
ಬೆಂಗಳೂರು: ಬಾಣಸವಾಡಿ ಮುಖ್ಯ ರಸ್ತೆಯ ಐಒಸಿ ಜಂಕ್ಷನ್‌ನಲ್ಲಿ ಎಲಿವೇಟೆಡ್ ರೋಟರಿ ಮೇಲ್ಸೇತುವೆ ನಿರ್ಮಾಣ ಕುರಿತು ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ಬಿ-ಸ್ಮೈಲ್ ಹಾಗೂ ಕೆ-ರೈಡ್ ಅಧಿಕಾರಿಗಳೊಂದಿಗೆ ಜಂಟಿಯಾಗಿ ಸ್ಥಳ ಪರಿಶೀಲನೆ ನಡೆಸಿದರು.
ಐಒಸಿ ಜಂಕ್ಷನ್‌ನಲ್ಲಿ ಸುಮಾರು 3 ಕಿ.ಮೀ.ಗೂ ಹೆಚ್ಚು ಉದ್ದದ ಎಲಿವೇಟೆಡ್ ರೋಟರಿ ಮೇಲ್ಸೇತುವೆ ನಿರ್ಮಾಣ ಹಾಗೂ ಬೈಯ್ಯಪ್ಪನಹಳ್ಳಿ ರೈಲ್ವೆ ಲೆವೆಲ್ ಕ್ರಾಸಿಂಗ್‌ನಲ್ಲಿ ಹೆಚ್ಚುವರಿ ದ್ವಿಪಥ ರೈಲ್ವೆ ಮೇಲ್ಸೇತುವೆ ನಿರ್ಮಾಣದ ಕುರಿತು ಕೆ-ರೈಡ್ ಮತ್ತು ಬಿ-ಸ್ಮೈಲ್ ಅಧಿಕಾರಿಗಳು ಪರಸ್ಪರ ಸಮನ್ವಯ ಸಾಧಿಸಿ, ನಾಗರಿಕರಿಗೆ ಯಾವುದೇ ತೊಂದರೆ ಉಂಟಾಗದಂತೆ ಏಕಕಾಲದಲ್ಲಿ ಕಾಮಗಾರಿಯನ್ನು ಕೈಗೊಂಡು, ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಬೇಕು ಎಂದು ಮಹೇಶ್ವರ್‌ರಾವ್ ಸೂಚಿಸಿದರು.
‘ರೋಟರಿ ಮೇಲ್ಸೇತುವೆ ನಿರ್ಮಾಣಕ್ಕೆ ಸಂಬಂಧಿಸಿದ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಪ್ರಸ್ತುತ ಆರ್ಥಿಕ ಬಿಡ್‌ಗಳ ಮೌಲ್ಯಮಾಪನ ಹಂತದಲ್ಲಿದೆ. ಗುತ್ತಿಗೆದಾರರೊಂದಿಗೆ ದರ ನಿಗದಿ ಚರ್ಚೆ ನಡೆಯುತ್ತಿದ್ದು, ಶೀಘ್ರದಲ್ಲೇ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು. ಸರ್ಕಾರದ ಅನುಮೋದನೆ ದೊರೆತ ನಂತರ ಕಾಮಗಾರಿ ಪ್ರಾರಂಭವಾಗಲಿದೆ. ಇದೇ ಸ್ಥಳದಲ್ಲಿ ಕೆ-ರೈಡ್‌ನಿಂದ ಬೆಂಗಳೂರು ಉಪನಗರ ರೈಲು ಯೋಜನೆಯ (ಬಿಎಸ್‌ಆರ್‌ಪಿ) ಕಾಮಗಾರಿಯೂ ಪ್ರಾರಂಭವಾಗಲಿದ್ದು, ಸಮನ್ವಯದಿಂದ ಕಾಮಗಾರಿ ಪೂರ್ಣಗೊಳಿಸಬೇಕು’ ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
‘ಅಂದಾಜು ₹380 ಕೋಟಿ ವೆಚ್ಚದಲ್ಲಿ ಎಲಿವೇಟೆಡ್ ರೋಟರಿ ಮೇಲ್ಸೇತುವೆ ಕಾಮಗಾರಿ ಪ್ರಾರಂಭವಾಗಲಿದೆ. ಬೈಯ್ಯಪ್ಪನಹಳ್ಳಿ ರೈಲ್ವೆ ಲೆವೆಲ್ ಕ್ರಾಸಿಂಗ್‌ನಲ್ಲಿ ಹೆಚ್ಚುವರಿ 2-ಲೇನ್ ರೈಲ್ವೆ ಓವರ್‌ಬ್ರಿಡ್ಜ್ ನಿರ್ಮಿಸಲಾಗುತ್ತದೆ’ ಎಂದರು.
‘ಮಾರುತಿ ಸೇವಾನಗರ, ಬಾಣಸವಾಡಿ, ಕಮ್ಮನಹಳ್ಳಿ, ಬೈಯ್ಯಪ್ಪನಹಳ್ಳಿ ಮಾರ್ಗಗಳ ನಡುವಿನ ಸಂಚಾರ ದಟ್ಟಣೆ ನಿವಾರಿಸುವ ಉದ್ದೇಶದಿಂದ ರೋಟರಿ ಮೇಲ್ಸೇತುವೆ ನಿರ್ಮಾಣ ಮಾಡಲಾಗುತ್ತಿದೆ. ಇದರಿಂದ ಸಂಚಾರ ದಟ್ಟಣೆ ಕಡಿಮೆ ಆಗಲಿದೆ. ಸುತ್ತಮುತ್ತಲಿನ ಪ್ರದೇಶಗಳಿಗೆ ಸುಗಮ ಸಂಚಾರಕ್ಕೆ ಅವಕಾಶ ಸಿಗಲಿದೆ’ ಎಂದು ವಿವರಿಸಿದರು.
ಬಿ-ಸ್ಮೈಲ್ ತಾಂತ್ರಿಕ ನಿರ್ದೇಶಕ ಬಿ.ಎಸ್. ಪ್ರಹ್ಲಾದ್, ಕಾರ್ಯಪಾಲಕ ಎಂಜಿನಿಯರ್‌ಗಳು, ಕೆ-ರೈಡ್ ಅಧಿಕಾರಿಗಳು ಹಾಗೂ ಇತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.