
ಬೆಂಗಳೂರು: ಹೊಸ ವರ್ಷದ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ನಡೆಯುವ ಪಾರ್ಟಿಗಳಿಗೆ ಪೂರೈಸಲು ಸಂಗ್ರಹಿಸಿಕೊಂಡಿದ್ದ ₹28.75 ಕೋಟಿ ಮೌಲ್ಯದ ವಿವಿಧ ಮಾದರಿಯ ಡ್ರಗ್ಸ್ ಅನ್ನು ಸಿಸಿಬಿಯ ಮಾದಕ ದ್ರವ್ಯ ನಿಗ್ರಹ ದಳದ ಸಿಬ್ಬಂದಿ ಜಪ್ತಿ ಮಾಡಿದ್ದು ವಿದೇಶದ ಇಬ್ಬರು ಪೆಡ್ಲರ್‌ಗಳನ್ನು ಬಂಧಿಸಿದ್ದಾರೆ.
ತಾಂಜಾನಿಯಾದ ನ್ಯಾನ್ಸಿ ಒಮಾರಿಲಾವಾ ಹಾಗೂ ನೈಜೀರಿಯಾದ ಎಮ್ಯುನಲ್ ಅರೆಂಜಿ ಇಡಿಕೊ ಬಂಧಿತರು.
ಬಂಧಿತರಿಂದ 10 ಕೆ.ಜಿ 369 ಗ್ರಾಂ ಎಂಡಿಎಂಎ ಕ್ರಿಸ್ಟಲ್ಸ್, ಎಂಟು ಕೆ.ಜಿ ಹೈಡ್ರೊಗಾಂಜಾ ಸೇರಿದಂತೆ ಇತರೆ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಸೀಮಾಂತ್‌ಕುಮಾರ್ ಸಿಂಗ್ ಪತ್ರಿಕಾಗೋಷ್ಠಿಯಲ್ಲಿ ಬುಧವಾರ ತಿಳಿಸಿದರು.
ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದರು.
2023ರಲ್ಲಿ ಪ್ರವಾಸಿ ವೀಸಾ ಪಡೆದು ಭಾರತಕ್ಕೆ ಬಂದಿದ್ದ ನ್ಯಾನ್ಸಿ, ನಗರದ ಸಂಪಿಗೆಹಳ್ಳಿಯ ಪಿ ಆ್ಯಂಡ್ ಟಿ ಲೇಔಟ್‌ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಹೇರ್ ಡಿಸೈನ್ ಕೆಲಸ ಮಾಡಿಕೊಂಡಿದ್ದರು. ದೆಹಲಿಯಲ್ಲಿ ಎಂಡಿಎಂಎ ಕ್ರಿಸ್ಟೆಲ್ಸ್ ಖರೀದಿಸಿ ತರುತ್ತಿದ್ದ ಆರೋಪಿ, ಪರಿಚಯಸ್ಥ ಗಿರಾಕಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರು. ಆರೋಪಿ ದಾಸ್ತಾನು ಮಾಡಿಕೊಂಡಿದ್ದ ₹18.50 ಕೋಟಿ ಮೌಲ್ಯದ 9 ಕೆ.ಜಿ 254 ಗ್ರಾಂ ಎಂಡಿಎಂಎ ಕ್ರಿಸ್ಟೆಲ್ಸ್ ಹಾಗೂ ಕೃತ್ಯಕ್ಕೆ ಬಳಸಲಾಗಿದ್ದ ಮೊಬೈಲ್ ಫೋನ್ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.
ಲಾಲ್‌ಬಾಗ್ ಸೌತ್ ಗೇಟ್ ಬಳಿ ಡ್ರಗ್ಸ್ ಮಾರಾಟ ಮಾಡಲು ಯತ್ನಿಸುತ್ತಿದ್ದ ವೇಳೆ ಎಮ್ಯುನಲ್ ಅರೆಂಜಿ ಇಡಿಕೊ ಎಂಬುವವರನ್ನು ಬಂಧಿಸಲಾಗಿದೆ. 2021ರಲ್ಲಿ ಬ್ಯುಸಿನೆಸ್ ವೀಸಾ ಪಡೆದು ದೆಹಲಿಗೆ ಬಂದಿದ್ದ ಆರೋಪಿ, ನಂತರ 2022ರಲ್ಲಿ ಬೆಂಗಳೂರಿಗೆ ಬಂದು ನೆಲಸಿದ್ದರು. ದೆಹಲಿ, ಗೋವಾದಲ್ಲಿ ವಿದೇಶಿ ಡ್ರಗ್ಸ್ ಪೆಡ್ಲರ್‌ಗಳಿಂದ ಎಂಡಿಎಂಎ ಕ್ರಿಸ್ಟೆಲ್ಸ್ ಕಡಿಮೆ ಬೆಲೆಗೆ ಖರೀದಿಸಿ ನಗರಕ್ಕೆ ತಂದು ಮಾರಾಟ ಮಾಡುತ್ತಿದ್ದರು. ಆರೋಪಿ ಬಳಿಯಿದ್ದ ₹2.25 ಕೋಟಿ ಮೌಲ್ಯದ 1 ಕೆ.ಜಿ 115 ಗ್ರಾಂ ಎಂಡಿಎಂಎ ಕ್ರಿಸ್ಟಲ್ಸ್ ಹಾಗೂ ಕೃತ್ಯಕ್ಕೆ ಬಳಸುತ್ತಿದ್ದ ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮೂಲಗಳು ಹೇಳಿವೆ.
ಆರೋಪಿ ಎಮ್ಯುನಲ್ ವಿರುದ್ಧ 2024ರ ಫೆಬ್ರುವರಿಯಲ್ಲಿ ಗೋವಿಂದಪುರ ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯ್ದೆಯ ಅಡಿ ಪ್ರಕರಣ ದಾಖಲಾಗಿತ್ತು ಎಂದು ಮೂಲಗಳು ಹೇಳಿವೆ.
₹8 ಕೋಟಿ ಹೈಡ್ರೊಗಾಂಜಾ ಜಪ್ತಿ
ಚಾಮರಾಜಪೇಟೆಯಲ್ಲಿರುವ ವಿದೇಶಿ ಅಂಚೆ ಕಚೇರಿಗೆ ಪಾರ್ಸೆಲ್‌ಗಳಲ್ಲಿ ಬಂದಿದ್ದ ₹8 ಕೋಟಿ ಮೌಲ್ಯದ 8 ಕೆ.ಜಿ ಹೈಡ್ರೊಗಾಂಜಾ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು. ವಿದೇಶದಿಂದ ಹೈಡ್ರೊಗಾಂಜಾವನ್ನು ಖರೀದಿಸಿ ಅವುಗಳನ್ನು ವ್ಯವಸ್ಥಿತವಾಗಿ ಪ್ಯಾಕ್ ಮಾಡಿ ನಗರಕ್ಕೆ ತರಿಸಿಕೊಂಡಿರುವುದು ಪತ್ತೆಯಾಗಿದೆ. ವಿದೇಶದಿಂದ ಯಾರು ಡ್ರಗ್ಸ್ ತರಿಸಿಕೊಂಡಿದ್ದರು ಎಂಬುದನ್ನು ಪತ್ತೆ ಹಚ್ಚಲಾಗುತ್ತಿದೆ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.