ಬೆಂಗಳೂರು: ಕೆಟ್ಟು ನಿಂತಿದ್ದ ಶಾಲಾ ಬಸ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದರಿಂದ ನಿದ್ರಿಸುತ್ತಿದ್ದ ಅಪರಿಚಿತ ವ್ಯಕ್ತಿಯೊಬ್ಬ ಸಜೀವ ದಹನ ಆಗಿರುವ ಘಟನೆ ರಾಮಮೂರ್ತಿನಗರ ಠಾಣಾ ವ್ಯಾಪ್ತಿಯ ಶ್ರೀನಿಧಿಲೇಔಟ್‌ನಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ.
ಮೃತ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ. 40 ವರ್ಷದ ವ್ಯಕ್ತಿ ಮೃತಪಟ್ಟಿದ್ದಾರೆ ಎಂದು ಅಂದಾಜಿಸಲಾಗಿದೆ. ರಾಮಮೂರ್ತಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಮಂಗಳವಾರ ತಡರಾತ್ರಿ ಬಸ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿಯ ಕೆನ್ನಾಲಿಗೆ ಕೆಲವೇ ಕ್ಷಣಗಳಲ್ಲಿ ಇಡೀ ಬಸ್‌ಗೆ ಆವರಿಸಿಕೊಂಡಿತ್ತು. ಬಸ್ ಒಳಗೆ ಮಲಗಿದ್ದ ವ್ಯಕ್ತಿ ಸಜೀವ ದಹನವಾಗಿದ್ದಾರೆ.
ಚಿಂದಿ ಆಯುವ ವ್ಯಕ್ತಿಯೊಬ್ಬರು ಬಸ್‌ನಲ್ಲಿ ಮಲಗುತ್ತಿದ್ದರು. ಅವರೇ ಮೃತಪಟ್ಟಿರುವ ಸಾಧ್ಯತೆಯಿದೆ ಎಂದು ಸ್ಥಳೀಯರು ಶಂಕಿಸಿದ್ದಾರೆ. ಪರಿಶೀಲನೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.
ಬೆಂಕಿ ಗಮನಿಸಿ ಮಾಹಿತಿ:
ಬಸ್‌ಗೆ ಬೆಂಕಿ ಬಿದ್ದಿರುವುದನ್ನು ಗಮನಿಸಿದ್ದ ಸ್ಥಳೀಯರು, ಅಗ್ನಿ ಶಾಮಕ ದಳ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದರು. ಕೂಡಲೇ ಅಗ್ನಿ ಶಾಮಕ ವಾಹನದೊಂದಿಗೆ ಆಗಮಿಸಿ ಬೆಂಕಿಯನ್ನು ನಂದಿಸಿದ್ದಾರೆ. ಬಳಿಕ ಪೊಲೀಸರು ಬಸ್ ಪರಿಶೀಲಿಸಿದಾಗ ಬಸ್ ಒಳಗಡೆ ಅಪರಿಚಿತ ವ್ಯಕ್ತಿ ಸಜೀವ ದಹನವಾಗಿರುವುದು ಕಂಡು ಬಂದಿತ್ತು ಎಂದು ಮೂಲಗಳು ತಿಳಿಸಿವೆ.
ಖಾಸಗಿ ಶಾಲೆಯ ಈ ಬಸ್ ಅರುಣ್ ಎಂಬುವರಿಗೆ ಸೇರಿದೆ. ಬಸ್ ಕೆಟ್ಟು ಹೋಗಿದ್ದರಿಂದ ನಾಲ್ಕು ತಿಂಗಳಿಂದ ರಸ್ತೆೆಯಲ್ಲಿ ನಿಲುಗಡೆ ಮಾಡಲಾಗಿತ್ತು. ಪ್ರತಿನಿತ್ಯ ಸಂಜೆ ಅರುಣ್ ಬಸ್ ಬಳಿ ಬಂದು ನೋಡಿಕೊಂಡು ಹೋಗುತ್ತಿದ್ದರು. ಮಂಗಳವಾರ ಸಂಜೆ ಕೂಡ ಬಂದು ಹೋಗಿದ್ದರು. ಬಸ್‌ನ ಡೋರ್ ಸರಿ ಇಲ್ಲದ ಕಾರಣ ಅಪರಿಚಿತ ವ್ಯಕ್ತಿಗಳು ಬಂದು ಬಸ್‌ನಲ್ಲೇ ಮದ್ಯ ಸೇವಿಸಿ ಹೋಗುತ್ತಿದ್ದರು. ಅದೇ ರೀತಿ ಈ ವ್ಯಕ್ತಿ ಕೂಡ ಮಂಗಳವಾರ ರಾತ್ರಿ ಬಂದು ಮದ್ಯ ಸೇವಿಸಿ ಮಲಗಿರುವ ಸಾಧ್ಯತೆಯಿದೆ ಎಂದು ಮೂಲಗಳು ಹೇಳಿವೆ.
ಮೃತದೇಹವನ್ನು ಅಂಬೇಡ್ಕರ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಬೆಂಕಿ ಹೊತ್ತಿಕೊಳ್ಳಲು ಕಾರಣ ಏನು ಎಂಬುದನ್ನು ಪತ್ತೆ ಮಾಡಲಾಗುತ್ತಿದೆ. ಆಕಸ್ಮಿಕ ಘಟನೆಯೇ ಅಥವಾ ಯಾರಾದರೂ ಉದ್ದೇಶಪೂರ್ವಕವಾಗಿ ಬೆಂಕಿ ಹಚ್ಚಿ ಕೊಲೆ ಮಾಡಲಾಗಿದೆಯೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ. ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯಾವಳಿಯನ್ನು ಸಂಗ್ರಹಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.