ADVERTISEMENT

ಬೆಂಗಳೂರು ಬ್ಯುಸಿನೆಸ್‌ ಕಾರಿಡಾರ್: ಸಮ್ಮತಿ ಪತ್ರ ಸಲ್ಲಿಕೆಗೆ ಬಿಡಿಎ ಗಡುವು

ಬಿಬಿಸಿ: ದಾಖಲೆ ನೀಡಿದರೆ ಭೂ ಮಾಲೀಕರಿಗೆ ಪರಿಹಾರ, ಒಂಬತ್ತು ವಿಶೇಷ ಭೂ ಸ್ವಾಧೀನಾಧಿಕಾರಿಗಳ ನೇಮಕ

ಕೆ.ಎಸ್.ಸುನಿಲ್
Published 12 ಫೆಬ್ರುವರಿ 2026, 0:30 IST
Last Updated 12 ಫೆಬ್ರುವರಿ 2026, 0:30 IST
<div class="paragraphs"><p>ಬಿಡಿಎ</p></div>

ಬಿಡಿಎ

   

ಬೆಂಗಳೂರು: ಬೆಂಗಳೂರು ಬ್ಯುಸಿನೆಸ್‌ ಕಾರಿಡಾರ್ (ಪೆರಿಫೆರಲ್ ರಿಂಗ್ ರಸ್ತೆ– 1, ಬಿಬಿಸಿ) ಯೋಜನೆಗೆ ಸ್ವಾಧೀನ ಪಡಿಸಿಕೊಳ್ಳುವ ಭೂಮಿಗೆ ನಿಗದಿಪಡಿಸಿರುವ ‘ಸಂಧಾನಿತ ಪರಿಹಾರ ದರ’ಕ್ಕೆ ಒಪ್ಪಿಗೆ ಸೂಚಿಸಿ, ಹದಿನೈದು ದಿನದೊಳಗೆ ಅಗತ್ಯ ದಾಖಲೆ ಸಲ್ಲಿಸುವಂತೆ ಭೂ ಮಾಲೀಕರಿಗೆ ಬಿಡಿಎ ಸೂಚನೆ ನೀಡಿದೆ. ‌

ಅಲ್ಲದೇ ಭೂ ಮಾಲೀಕರೊಂದಿಗೆ ಸಮನ್ವಯ ಸಾಧಿಸಲು ಒಂಬತ್ತು ವಿಶೇಷ ಭೂ ಸ್ವಾಧೀನಾಧಿಕಾರಿಗಳನ್ನು ನೇಮಕ ಮಾಡಲಾಗಿದೆ.

ADVERTISEMENT

ಯೋಜನೆಗೆ 2,418 ಎಕರೆ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲಾಗುತ್ತಿದೆ. ಮೊದಲ ಹಂತದಲ್ಲಿ 1,810 ಎಕರೆಗೆ ಅಧಿಸೂಚನೆ ಹೊರಡಿಸಲಾಗಿದ್ದು, 3,586 ರೈತರ ಪೈಕಿ ಈವರೆಗೂ 650‌ಕ್ಕೂ ಅಧಿಕ ರೈತರು ಸಂಧಾನಿತ ಪರಿಹಾರ ದರಕ್ಕೆ ಒಪ್ಪಿಗೆ ಸೂಚಿಸಿದ್ದಾರೆ.

ಈಗಾಗಲೇ ಭೂಸ್ವಾಧೀನಕ್ಕೆ ಸಂಬಂಧಿಸಿ ಹಲವು ಭೂ ಮಾಲೀಕರಿಗೆ ಅಂತಿಮ ನೋಟಿಸ್‌ಗಳನ್ನು ಬಿಡಿಎ ನೀಡಿದ್ದು, 15 ದಿನದೊಳಗೆ ಸಮ್ಮತಿ ಪತ್ರಗಳನ್ನು ಸಲ್ಲಿಸುವಂತೆ ಸೂಚಿಸಿದೆ. ದಾಖಲೆಗಳನ್ನು ಸಲ್ಲಿಸಿದ ನಂತರ ಹದಿನೈದು ದಿನದೊಳಗೆ ಪರಿಹಾರ ನೀಡಲಾಗುತ್ತದೆ.

ಈ ಯೋಜನೆಯಲ್ಲಿ ಭೂಮಿ ಕಳೆದುಕೊಳ್ಳುವ ರೈತರಿಗೆ ಐದು ರೀತಿಯಲ್ಲಿ ಪರಿಹಾರ ನೀಡಲು ಸರ್ಕಾರ ನಿರ್ಧರಿಸಿದೆ.‌ ಈ ಆಯ್ಕೆಗಳಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಂಡು ಸಂಬಂಧಪಟ್ಟ ವಿಶೇಷ ಭೂ ಸ್ವಾಧೀನಾಧಿಕಾರಿ ಕಚೇರಿಗೆ ಖುದ್ದು ಅಥವಾ ರಿಜಿಸ್ಟರ್ ಫೋಸ್ಟ್ ಮೂಲಕ ಸೂಕ್ತ ದಾಖಲೆಗಳೊಂದಿಗೆ ಪರಿಹಾರಕ್ಕೆ ಅರ್ಜಿ ಸಲ್ಲಿಸಬಹುದು.

ಬಿಡಿಎ ನಿಗದಿ ನಿಗದಿಪಡಿಸಿರುವ ಭೂಮಿ ದರವು ಕಡಿಮೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಭೂ ಮಾಲೀಕರು, ಹೆಚ್ಚಿನ ಬೆಲೆ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಹಾಗಾಗಿ ಸಮ್ಮತಿ ಪತ್ರ ಸಲ್ಲಿಸುವವರ ಸಂಖ್ಯೆ ತೀರಾ ಕಡಿಮೆ ಆಗಿದೆ.

‘ಯೋಜನೆಗೆ ಸಂಬಂಧಿಸಿದಂತೆ ದಾಖಲೆ ಸಲ್ಲಿಸಿದ ಭೂಮಿ ಮಾಲೀಕರಿಗೆ ಪರಿಹಾರದ ಚೆಕ್, ಪ್ರಮಾಣ ಪತ್ರ, ಟಿಡಿಆರ್ ನೀಡಲಾಗಿದೆ. ಕೆಲವರು ಶೇಕಡ 35 ರಷ್ಟು ವಾಣಿಜ್ಯ ಭೂಮಿಯನ್ನು ಪರಿಹಾರವಾಗಿ ಪಡೆದರೆ, ಮತ್ತೆ ಕೆಲವರು ಟಿಡಿಆರ್, ಚೆಕ್ ಮೂಲಕ ಹಣ ಪಡೆದಿದ್ದಾರೆ. ಕಂದಾಯ ಭೂಮಿ ಇದ್ದ ಕಡೆ ಮಾರುಕಟ್ಟೆ ಮೌಲ್ಯದ ಮೂರು ಪಟ್ಟು ಹಣ ನೀಡಲಾಗಿದೆ. ಜಿಬಿಎ ವ್ಯಾಪ್ತಿಯಲ್ಲಿ ಎರಡು ಪಟ್ಟು ನೀಡಲಾಗಿದೆ’ ಎಂದು ಬಿಡಿಎ ಅಧಿಕಾರಿಗಳು ತಿಳಿಸಿದರು.

‘ಸ್ವಾಧೀನ ಪಡಿಸಿಕೊಂಡ ಜಮೀನು ಕೃಷಿ ಭೂಮಿಯಾಗಿದ್ದರೂ ಟಿಡಿಆರ್ (ಅಭಿವೃದ್ಧಿ ಹಕ್ಕುಗಳ ವರ್ಗಾವಣೆ) ಅನ್ನು ನಗರ ಭೂ ಪರಿವರ್ತಿತ ಮೌಲ್ಯದ ಆಧಾರದ ಮೇಲೆ (ಪ್ರತಿ ಚದರ ಅಡಿ ಲೆಕ್ಕಾಚಾರದಂತೆ) ನೀಡಲು ತೀರ್ಮಾನಿಸಲಾಗಿದೆ. ಸ್ವಾಧೀನ ಪಡಿಸಿಕೊಂಡ ಜಮೀನಿಗೆ ನಿವೇಶನಗಳನ್ನು ಆಯ್ಕೆ ಮಾಡಿಕೊಳ್ಳುವವರಿಗೆ ವಸತಿ ನಿವೇಶನದ ವಿಸ್ತೀರ್ಣವು ಕೇವಲ 60:40 ಅನುಪಾತಕ್ಕೆ ಸೀಮಿತವಾಗಿರುವುದಿಲ್ಲ. ಭೂಮಿಯ ಮಾರ್ಗಸೂಚಿ ದರ ಆಧರಿಸಿ ಪರಿಹಾರ ನೀಡಲು ಉದ್ದೇಶಿಸಲಾಗಿದೆ. ಎಲ್ಲಿ ಮಾರ್ಗಸೂಚಿ ದರ ಹೆಚ್ಚಿದೆಯೋ, ಅಲ್ಲಿ ಭೂ ಮಾಲೀಕರು ಶೇಕಡ 40ಕ್ಕಿಂತ ಹೆಚ್ಚಿನ ವಿಸ್ತೀರ್ಣದ ನಿವೇಶನಗಳನ್ನು ಪಡೆಯಲು ಅವಕಾಶ ಕಲ್ಪಿಸಲಾಗಿದೆ’ ಎಂದು ಮಾಹಿತಿ ನೀಡಿದರು.

‘ಬಿಬಿಸಿ ಯೋಜನೆಗಾಗಿ ಸ್ವಾಧೀನ ಪಡಿಸಿಕೊಳ್ಳುತ್ತಿರುವ ಭೂಮಿಗೆ ನಿಗದಿಪಡಿಸಿರುವ ದರ ಕಡಿಮೆ ಎಂಬುದು ಭೂ ಮಾಲೀಕರ ವಾದ. ಆದರೆ, ರೈತರ ಭೂಮಿಗೆ ಉತ್ತಮ ಬೆಲೆಯನ್ನು ನೀಡಲಾಗುತ್ತಿದೆ. ನಿತ್ಯವೂ ದಿನಕ್ಕೆ 20 ರಿಂದ 25 ರೈತರು ಪರಿಹಾರ ಕೋರಿ ಹೆಸರು ನೋಂದಾಯಿಸುತ್ತಿದ್ದು, ಅಗತ್ಯ ದಾಖಲೆ ಸಲ್ಲಿಸಿದ ಭೂ ಮಾಲೀಕರಿಗೆ ಹದಿನೈದೊಳಗೆ ಪರಿಹಾರ ನೀಡಲಾಗುತ್ತದೆ’ ಎಂದು ಬಿಡಿಎ ಅಧಿಕಾರಿಗಳು ಹೇಳಿದರು.

‘ಬಿಡಿಎ ಅಧಿಕಾರಿಗಳು ಹಳ್ಳಿಗಳಿಗೆ ಪೊಲೀಸರನ್ನು ಕರೆದುಕೊಂಡು ಬಂದು, ಕಂದಾಯ ಇಲಾಖೆ ಕಚೇರಿಗಳಿಗೆ ರೈತರನ್ನು ಕರೆಸಿ, ರೈತರಿಂದ ಸಮ್ಮತಿ ಪತ್ರಕ್ಕೆ ಸಹಿ ಹಾಕಿಸಿಕೊಳ್ಳುತ್ತಿದ್ದಾರೆ. ಭಯದ ವಾತಾವರಣ ನಿರ್ಮಿಸಿದ್ದಾರೆ. ಮುಖ್ಯಮಂತ್ರಿ ಅವರು ಮಧ್ಯಪ್ರವೇಶಿಸಿ, ರೈತರೊಂದಿಗೆ ಚರ್ಚಿಸಿ ಭೂಮಿಗೆ ನ್ಯಾಯಯುತ ಪರಿಹಾರ ಘೋಷಿಸಬೇಕು’ ಎಂದು ರೈತ ಮುಖಂಡ ರಘು ಆಗ್ರಹಿಸಿದ್ದಾರೆ.

‘ಠೇವಣಿ ಇಟ್ಟು ಯೋಜನೆ ಮುಂದುವರಿಕೆ’

‘ಬೆಂಗಳೂರು ಬ್ಯುಸಿನೆಸ್‌ ಕಾರಿಡಾರ್‌’ ಯೋಜನೆಯನ್ನು ಎರಡು ವರ್ಷಗಳಲ್ಲಿ ಪೂರ್ಣಗೊಳಿಸುವ ಉದ್ದೇಶ ಇದೆ. ಒಂದು ವೇಳೆ ಯಾರಾದರೂ ಭೂಮಿ ನೀಡಲು ನಿರಾಕರಿಸಿದರೆ ಸಹಜ ಸ್ವಾಧೀನ ಪ್ರಕ್ರಿಯೆ ಪರಿಹಾರದ ಹಣವನ್ನು ನ್ಯಾಯಾಲಯದಲ್ಲಿ ಠೇವಣಿ ಇಟ್ಟು ಯೋಜನೆ ಮುಂದುವರಿಸಲಾಗುವುದು. ಟಿಡಿಆರ್ ವಿನಿಮಯ ಪ್ರಾರಂಭಿಸುವಂತೆ ಸರ್ಕಾರ ಸೂಚಿಸಿದೆ. ಭೂಮಿ ಕಳೆದುಕೊಳ್ಳುವವರು ನೋಂದಣಿ ಮಾಡಿಕೊಂಡು ಈ ಟಿಡಿಆರ್ ವಿನಿಮಯ ಮಾಡಿಕೊಳ್ಳಬಹುದಾಗಿದೆ’ ಎಂದು ಬಿಬಿಸಿ ವಿಶೇಷ ಉದ್ದೇಶದ ಘಟಕ (ಎಸ್‌ಪಿವಿ) ಅಧ್ಯಕ್ಷ ಎಲ್.ಕೆ.ಅತೀಕ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.