮಾನಗಳು ಸಂಚಾರ ಸ್ಥಗಿತಗೊಂಡಿದೆ.
ವಿಮಾನಗಳ ಸಂಚಾರ ರದ್ದಾಗಿರುವ ಬಗ್ಗೆ ಸಂಸ್ಥೆಯು ಪ್ರಯಾಣಿಕರಿಗೆ ಮುಂಚಿತವಾಗಿಯೇ ಮಾಹಿತಿ ನೀಡಿರಲಿಲ್ಲ. ಪ್ರಯಾಣಿಕರು ಮೂರು ಗಂಟೆ ಮುಂಚಿತವಾಗಿಯೇ ಬಂದಿದ್ದರು. ಆದರೆ, ವಿಮಾನಗಳ ಹಾರಾಟ ರದ್ದಾಗಿದೆ ಎಂಬ ಮಾಹಿತಿ ತಿಳಿದು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ಇದರಿಂದ ಸಿಬ್ಬಂದಿ ಮತ್ತು ಪ್ರಯಾಣಿಕರ ಮಧ್ಯೆ ವಾಗ್ವಾದ ನಡೆಯಿತು.
ಗುರುವಾರ ಒಂದೇ ದಿನ ದೇಶದ ವಿವಿಧ ಭಾಗಗಳಿಗೆ ತೆರಳಬೇಕಿದ್ದ 45 ಮತ್ತು ದೇಶದ ವಿವಿಧ ಭಾಗಗಳಿಂದ ಇಲ್ಲಿಗೆ ಬರಬೇಕಿದ್ದ 54 ವಿಮಾನಗಳ ಸಂಚಾರ ರದ್ದಾಗಿದೆ ಎಂದು ಮೂಲಗಳು ತಿಳಿಸಿವೆ.
ವಿಮಾನಯಾನ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವ ಪೈಲಟ್‌ಗಳು, ಗ್ರೌಂಡ್ ಸಿಬ್ಬಂದಿ, ಗಗನಸಖಿಯರು ಇಂತಿಷ್ಟೇ ಅವಧಿ ಕೆಲಸ ಮಾಡಬೇಕು ಎಂಬ ಹೊಸ ನಿಯಮ ಡಿಸೆಂಬರ್ 1ರಿಂದ ಜಾರಿಗೆ ಬಂದಿದೆ. ಇದರಿಂದಾಗಿ ಇಂಡಿಗೊ ವಿಮಾನಯಾನ ಸಂಸ್ಥೆಯಲ್ಲಿ ಭಾರಿ ಪ್ರಮಾಣದ ಸಿಬ್ಬಂದಿ ಕೊರತೆ ಎದುರಾಗಿದೆ. ಇದೇ ಕಾರಣಕ್ಕೆ ವಿಮಾನಗಳ ಸಂಚಾರ ರದ್ದು ಅಥವಾ ಅನಿರ್ದಿಷ್ಟಾವಧಿವರೆಗೆ ವಿಳಂಬವಾಗುತ್ತಿವೆ ಎಂದು ತಿಳಿದು ಬಂದಿದೆ.
ಬೆಂಗಳೂರು ಮೂಲದ ವ್ಯಕ್ತಿಯೊಬ್ಬರ ವಿವಾಹ ಒಡಿಶಾದ ಭುವನೇಶ್ವರದಲ್ಲಿ ಶುಕ್ರವಾರ ನಿಗದಿಯಾಗಿತ್ತು. ಇಂಡಿಗೊ ವಿಮಾನಗಳ ಸಂಚಾರ ವ್ಯತ್ಯಯ ಮತ್ತು ರದ್ದತಿಯಿಂದಾಗಿ ಮದುವೆಯನ್ನೇ ಮುಂದೂಡುವ ಅನಿವಾರ್ಯತೆ ಎದುರಾಗಿದೆ ಎಂದು ವ್ಯಕ್ತಿಯೊಬ್ಬರು ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ವರನ ತಂದೆ ಮಹೇಶ್ ‘ಭುವನೇಶ್ವದಲ್ಲಿ ಶುಕ್ರವಾರ ನಿಗದಿಯಾಗಿದ್ದ ನನ್ನ ಮಗನ ಮದುವೆಗೆ ತೆರಳಲು ಇಂಡಿಗೊ ವಿಮಾನದಲ್ಲಿ ಮುಂಗಡವಾಗಿ 110 ಟಿಕೆಟ್‌ಗಳನ್ನು ಕಾಯ್ದಿರಿಸಿದ್ದೆವು. ಆದರೆ ಕಳೆದೆರಡು ದಿನಗಳಿಂದ ವಿಮಾನಗಳ ಸಂಚಾರ ವ್ಯತ್ಯಯ ಮತ್ತು ರದ್ದಾಗುತ್ತಿರುವ ಹಿನ್ನೆಲೆಯಲ್ಲಿ ಶುಕ್ರವಾರ ಸಂಚರಿಸಬೇಕಿರುವ ವಿಮಾನ ಸೇವೆ ಲಭ್ಯವಿರಲಿದೆಯೇ ಎಂಬುದನ್ನು ತಿಳಿದುಕೊಳ್ಳಲು ಬಂದಿದ್ದೆ.
ಈ ಕುರಿತು ಸಿಬ್ಬಂದಿಯೊಂದಿಗೆ ಎರಡು ಗಂಟೆ ಚರ್ಚಿಸಿದ್ದೇನೆ. ಆದರೆ ವಿಮಾನ ಸೇವೆ ಲಭ್ಯವಿರಲಿದೆ ಎಂಬ ಖಚಿತ ಮಾಹಿತಿ ಲಭ್ಯವಾಗಲಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು. ವಿಮಾನ ರದ್ದಾಗಿರುವುದರಿಂದ ಮದುವೆ ಮುಂದೂಡಬೇಕಾಗಿದೆ. ನಮಗಾಗಿ ವಧುವಿನ ಕಡೆಯವರು ಭುವನೇಶ್ವರದಲ್ಲಿ ಮದುವೆ ಸಿದ್ಧತೆ ಮಾಡಿಕೊಂಡಿದ್ದರು. ಅವರಿಗೆ ಏನು ಉತ್ತರ ಹೇಳಬೇಕೊ ಎಂದು ಕೈಕೈ ಹಿಸುಕಿಕೊಂಡರು.
ಕಾರ್ಯಾಚರಣೆಯನ್ನು ಸಹಜಸ್ಥಿತಿಗೆ ತರುವುದು, ಸಮಯ ಪರಿಪಾಲನೆಯನ್ನು ಮತ್ತೆ ಹಳಿಗೆ ತರುವುದು ತಕ್ಷಣದ ಗುರಿಯಾಗಿದೆಪೀಟರ್ ಎಲ್ಬರ್ಸ್, ಇಂಡಿಗೊ ಸಿಇಒ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.