ಬೆಂಗಳೂರು: ಪ್ರಯಾಣಿಕರ ಸೋಗಿನಲ್ಲಿ ಬಿಎಂಟಿಸಿ ಬಸ್ ಹತ್ತಿ ಮೊಬೈಲ್ ಕಳ್ಳತನ ಮಾಡುತ್ತಿದ್ದ ಆಂಧ್ರಪ್ರದೇಶ ಹಾಗೂ ಬೆಳಗಾವಿಯ ಗ್ಯಾಂಗ್‌ನ ಏಳು ಮಂದಿಯನ್ನು ಎಲೆಕ್ಟ್ರಾನಿಕ್ ಸಿಟಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆಂಧ್ರಪ್ರದೇಶದ ಕಡಪ ಜಿಲ್ಲೆಯ ನಾಗನೂರಿ ಕುಮಾರ್ (22) ಹಾಗೂ ನಂದ್ಯಾಲ ಜಿಲ್ಲೆ ಡೋನ್ ಗ್ರಾಮದ ಶಿವಶಂಕರ್ (20), ಬೆಳಗಾವಿಯ ಸಾಗರ್ ಸಣ್ಣಕ್ಕಿ (32), ಶಿವಕುಮಾರ್ (30), ಶಿವಶಂಕರ್ (20), ಹಾಲಪ್ಪ (29), ಗೂಡುಸಾಬ್ ಮುಲ್ಲಾ (36) ಬಂಧಿತರು.
ಗ್ಯಾಂಗ್‌ನ ನಾಯಕ ರಘು ಅಲಿಯಾಸ್ ಬಾಲು ತಲೆಮರೆಸಿಕೊಂಡಿದ್ದು, ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.
ಬಂಧಿತರಿಂದ ವಿವಿಧ ಮಾದರಿಯ 70 ಮೊಬೈಲ್, ಒಂದು ಕಾರು ಹಾಗೂ ಆಟೊವನ್ನು ಜಪ್ತಿ ಮಾಡಲಾಗಿದೆ. ಅವುಗಳ ಮೌಲ್ಯ ₹ 25 ಲಕ್ಷ ಎಂಬುದಾಗಿ ಅಂದಾಜಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರಗತಿನಗರದ ನಿವಾಸಿಯೊಬ್ಬರು ನೀಡಿದ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ.
ಎಂಟು ಮಂದಿ ಆರೋಪಿಗಳು ಪ್ರತ್ಯೇಕ ತಂಡ ಮಾಡಿಕೊಂಡು ಪ್ರಯಾಣಿಕರ ಸೋಗಿನಲ್ಲಿ ಬಸ್ ಹತ್ತುತ್ತಿದ್ದರು. ಬಸ್ ಸ್ವಲ್ಪ ದೂರ ಸಾಗಿದ ಮೇಲೆ ಪ್ರಯಾಣಿಕರ ಸಂಖ್ಯೆ ಹೆಚ್ಚಾದಂತೆ ಬಸ್ ಒಳಗೆ ತಳ್ಳಾಟ ನಡೆಸುತ್ತಿದ್ದರು. ಆ ಸಮಯದಲ್ಲಿ ಮೊಬೈಲ್ ಕಳ್ಳತನ ಮಾಡುತ್ತಿದ್ದರು. ಒಂದು ವೇಳೆ ಕೃತ್ಯ ಎಸಗುವಾಗ ಸಿಕ್ಕಿಬಿದ್ದರೆ, ಬಸ್ ಒಳಗೇ ಇರುತ್ತಿದ್ದ ಮತ್ತೊಂದು ಗುಂಪಿನವರು, ಆರೋಪಿಗಳನ್ನು ಪೊಲೀಸರ ವಶಕ್ಕೆ ಒಪ್ಪಿಸುವುದಾಗಿ ನಂಬಿಸಿ ಕರೆದೊಯ್ಯುತ್ತಿದ್ದರು ಎಂದು ಪೊಲೀಸರು ಹೇಳಿದರು.
ತನ್ನ ಸಹಚರರು ಬಸ್ ಹತ್ತಿದ ಬಳಿಕ ಕಾರಿನಲ್ಲಿ ಮತ್ತೊಬ್ಬ ಆರೋಪಿ ಹಿಂಬಾಲಿಸುತ್ತಿದ್ದ. ಮೊಬೈಲ್‌ಗಳನ್ನು ಕಳ್ಳತನ ಮಾಡಿದ ಬಳಿಕ ಮಾರ್ಗ ಮಧ್ಯದಲ್ಲಿ ಆರೋಪಿಗಳು ಬಸ್‌ನಿಂದ ಇಳಿದು ಕಾರು ಹತ್ತಿ ಪರಾರಿ ಆಗುತ್ತಿದ್ದರು. ಕದ್ದ ಮೊಬೈಲ್‌ಗಳ ಬಿಡಿ ಭಾಗಳನ್ನು ಬೇರ್ಪಡಿಸಿ ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.