ADVERTISEMENT

ಬೆಂಗಳೂರು ಹಗಲು ದರೋಡೆ: ಕಾನ್‌ಸ್ಟೆಬಲ್, ಮಾಜಿ ಉದ್ಯೋಗಿಯೇ ಸೂತ್ರಧಾರರು;8 ಮಂದಿ ವಶ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2025, 23:30 IST
Last Updated 21 ನವೆಂಬರ್ 2025, 23:30 IST
ತಿರುಪತಿಯಲ್ಲಿ ವಶಕ್ಕೆ ಪಡೆದು ಇನೊವಾ ಕಾರು 
ತಿರುಪತಿಯಲ್ಲಿ ವಶಕ್ಕೆ ಪಡೆದು ಇನೊವಾ ಕಾರು    

ಬೆಂಗಳೂರು: ಎಟಿಎಂ ಕೇಂದ್ರಕ್ಕೆ ಹಣ ತುಂಬಿಸಲು ತೆರಳುತ್ತಿದ್ದ ಸಿಎಂಎಸ್‌ ಏಜೆನ್ಸಿ ವಾಹನವನ್ನು ಅಡ್ಡಗಟ್ಟಿ ₹7.11 ಕೋಟಿ ದರೋಡೆ ಮಾಡಿದ್ದ ಪ್ರಕರಣದ ಸೂತ್ರಧಾರರು ಪೊಲೀಸ್ ಕಾನ್‌ಸ್ಟೆಬಲ್‌ ಹಾಗೂ ಸಿಎಂಎಸ್‌ ಏಜೆನ್ಸಿಯ ಮಾಜಿ ಉದ್ಯೋಗಿ ಎಂಬುದು ಪೊಲೀಸರ ತನಿಖೆಯಿಂದ ಬಯಲಾಗಿದೆ.

ತಾಂತ್ರಿಕ ನೆರವು ಪಡೆದು ನಾಲ್ಕು ವಿಶೇಷ ತಂಡಗಳು ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿವೆ. ತನಿಖೆ ವೇಳೆ ಹಲವು ಸಂಗತಿಗಳು ಗೊತ್ತಾಗಿವೆ. 

‘ಗೋವಿಂದಪುರ ಪೊಲೀಸ್ ಠಾಣೆಯ ಕಾನ್‌ಸ್ಟೆಬಲ್‌ ಅಣ್ಣಪ್ಪ ನಾಯ್ಕ, ಸಿಎಂಎಸ್‌ ಏಜೆನ್ಸಿ ಮಾಜಿ ಉದ್ಯೋಗಿ ಕ್ಸೇವಿಯರ್ ಸೇರಿದಂತೆ ಎಂಟು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ’ ಎಂಬುದು ಗೊತ್ತಾಗಿದೆ.

ADVERTISEMENT

‘ಈ ಪ್ರಕರಣದಲ್ಲಿ ಮತ್ತೊಬ್ಬ ಪೊಲೀಸ್ ಸಿಬ್ಬಂದಿ ಮೇಲೂ ಶಂಕೆಯಿದ್ದು, ಸೂಕ್ತ ಸಾಕ್ಷ್ಯಾಧಾರಗಳು ಲಭಿಸಿದ ತಕ್ಷಣವೇ ಅವರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತದೆ’ ಎಂದು ತನಿಖಾ ತಂಡದ ಮೂಲಗಳು ಹೇಳಿವೆ.

‘ಆಂಧ್ರಪ್ರದೇಶದ ಚಿತ್ತೂರು, ತಮಿಳುನಾಡಿನ ಚೆನ್ನೈನಲ್ಲಿ ನಾಲ್ವರು, ಬೆಂಗಳೂರಿನ ನಾಲ್ಕು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ತನಿಖೆ ಪ್ರಗತಿ ಕಂಡಿದೆ. ಸದ್ಯದಲ್ಲೇ ಉಳಿದವರನ್ನೂ ಪತ್ತೆಹಚ್ಚಿ ಬಂಧಿಸುತ್ತೇವೆ’ ಎಂದು ಪೊಲೀಸ್ ಮೂಲಗಳು ಹೇಳಿವೆ. ವಶಕ್ಕೆ ಪಡೆದ ಶಂಕಿತರ ಪೈಕಿ, ಇಬ್ಬರು ಮಾಜಿ ಸೈನಿಕರೊಬ್ಬರ ಪುತ್ರರು ಎಂದು ಹೇಳಲಾಗಿದೆ.

ಸಂಚಿಗೆ ಯುವಕರ ಬಳಕೆ: ‘ಅಣ್ಣಪ್ಪ ನಾಯ್ಕ ಗೋವಿಂದಪುರ ಠಾಣೆಯಲ್ಲಿ ಕಾನ್‌ಸ್ಟೆಬಲ್ ಆಗಿದ್ದಾರೆ. ಈ ಹಿಂದೆ ಬಾಣಸವಾಡಿ ಪೊಲೀಸ್ ಠಾಣೆಯ ಅಪರಾಧ ಪತ್ತೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ನಂತರ, ಅವರನ್ನು ಹೊಯ್ಸಳ ಗಸ್ತು ವಾಹನಕ್ಕೆ ನಿಯೋಜಿಸಲಾಗಿತ್ತು. ಗಸ್ತು ವೇಳೆ ಕ್ಸೇವಿಯರ್ ಹಾಗೂ ರವಿ ಅವರ ಪರಿಚಯವಾಗಿತ್ತು. ಪ್ರತಿನಿತ್ಯ ಮೂವರೂ ಭೇಟಿಯಾಗಿ ಚರ್ಚಿಸುತ್ತಿದ್ದರು. ಕ್ಸೇವಿಯರ್ ಅವರು ಸಿಎಂಎಸ್‌ ಏಜೆನ್ಸಿ ವಾಹನದಲ್ಲಿ ಹಣ ರವಾನೆಯ ಬಗ್ಗೆ ಹೇಳಿಕೊಂಡಿದ್ದರು. ಟ್ರಾವೆಲ್‌ ಏಜೆನ್ಸಿ ನಡೆಸಿ ನಷ್ಟಕ್ಕೆ ಒಳಗಾಗಿದ್ದೇನೆ ಎಂದೂ ರವಿ ಅಳಲು ತೋಡಿಕೊಂಡಿದ್ದರು. ಮೂವರು ಸೇರಿಕೊಂಡು ಕಲ್ಯಾಣನಗರ, ಕಮ್ಮನಹಳ್ಳಿಯ ಯುವಕರನ್ನು ಬಳಸಿಕೊಂಡು ದರೋಡೆ ನಡೆಸಲು ಸಂಚು ರೂಪಿಸಿದ್ದರು ಎಂಬುದು ಈಗ ನಡೆದಿರುವ ತನಿಖೆಯಿಂದ ಪತ್ತೆಯಾಗಿದೆ. ಅಣ್ಣಪ್ಪ ನಾಯ್ಕ, ಕ್ಸೇವಿಯರ್ ಹಾಗೂ ರವಿ ಅವರ ಪತ್ನಿಯನ್ನು ವಿಚಾರಣೆ ನಡೆಸಲಾಗುತ್ತಿದೆ’ ಎಂದು ಮೂಲಗಳು ಹೇಳಿವೆ.

ತನಿಖೆ ಸ್ವರೂಪ ತಿಳಿಸಿದ್ದ ಕಾನ್‌ಸ್ಟೆಬಲ್‌: ‘ಯಾವ ಸಮಯದಲ್ಲಿ ದರೋಡೆ ನಡೆಸಬೇಕು, ದರೋಡೆ ನಂತರ ಪೊಲೀಸರಿಂದ ಹೇಗೆ ಪಾರಾಗಬೇಕು? ಪೊಲೀಸರ ತನಿಖೆ ಯಾವ ರೀತಿ ಸಾಗುತ್ತದೆ ಎಂಬ ವಿಚಾರವನ್ನು ಅಣ್ಣಪ್ಪ, ಹುಡುಗರಿಗೆ ತಿಳಿಸಿ ಸಂಚು ರೂಪಿಸಿದ್ದರು. ಅಲ್ಲದೇ ಸಿ.ಸಿ.ಟಿ.ವಿ ಕ್ಯಾಮೆರಾವಿಲ್ಲದ ಸ್ಥಳಗಳಲ್ಲಿ ಕೃತ್ಯ ಎಸಗಬೇಕು ಎಂಬುದನ್ನೂ ಹೇಳಿಕೊಟ್ಟಿದ್ದರು. ಕಾನ್‌ಸ್ಟೆಬಲ್ ಸೂಚನೆಯಂತೆ ಹುಡುಗರು, ₹ 7.11 ಕೋಟಿ ದರೋಡೆ ನಡೆಸಿದ್ದಾರೆ. ಅಲ್ಲದೆ, ಸಿಎಂಎಸ್ ಸೆಕ್ಯೂರಿಟಿ ಏಜೆನ್ಸಿಯ ಮಾಜಿ ಉದ್ಯೋಗಿಗಳು ಕೃತ್ಯಕ್ಕೆ ಬೆಂಬಲ ನೀಡಿರುವುದಕ್ಕೆ ಸುಳಿವು ಸಿಕ್ಕಿದೆ. ದರೋಡೆ ನಡೆಸಿದ ಸ್ವಲ್ಪ ಹಣವನ್ನು ರಾಜ್ಯದ ಗಡಿಭಾಗದಲ್ಲಿ ಬಚ್ಚಿಟ್ಟು ತಂಡ ಪರಾರಿಯಾಗಿದೆ’ ಎಂದು ಮೂಲಗಳು ಹೇಳಿವೆ.

ದರೋಡೆ ಹಣದ ಆಸೆಗಾಗಿ ಸಂಸ್ಥೆಯ ಗೋಪ್ಯ ಮಾಹಿತಿಯನ್ನು ಹಂಚಿಕೊಂಡ ಆರೋಪದ ಮೇಲೆ ಸಿಎಂಎಸ್‌ ಏಜೆನ್ಸಿಯ ಕೆಲವರನ್ನು ವಶಕ್ಕೆ ಪಡೆಯಲಾಗಿದೆ. ಸಿಎಂಎಸ್‌ ಸಂಸ್ಥೆಯ ವಾಹನದ ಎರಡು ಬದಿಯಲ್ಲೂ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಲಾಗಿದೆ. ಆದರೆ, ಈ ವಾಹನಕ್ಕೆ ಅಳವಡಿಸಿದ್ದ ಸಿ.ಸಿ.ಟಿ.ವಿ ಕ್ಯಾಮೆರಾವನ್ನು ತೆಗೆಯಲಾಗಿದೆ. ಹೀಗಾಗಿ ಸಿಎಂಎಸ್‌ ಸಂಸ್ಥೆಯ ಭದ್ರತಾ ವಿಭಾಗದ ಸಿಬ್ಬಂದಿಯನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಮೂಲಗಳು ಹೇಳಿವೆ.

‘ಅಣ್ಣಪ್ಪ ನಾಯ್ಕ ಅವರು ಕುಂಬಳಗೋಡು ಹಾಗೂ ಭಾರತೀನಗರ ಪೊಲೀಸ್ ಠಾಣೆಯಲ್ಲೂ ಕೆಲಸ ಮಾಡಿದ್ದರು. ಅವರ ಮೇಲೆ ಸಾಕಷ್ಟು ಆರೋಪಗಳಿವೆ. ಕ್ರಿಕೆಟ್‌ ಬುಕಿಗಳಿಗೆ ಬೆದರಿಕೆ ಹಾಕಿ ಹಣ ವಸೂಲಿ, ಜೈಲಿನಿಂದ ಬಿಡುಗಡೆಯಾದ ಹುಡುಗರನ್ನು ಬಳಸಿಕೊಂಡು ಅಪರಾಧ ಕೃತ್ಯ ಎಸಗಿರುವುದು ಪತ್ತೆಯಾಗಿದೆ’ ಎಂದು ಮೂಲಗಳು ಹೇಳಿವೆ.

ಅಣ್ಣಪ್ಪ ನಾಯ್ಕ 
ದರೋಡೆ ಪ್ರಕರಣ ಸಂಬಂಧ ಮಹತ್ವದ ಸುಳಿವು ಸಿಕ್ಕಿದೆ. ಹೆಚ್ಚಿನ ಮಾಹಿತಿ ಬಹಿರಂಗ ಪಡಿಸಿದರೆ ಉಳಿದವರು ತಲೆಮರೆಸಿಕೊಳ್ಳುವ ಸಾಧ್ಯತೆ ಇದೆ
ಜಿ.ಪರಮೇಶ್ವರ ಗೃಹ ಸಚಿವ

ದರೋಡೆಗೆ ಸಂಚು ಹೇಗಿತ್ತು...

* ಜೆ.ಪಿ. ನಗರದ ಸಾರಕ್ಕಿ ಮುಖ್ಯರಸ್ತೆಯ ಎಚ್​​ಡಿಎಫ್​​ಸಿ ಬ್ಯಾಂಕ್ ಕರೆನ್ಸಿ ಕೇಂದ್ರದಿಂದ ಹಣವನ್ನು ಹೇಗೆ ಸಾಗಣೆ ಮಾಡಲಾಗುತ್ತದೆ ಎಂಬ ಮಾಹಿತಿ ನೀಡಿದ್ದ ಸಿಎಂಎಸ್‌ ಏಜೆನ್ಸಿ ಮಾಜಿ ಉದ್ಯೋಗಿ ಕ್ಸೇವಿಯರ್

* ವರ್ಷದ ಹಿಂದೆ ಕೆಲಸ ಬಿಟ್ಟಿದ್ದ ಮಾಜಿ ಉದ್ಯೋಗಿ

* ದರೋಡೆ ಬಳಿಕ ಪಾರಾಗುವ ಯೋಜನೆ ರೂಪಿಸಿದ್ದ ಕಾನ್‌ಸ್ಟೆಬಲ್‌

* ಬಾಣಸವಾಡಿಯ ಕಲ್ಯಾಣನಗರ ಹಾಗೂ ಕಮ್ಮನಹಳ್ಳಿಯ ಹುಡುಗರನ್ನು ಬಳಸಿ ವಾಹನ ಅಡ್ಡಗಟ್ಟಿ ದರೋಡೆ

* ಹಲವು ಬಾರಿ ಕರ್ತವ್ಯ ಲೋಪ ಎಸಗಿದ್ದ ಕಾನ್‌ಸ್ಟೆಬಲ್ ಅಣ್ಣಪ್ಪ ನಾಯ್ಕ

* ಸದ್ಯ 20ಕ್ಕೂ ಹೆಚ್ಚು ಮಂದಿಯ ವಿಚಾರಣೆ

* ತಿರುಪತಿಯಲ್ಲಿ ಪತ್ತೆಯಾದ ವಾಹನವನ್ನು ವಶಕ್ಕೆ ಪಡೆದ ಬೆಂಗಳೂರು ದಕ್ಷಿಣ ವಿಭಾಗದ ಪೊಲೀಸರು

₹5.30 ಕೋಟಿ ಜಪ್ತಿ?

‘ದರೋಡೆಯಾದ ₹7.11 ಕೋಟಿ ಪೈಕಿ ₹5.30 ಕೋಟಿಯನ್ನು ಚೆನ್ನೈನಲ್ಲಿ ವಶಕ್ಕೆ ಪಡೆಯಲಾಗಿದೆ’ ಎಂಬ ಮಾಹಿತಿ ಲಭ್ಯವಾಗಿದೆ. ‘ಕಾರ್ಯಾಚರಣೆ ವೇಳೆ ಹಣವನ್ನು ಜಪ್ತಿ ಮಾಡಲಾಗಿದೆ. ಎಷ್ಟು ಎಂಬುದು ನಿಖರವಾಗಿ ಗೊತ್ತಾಗಿಲ್ಲ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ‘ಚೆನ್ನೈನಲ್ಲಿ ಹಣದ ಸಮೇತ ಒಬ್ಬ ಆರೋಪಿಯನ್ನು ಪತ್ತೆ ಹಚ್ಚಲಾಗಿದೆ. ಚಿತ್ತೂರಿನಿಂದ ಚೆನ್ನೈಗೆ ಬೇರೊಂದು ಕಾರಿನಲ್ಲಿ ಹಣ ತೆಗೆದುಕೊಂಡು ಹೋಗುವಾಗ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ’ ಎಂದು ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.