ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಪೌರಕಾರ್ಮಿಕರು ವಿಶ್ರಾಂತಿ ಪಡೆಯಲು 42 ಸ್ಥಳಗಳಲ್ಲಿ ಶಾಶ್ವತ ಕೊಠಡಿಗಳ ನಿರ್ಮಾಣವನ್ನು ಶೀಘ್ರ ಪೂರ್ಣಗೊಳಿಸಲು ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಪೂರ್ವ ವಲಯ ವ್ಯಾಪ್ತಿಯಲ್ಲಿ ‘ಮುಖ್ಯ ಆಯುಕ್ತರ ನಡೆ ವಲಯದ ಕಡೆ’ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿದ ಸಂದರ್ಭದಲ್ಲಿ, ‘ಪೌರಕಾರ್ಮಿಕರ ವಿಶ್ರಾಂತಿಗಾಗಿ ವ್ಯವಸ್ಥೆ ಕಲ್ಪಿಸಬೇಕು’ ಎಂಬ ಅಭಿಪ್ರಾಯ ವ್ಯಕ್ತವಾಯಿತು.
ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ಆಯುಕ್ತರು, ‘ವಿಶ್ರಾಂತಿ ಕೊಠಡಿಗಳು ನಿರ್ಮಾಣವಾಗುತ್ತಿವೆ’ ಎಂದರು.
‘ಜೈ ಭಾರತ್ ನಗರದ 4ನೇ ಅಡ್ಡರಸ್ತೆಯಲ್ಲಿ ಕಾರು ಹೋಗಲು ಹಾಕಿದ್ದ ರ‍್ಯಾಂಪ್‌ನ ಮರು ನಿರ್ಮಾಣಕ್ಕೆ ಅವಕಾಶ ನೀಡಬೇಕು’ ಎಂದು ನಾಗರಿಕರೊಬ್ಬರು ಮನವಿ ಮಾಡಿಕೊಂಡರು. ‘ರಸ್ತೆ ಹಾಗೂ ಪಾದಚಾರಿ ಮಾರ್ಗ ಒತ್ತುವರಿ ಮಾಡಿಕೊಂಡು ರ‍್ಯಾಂಪ್ ನಿರ್ಮಿಸುವಂತಿಲ್ಲ. ರಸ್ತೆ ಬದಿಯ ಎಲ್ಲ ಮನೆಗಳನ್ನು ಪರಿಶೀಲಿಸಿ ಅನಧಿಕೃತ ರ‍್ಯಾಂಪ್‌ಗಳಿದ್ದರೆ ತೆರವುಗೊಳಿಸಿ’ ಎಂದು ಅಧಿಕಾರಿಗಳಿಗೆ ತುಷಾರ್ ಗಿರಿನಾಥ್ ಸೂಚಿಸಿದರು.
‘ಅನಧಿಕೃತ ಜಾಹೀರಾತು ತೆರವುಗೊಳಿಸಬೇಕು, ರಸ್ತೆ ಬದಿ ಕಸ ಸುರಿಯುವುದನ್ನು ತಡೆಯಬೇಕು, ಲಿಂಗರಾಜಪುರ ಕೆ.ಎಸ್.ಎಫ್ ಸಿ ಲೇಔಟ್‌ಲ್ಲಿ ಹೆಚ್ಚಿನ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು, ಮರದ ರೆಂಬೆಗಳನ್ನು ಕಟಾವು ಮಾಡಿ, ರಿಚ್ಮಂಡ್ ಟೌನ್ ಸುತ್ತಮುತ್ತಲಿನ ರಸ್ತೆಗಳಿಗೆ ಡಾಂಬರೀಕರಣ ಮಾಡಬೇಕು, ಪುಲಕೇಶಿನಗರ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಸರಿಪಡಿಸಿ’ ಎಂದು ಹಲವು ನಾಗರಿಕರು ಮನವಿ ಮಾಡಿದರು.
ಪೂರ್ವ ವಲಯ ವ್ಯಾಪ್ತಿಯಲ್ಲಿ ಕಳೆದ ಬಾರಿ ನಡೆದ ಮುಖ್ಯ ಆಯುಕ್ತರ ನಡೆ ವಲಯದ ಕಡೆ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಬಂದಂತಹ ಬಹುತೇಕ ದೂರುಗಳನ್ನು ಇತ್ಯರ್ಥಪಡಿಸಲಾಗಿದೆ. ಮಂಗಳವಾರ, 36 ದೂರುಗಳನ್ನು ಸ್ವೀಕರಿಸಲಾಗಿದ್ದು, ಕಾಲಮಿತಿಯೊಳಗೆ ಅವುಗಳೆಲ್ಲವನ್ನೂ ಬಗೆಹರಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ವಲಯ ಆಯುಕ್ತೆ ಸ್ನೇಹಲ್, ವಲಯ ಜಂಟಿ ಆಯುಕ್ತೆ ಸರೋಜಾ, ಉಪ ಆಯುಕ್ತ ರಾಜು, ಮುಖ್ಯ ಎಂಜಿನಿಯರ್ ಸುಗುಣಾ ಉಪಸ್ಥಿತರಿದ್ದರು.
‘ಪಾರ್ಕಿಂಗ್ ಶುಲ್ಕ ಪಡೆದರೆ ಕ್ರಮ’
‘ನಗರದ ಕಮರ್ಷಿಯಲ್ ಸ್ಟ್ರೀಟ್ ಮತ್ತು ಬ್ರಿಗೇಡ್ ರಸ್ತೆಯಲ್ಲಿ ‘ಪೇ ಆ್ಯಂಡ್ ಪಾರ್ಕಿಂಗ್’ ಟೆಂಡರ್ ಮುಗಿದಿದೆ. ವಾಹನಗಳಿಂದ ಹಣ ವಸೂಲಿ ಮಾಡುವಂತಿಲ್ಲ. ಟೆಂಡರ್ ಕರೆದು ಅದು ಅಂತಿಮಗೊಳ್ಳುವವರೆಗೂ ಯಾರೂ ಶುಲ್ಕ ಪಡೆಯುವಂತಿಲ್ಲ. ಯಾರಾದರೂ ಶುಲ್ಕ ಪಡೆಯುತ್ತಿದ್ದರೆ ಅಂತಹವರ ಮೇಲೆ ಕ್ರಮ ಕೈಗೊಳ್ಳಿ’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಅಧಿಕಾರಿಗಳಿಗೆ ಸೂಚಿಸಿದರು. ‘ಬಿಬಿಎಂಪಿಯಲ್ಲಿ ವಾರ್ಡ್‌ಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಯಾವ ವಾರ್ಡ್‌ನಲ್ಲಿ ನಮ್ಮ ಸಮಸ್ಯೆ ಹೇಳಿಕೊಳ್ಳಬೇಕು ಎಂದು ತಿಳಿಯುತ್ತಿಲ್ಲ. ವಾರ್ಡ್ ಗಡಿ ನಿರ್ಮಾಣ ಮಾಡಿಕೊಡಬೇಕು’ ಎಂದು ನಾಗರಿಕರು ಮನವಿ ಮಾಡಿದರು. ಸಂಬಂಧಪಟ್ಟ ಅಧಿಕಾರಿಗಳು ಗಡಿ ನಿರ್ಮಾಣ ಮಾಡಬೇಕು ಎಂದು ಮುಖ್ಯ ಆಯುಕ್ತರು ಆದೇಶಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.