ಬೆಂಗಳೂರು: ನಗರದ ಶೇಷಾದ್ರಿಪುರದ ‘ನಮ್ಮ ಫಿಲ್ಟರ್ ಕಾಫಿ ಶಾಪ್’ನಲ್ಲಿ ಸಿಬ್ಬಂದಿ ಹಾಗೂ ಗ್ರಾಹಕರ ಮಧ್ಯೆ ಕಾಫಿ ಕಪ್ ವಿಚಾರಕ್ಕೆ ಪರಸ್ಪರ ಹೊಡೆದಾಟ ನಡೆದಿದೆ.
ಈ ಸಂಬಂಧ ಶೇಷಾದ್ರಿಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ಯಾಲೇಸ್ ಗುಟ್ಟಹಳ್ಳಿಯ ನಾಗಪ್ಪ ರಸ್ತೆಯ ನಿವಾಸಿ ಅರುಣ್ ಕುಮಾರ್ (33) ಅವರನ್ನು ಬಂಧಿಸಲಾಗಿದೆ.
ಬುಧವಾರ ಸಂಜೆ ಕಾಫಿ ಶಾಪ್‌ಗೆ ಬಂದಿದ್ದ ನಾಲ್ವರು ಗ್ರಾಹಕರು, ಕಾಫಿ ತರಲು ಹೇಳಿದ್ದರು. ಶಾಪ್‌ನ ಸಿಬ್ಬಂದಿ ಕಾಫಿ ತಂದುಕೊಟ್ಟಾದ ಬಳಿಕ ಅರುಣ್ ಕುಮಾರ್ ಅವರು ಹೆಚ್ಚುವರಿ ಕಾಫಿ ಕಪ್ ಕೇಳಿದ್ದರು. ಆಗ ಖಾಲಿ ಕಪ್ ಕೊಡುವುದಕ್ಕೆ ಹೋಟೆಲ್ ಸಿಬ್ಬಂದಿ ನಿರಾಕರಿಸಿದ್ದರು. ಆಗ ಸಿಬ್ಬಂದಿ ಹಾಗೂ ಗ್ರಾಹಕರ ಮಧ್ಯೆ ವಾಗ್ವಾದ ನಡೆದಿದೆ. ಎರಡೂ ಕಡೆಯವರು ಪರಸ್ಪರ ತಳ್ಳಾಟ, ಹಲ್ಲೆ ಮಾಡಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ದೃಶ್ಯವು ಶಾಪ್‌ನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
‘ಕಾಫಿ ಕುಡಿಯಲು ಬಂದ ಗ್ರಾಹಕರು, ಹೋಟೆಲ್ ಸಿಬ್ಬಂದಿಗೆ ಅವಾಚ್ಯವಾಗಿ ನಿಂದಿಸಿ ಮನಬಂದಂತೆ ಥಳಿಸಿದ್ದಾರೆ. ಕಪಾಳಕ್ಕೆ ಹೊಡೆದು, ಮುಖಕ್ಕೆ ಗುದ್ದಿ, ಕಾಲಿನಿಂದ ಹೊಟ್ಟೆಗೆ ಒದ್ದು ಹಲ್ಲೆ ಮಾಡಿದ್ದಾರೆ ಎಂದು ಸಿಬ್ಬಂದಿ ದೂರು ನೀಡಿದ್ದರು. ಆ ದೂರು ಆಧರಿಸಿ ಅರುಣ್ ಅವರನ್ನು ಬಂಧಿಸಲಾಗಿದೆ. ವಿಚಾರಣೆಗೆ ಬರುವಂತೆ ಉಳಿದ ಮೂವರು ಗ್ರಾಹಕರಿಗೆ ನೋಟಿಸ್ ಜಾರಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.
‘ಹೆಚ್ಚುವರಿ ಕಪ್ ಕೊಡುವುದಿಲ್ಲ ಎನ್ನುವ ವಿಚಾರಕ್ಕೆ ಗಲಾಟೆ ನಡೆದಿದೆ. ಕಾಫಿ ಶಾಪ್‌ನಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಲಾಗಿದೆ. ಶೀಘ್ರದಲ್ಲೇ ಉಳಿದ ಆರೋಪಿಗಳನ್ನು ಬಂಧಿಸಿ ವಿಚಾರಣೆ ಮಾಡುತ್ತೇವೆ’ ಎಂದು ಕೇಂದ್ರ ವಿಭಾಗದ ಡಿಸಿಪಿ ಅಕ್ಷಯ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.