
ಬೆಂಗಳೂರು: ನಾಲ್ಕು ನಗರ ಪಾಲಿಕೆಗಳ ಹೊಸ ಕಟ್ಟಡಗಳನ್ನು ‘ನೀಲಿ–ಹಸಿರು ಕಟ್ಟಡ ಪರಿಕಲ್ಪನೆ’ಯಲ್ಲಿ ನಿರ್ಮಿಸಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ನಿರ್ಧರಿಸಿದೆ.
ನೀರಿನ ನಿರ್ವಹಣೆ ಮತ್ತು ಪ್ರಕೃತಿಗೆ ಹಾನಿಕಾರಕವಾಗದಂತೆ ಸುಸ್ಥಿರ ರೀತಿಯಲ್ಲಿ, ಪರಿಸರಸ್ನೇಹಿಯಾಗಿ ಕಟ್ಟಡಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ.
ಹೊಸದಾಗಿ ರಚನೆಯಾಗಿರುವ ಐದು ನಗರ ಪಾಲಿಕೆಗಳಲ್ಲಿ ಕೇಂದ್ರ ನಗರ ಪಾಲಿಕೆ, ಜಿಬಿಎ ಕೇಂದ್ರ ಕಚೇರಿ ಆವರಣದಲ್ಲಿ ಅನೆಕ್ಸ್–3 ಕಟ್ಟಡವನ್ನು ನೀಡಲಾಗುತ್ತಿದೆ. ಇನ್ನುಳಿದ ನಾಲ್ಕು ನಗರ ಪಾಲಿಕೆಗಳಿಗೆ ಹೊಸದಾಗಿ ಕಟ್ಟಡಗಳನ್ನು ಏಕ ರೂಪದಲ್ಲಿ ನಿರ್ಮಿಸುವ ಉದ್ದೇಶದಿಂದ, ಸ್ಥಳಗಳನ್ನು ನಿಗದಿಪಡಿಸಲಾಗಿದೆ.
ಹೊಸ ನಗರ ಪಾಲಿಕೆಗಳ ಕಟ್ಟಡ ವಿನ್ಯಾಸ ಹಾಗೂ ಲೊಗೊಗಳನ್ನು ನಾಗರಿಕರು, ಯುವ ವಾಸ್ತುಶಿಲ್ಪಿಗಳಿಂದ ಆಹ್ವಾನಿಸುವುದಾಗಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದರು. ಆದರೆ, ಅದು ಕಾರ್ಯಗತವಾಗಲಿಲ್ಲ. ಅಂತಿಮವಾಗಿ, ಜಿಬಿಎ ‘ನೀಲಿ–ಹಸಿರು ಪರಿಕಲ್ಪನೆಯಲ್ಲಿ’ ಕಟ್ಟಡಗಳನ್ನು ನಿರ್ಮಿಸಲು ವಿನ್ಯಾಸ ಸೇರಿದಂತೆ ಎಲ್ಲ ರೀತಿಯ ವ್ಯವಸ್ಥೆಗಳನ್ನು ಒಳಗೊಂಡ ಕಟ್ಟಡ ನಕ್ಷೆ– ವಿಸ್ತೃತ ಯೋಜನಾ ವರದಿ (ಡಿಪಿಆರ್) ತಯಾರಿಸಲು ಟೆಂಡರ್ ಆಹ್ವಾನಿಸಿದೆ.
ಏನಿದು ನೀಲಿ–ಹಸಿರು ಕಟ್ಟಡ?
ಸುಸ್ಥಿರ ನೀರು ನಿರ್ವಹಣೆಯ ಯೋಜನೆಗಳತ್ತ ಗುರಿ ಹೊಂದಬೇಕು. ಇದರಲ್ಲಿ ಮಳೆ ನೀರು ಸಂಗ್ರಹ, ಅದರ ಮರು ಬಳಕೆಯ ವ್ಯವಸ್ಥೆಗಳಿರಬೇಕು. ಒಳಚರಂಡಿ ನೀರನ್ನು ಹಿಡಿದಿಟ್ಟು, ಅದನ್ನು ಸಂಸ್ಕರಿಸಿ ಅಂತರ್ಜಲ ಮರುಪೂರಣಗೊಳಿಸುವ ಜೊತೆಗೆ ಪ್ರವಾಹ ನಿಯಂತ್ರಕವನ್ನಾಗಿಸುವ ವ್ಯವಸ್ಥೆ ರೂಪಿಸಬೇಕು. ತ್ಯಾಜ್ಯನೀರು ಸಂಸ್ಕರಣೆ, ಅದರ ಬಳಕೆಗಾಗಿ ಕಟ್ಟಡದ ಆವರಣದಲ್ಲೇ ‘ಗ್ರೇ–ವಾಟರ್’ ಸಂಸ್ಕರಣೆ ಘಟಕವಿರಬೇಕು. ಅದನ್ನು ಉದ್ಯಾನ ಸೇರಿದಂತೆ ಇತರೆ ಉಪಯೋಗಕ್ಕೆ ಬಳಸಬೇಕು. ‘ಬ್ಲೂ– ರೂಫ್’ಗಳನ್ನು ಸ್ಥಾಪಿಸುವ ಮೂಲಕ ಮಳೆ ನೀರನ್ನು ತಾತ್ಕಾಲಿಕವಾಗಿ ಸಂಗ್ರಹಿಸಿ, ಒಳಚರಂಡಿ ವ್ಯವಸ್ಥೆಗೆ ಬಿಡುವ ಮುನ್ನ ಕೊಳ ಅಥವಾ ಇತರೆ ಸಂಗ್ರಹ ಘಟಕಗಳಲ್ಲಿ ಸಂಗ್ರಹಿಸಬೇಕು.
ಹಸಿರು ಚಾವಣಿಗಳನ್ನು ಅಳವಡಿಸಿ, ಬಾಷ್ಪೀಕರಣದ ಮೂಲಕ ಕಟ್ಟಡವನ್ನು ತಂಪಾಗಿಸುವ ಹಾಗೂ ಜೀವವೈವಿಧ್ಯವನ್ನು ವೃದ್ಧಿಸುವ ಜೀವಂತ ಗೋಡೆಗಳನ್ನು ನಿರ್ಮಿಸಬೇಕು. ಕಾರ್ಬನ್ ಕಡಿತಗೊಳಿಸಲು, ವಾಯುಗುಣಮಟ್ಟ ಉತ್ತಮವಾಗಿಸಲು ನಗರ ಅರಣ್ಯೀಕರಣ ಹಾಗೂ ರಸ್ತೆಗೆ ಹೊಂದಿಕೊಂಡ ಗಿಡ–ಮರಗಳನ್ನು ಬೆಳೆಸಬೇಕು. ನೈಸರ್ಗಿಕವಾಗಿ ನೀರನ್ನು ಸಂಸ್ಕರಿಸುವ ಜೌಗು ಪ್ರದೇಶ ಹಾಗೂ ಸಸ್ಯಕ್ಷೇತ್ರವನ್ನು ನಿರ್ಮಿಸಬೇಕು. ಬರ–ಸಹಿಷ್ಣು, ಸ್ಥಳೀಯ ಸಸ್ಯಗಳನ್ನು ನೆಟ್ಟು ಕೃತಕ ನೀರಾವರಿಯ ಅಗತ್ಯ ಪೂರೈಸಬೇಕು. ಸೌರಶಕ್ತಿ ಉತ್ಪಾದನೆಯ ಪ್ಯಾನಲ್‌ಗಳನ್ನು ಅಳವಡಿಸಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.