ADVERTISEMENT

ತಾಯಿ ಜತೆಗೆ ಜಗಳವಾಡಿದ್ದ ಸೇಡಿಗೆ ಕೃತ್ಯ: ಬಾಲಕಿ ಅಪಹರಿಸಿ ಕತ್ತು ಹಿಸುಕಿ ಕೊಲೆ

​ಪ್ರಜಾವಾಣಿ ವಾರ್ತೆ
Published 7 ಜನವರಿ 2026, 16:00 IST
Last Updated 7 ಜನವರಿ 2026, 16:00 IST
ಷಹನಾಜ್ ಖಾತುಂ
ಷಹನಾಜ್ ಖಾತುಂ   

ಬೆಂಗಳೂರು: ನಲ್ಲೂರುಹಳ್ಳಿಯಲ್ಲಿ ಪೋಷಕರ ಜತೆಗೆ ನೆಲಸಿದ್ದ ಆರು ವರ್ಷದ ಬಾಲಕಿಯನ್ನು ಅಪಹರಿಸಿ, ಕೊಲೆ ಮಾಡಿ, ಮೃತದೇಹವನ್ನು ಪ್ಲಾಸ್ಟಿಕ್‌ ಚೀಲದಲ್ಲಿ ತುಂಬಿ ಎಸೆದು, ಆರೋಪಿ ಪರಾರಿ ಆಗಿದ್ದಾನೆ. 

ಪಶ್ಚಿಮ ಬಂಗಾಳದ ಇಂಜಮುಲ್‌ ಶೇಖ್‌ ಅವರ ಪುತ್ರಿ ಶಹನಾಜ್ ಖಾತುನ್ ಕೊಲೆಯಾದವಳು. ಆರೋಪಿಯ ಪತ್ತೆಗೆ ವೈಟ್‌ಫೀಲ್ಡ್ ಠಾಣೆಯ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಕೆಲವು ತಿಂಗಳ ಹಿಂದೆ ನಗರಕ್ಕೆ ಬಂದಿದ್ದ ಇಂಜಮುಲ್‌ ಶೇಖ್‌ ಕುಟುಂಬವು ನಲ್ಲೂರುಹಳ್ಳಿ ಸುತ್ತಮುತ್ತ ಕೂಲಿ ಕೆಲಸ ಮಾಡುತ್ತಿದ್ದರು. ಸೋಮವಾರ ಬೆಳಿಗ್ಗೆ ಮನೆಯ ಎದುರು ಬಾಲಕಿ ಆಟವಾಡುತ್ತಿದ್ದಳು. ಆಗ ಅಪಹರಣ ನಡೆದಿತ್ತು. ಮಂಗಳವಾರ ಬೆಳಿಗ್ಗೆ ಪೋಷಕರು ನಾಪತ್ತೆ ದೂರು ದಾಖಲಿಸಿದ್ದರು. ಠಾಣೆಯ ಸಿಬ್ಬಂದಿ ಹುಡುಕಾಟ ನಡೆಸುತ್ತಿದ್ದಾಗ ದೇವಸ್ಥಾನದ ಪಕ್ಕದ ಕಾಲುವೆಯಲ್ಲಿ ಅದೇ ದಿನ ರಾತ್ರಿ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸರು ಹೇಳಿದರು.

ADVERTISEMENT

‘ಬಾಲಕಿಯ ಪೋಷಕರು ವಾಸವಿದ್ದ ಪ್ರದೇಶದಲ್ಲಿ ವ್ಯಕ್ತಿಯೊಬ್ಬ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದ್ದು, ಆರೋಪಿಯ ಪತ್ತೆಗೆ ಮೂರು ತಂಡ ರಚಿಸಲಾಗಿದೆ. ಮೃತದೇಹದಲ್ಲಿ ಬೇರೆ ಯಾವುದೇ ಗಾಯಗಳು ಕಂಡುಬಂದಿಲ್ಲ. ಪ್ಲಾಸ್ಟಿಕ್ ಹಗ್ಗ ಬಳಸಿ ಉಸಿರುಗಟ್ಟಿಸಿ ಕೊಲೆ ಮಾಡಿರುವುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ’ ಎಂದು ವೈಟ್‌ಫೀಲ್ಡ್ ವಿಭಾಗದ ಡಿಸಿಪಿ ಸೈದುಲು ಅಡಾವತ್ ತಿಳಿಸಿದರು.

‘ಪಕ್ಕದ ಮನೆಯ ನಿವಾಸಿಯ ಜತೆಗೆ ಬಾಲಕಿಯ ತಾಯಿ ಇತ್ತೀಚೆಗೆ ಜಗಳವಾಡಿದ್ದರು. ಅದೇ ಸಿಟ್ಟಿನಿಂದ ಆ ವ್ಯಕ್ತಿ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ’ ಎಂದು ಪೊಲೀಸರು ಹೇಳಿದರು.