ಬೊಮ್ಮನಹಳ್ಳಿ: ʼಬನ್ನೇರುಘಟ್ಟದಿಂದ ಜಯದೇವ ಆಸ್ಪತ್ರೆವರೆಗೆ ಸಿಗ್ನಲ್ ರಹಿತ ಸಂಚಾರ ವ್ಯವಸ್ಥೆ ಕಲ್ಪಿಸಲಾಗುತ್ತಿದ್ದು, ಇದಕ್ಕೆ ಸಾರ್ವಜನಿಕ ಸಹಕಾರ ನೀಡಬೇಕು’ ಎಂದು ಉಪ ಪೊಲೀಸ್ ಕಮಿಷನರ್ ಶಿವಪ್ರಕಾಶ್ ಹೇಳಿದರು.
ಹುಳಿಮಾವು ಸಂಚಾರ ಪೊಲೀಸ್ ಠಾಣೆ ವತಿಯಿಂದ ಹಮ್ಮಿಕೊಂಡಿದ್ದ ಸಂಚಾರ ಸಂಪರ್ಕ ದಿವಸ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ʼಬೇಗೂರು ರಸ್ತೆ ಈಗಾಗಲೇ ಸಂಚಾರ ದಟ್ಟಣೆ ಹೆಚ್ಚಾಗಿದ್ದು, ಇದರ ಮಧ್ಯೆ ಎರಡು ಸಾವಿರ ವಿದ್ಯಾರ್ಥಿಗಳ ಸಾಮರ್ಥ್ಯವುಳ್ಳ ನ್ಯಾಷನಲ್ ಪಬ್ಲಿಕ್ ಸ್ಕೂಲ್‌ಗೆ ಅವಕಾಶ ನೀಡಲಾಗಿದೆ. ಇದರಿಂದ ಮುಂದೆ ಭಾರಿ ದಟ್ಟಣೆ ಆಗಲಿದ್ದು, ಇದನ್ನು ಹೇಗೆ ನಿಭಾಯಿಸುತ್ತೀರಿ? ಇದಕ್ಕೆ ನೀವು ಯಾಕೆ ಆಕ್ಷೇಪಿಸಲಿಲ್ಲʼ ಎಂದು ವಿಶ್ವಪ್ರಿಯಾ ಬಡಾವಣೆಯ ಜಗದೀಶ್ ಪ್ರಶ್ನಿಸಿದರು.
‘ಸಂಚಾರ ಸಮಸ್ಯೆ ಕುರಿತು ಚರ್ಚಿಸುವಾಗ ಜಲಮಂಡಳಿ, ಬಿಬಿಎಂಪಿ, ಬೆಸ್ಕಾಂ ಮತ್ತು ಬಿಎಂಆರ್‌ಸಿಎಲ್ ಅಧಿಕಾರಿಗಳು ಇದ್ದರೆ, ಸಮಸ್ಯೆಗೆ ಶಾಶ್ವತ ಪರಿಹಾರ ಹುಡುಕಲು ಸಾಧ್ಯ, ಇಲ್ಲದಿದ್ದಲ್ಲಿ ಇದೊಂದು ನಾಮಕಾವಸ್ತೆ ಸಭೆ ಆಗಲಿದೆʼ ಎಂದು ಪಾಲಿಕೆ ಮಾಜಿ ಸದಸ್ಯ ಅರಕೆರೆ ಮುರಳೀಧರ್ ಬೇಸರ ವ್ಯಕ್ತಪಡಿಸಿದರು.
ಸಮಸ್ಯೆ ಆಲಿಸಿ ಮಾತನಾಡಿದ ಶಿವಪ್ರಕಾಶ್, ‘ಇತರೆ ಇಲಾಖೆಗಳನ್ನು ಒಳಗೊಂಡು ಮತ್ತೊಂದು ಸುತ್ತಿನ ಕುಂದುಕೊರತೆ ಸಭೆ ಆಯೋಜಿಸಲು ಪ್ರಯತ್ನಿಸುತ್ತೇವೆ. ಹುಳಿಮಾವು ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಹಿಟ್ ಅಂಡ್ ರನ್ ಪ್ರಕರಣಗಳು ದಾಖಲಾಗಿವೆ. ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಎಲ್ಲೆಡೆ ನಿಗಾವಹಿಸಿದ್ದೇವೆ, ಸಂಚಾರ ಉಲ್ಲಂಘನೆಯ ವಾಹನಗಳನ್ನು ತಡೆದರೆ, ನಮ್ಮವರು ಅವರನ್ನು ಬಿಟ್ಟು ಬಿಡಿ ಎಂಬ ಕರೆಗಳು ಬರುತ್ತವೆʼ ಎಂದು ಬೇಸರ ವ್ಯಕ್ತಪಡಿಸಿದರು.
ಸಂಚಾರ (ಆಗ್ನೇಯ ಉಪ ವಿಭಾಗ) ಸಹಾಯಕ ಪೊಲೀಸ್ ಕಮಿಷನರ್ ಟಿ.ಮಹದೇವ್, ಹುಳಿಮಾವು ಸಂಚಾರ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಪಾರ್ವತಮ್ಮ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.