ADVERTISEMENT

ವಿವಿದ ಕೇಸ್‌ಗಳಲ್ಲಿ ಭಾಗಿಯಾಗಿದ್ದ 106 ಆರೋಪಿಗಳ ಬಂಧನ; ₹2.60 ಕೋಟಿ ಸ್ವತ್ತು ಜಪ್ತಿ

ಕೇಂದ್ರ ವಿಭಾಗದ ಪೊಲೀಸರ ಯಶಸ್ವಿ ಕಾರ್ಯಾಚರಣೆ: 3 ಪಿಸ್ತೂಲ್‌, 99 ಗುಂಡುಗಳ ವಶ

​ಪ್ರಜಾವಾಣಿ ವಾರ್ತೆ
Published 7 ಜೂನ್ 2023, 14:31 IST
Last Updated 7 ಜೂನ್ 2023, 14:31 IST
ಕೇಂದ್ರ ವಿಭಾಗದ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಜಪ್ತಿ ಮಾಡಿದ ಬೆಳ್ಳಿ ಹಾಗೂ ಬೆಳ್ಳಿ ಸಾಮಗ್ರಿಯನ್ನು ನಗರ ಪೊಲೀಸ್‌ ಕಮಿಷನರ್‌ ಬಿ. ದಯಾನಂದ್ ಅವರು ಪರಿಶೀಲಿಸಿದರು. –
ಕೇಂದ್ರ ವಿಭಾಗದ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಜಪ್ತಿ ಮಾಡಿದ ಬೆಳ್ಳಿ ಹಾಗೂ ಬೆಳ್ಳಿ ಸಾಮಗ್ರಿಯನ್ನು ನಗರ ಪೊಲೀಸ್‌ ಕಮಿಷನರ್‌ ಬಿ. ದಯಾನಂದ್ ಅವರು ಪರಿಶೀಲಿಸಿದರು. –    ಪ್ರಜಾವಾಣಿ ಚಿತ್ರ

ಬೆಂಗಳೂರು: ಕೇಂದ್ರ ವಿಭಾಗ ವ್ಯಾಪ್ತಿಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ ವಿವಿಧ ಪ್ರಕರಣಗಳಲ್ಲಿ ಭಾಗಿಯಾದ 106 ಮಂದಿ ಆರೋಪಿಗಳನ್ನು ಬಂಧಿಸಿ, ₹2.69 ಕೋಟಿಯ ಸ್ವತ್ತುಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ಕೆಲವು ದಿನಗಳಿಂದ ನಡೆದ ಕಾರ್ಯಾಚರಣೆಯುಲ್ಲಿ ಒಟ್ಟು 103 ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ ಎಂದು ನಗರದ ಪೊಲೀಸ್‌ ಕಮಿಷನರ್ ಬಿ. ದಯಾನಂದ್‌ ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಹೇಳಿದರು.

ಶೇಷಾದ್ರಿ‍ಪುರಂ, ವೈಯ್ಯಾಲಿಕಾವಲ್‌, ಹಲಸೂರುಗೇಟ್‌, ಅಶೋಕ ನಗರ, ವಿವೇಕನಗರ ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದ್ದ ಕಾರ್ಯಾಚರಣೆಯಲ್ಲಿ, ಚಿನ್ನಾಭರಣ ಕಳವು ಮಾಡಿದ್ದ 14 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. 19 ಪ್ರಕರಣಗಳಲ್ಲಿ ₹ 1.5 ಕೋಟಿ ಮೌಲ್ಯದ 2 ಕೆ.ಜಿ 110 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ.

ADVERTISEMENT

ಹಲಸೂರು ಗೇಟ್‌, ವಿವೇಕನಗರ ಪೊಲೀಸ್‌ ಠಾಣೆ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಬೆಳ್ಳಿ ಸಾಮಗ್ರಿ ಕಳವು ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಿಂದ ₹63.19 ಲಕ್ಷದ 105 ಕೆ.ಜಿ. ಬೆಳ್ಳಿ ಸಾಮಗ್ರಿ ಜಪ್ತಿ ಮಾಡಲಾಗಿದೆ ಎಂದು ತಿಳಿಸಿದರು.

ಹೈಗ್ರೌಂಡ್ಸ್‌ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಾರುಗಳನ್ನು ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ₹18 ಲಕ್ಷದ ಕಾರುಗಳನ್ನು ಜಪ್ತಿ ಮಾಡಲಾಗಿದೆ. ಬೈಕ್‌ ಕಳವು ಮಾಡುತ್ತಿದ್ದ ಮೂವರು ಆರೋಪಿಗಳನ್ನು ಶೇಷಾದ್ರಿಪುರಂ, ಅಶೋಕನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ₹3.30 ಲಕ್ಷದ ಐದು ಬೈಕ್‌ಗಳನ್ನು ಜಪ್ತಿ ಮಾಡಲಾಗಿದೆ ಎಂದು ಹೇಳಿದರು.

ಮನೆಗಳಿಗೆ ನುಗ್ಗಿ ನಗದು ಕಳವು ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಿ, ₹2.12 ಲಕ್ಷ ನಗದು ಜಪ್ತಿ ಮಾಡಲಾಗಿದೆ. ವಿವೇಕನಗರ ಪೊಲೀಸರು, ಮೊಬೈಲ್‌ ಕಳವು ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿ 113 ಮೊಬೈಲ್‌ ಜಪ್ತಿ ಮಾಡಿದ್ದಾರೆ ಎಂದು ತಿಳಿಸಿದರು.

ಕಬ್ಬನ್‌ಪಾರ್ಕ್‌ ಪೊಲೀಸರು ಮೂರು ಪಿಸ್ತೂಲ್‌ ಹಾಗೂ 99 ಗುಂಡುಗಳನ್ನು ಜಪ್ತಿ ಮಾಡಿದ್ದಾರೆ. ಇದರ ಮೌಲ್ಯ ₹40 ಲಕ್ಷ ಎಂದು ಅಂದಾಜಿಸಲಾಗಿದೆ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.