ಬೆಂಗಳೂರು: ಚೋಳರ ಕಾಲದ ಐತಿಹಾಸಿಕ ಪಟ್ಟಂದೂರು ಅಗ್ರಹಾರ ಕೆರೆಯನ್ನು ರಕ್ಷಿಸಲು ಮತ್ತು ಪುನರುಜ್ಜೀವನಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಬೇಕು ಎಂದು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಮೂಲಕ ಮನವಿ ಮಾಡಿಕೊಳ್ಳಲಾಗಿದೆ.
ರಾಜ್ಯ ಸರ್ಕಾರ ವಿರುದ್ಧದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (ಪಿಐಎಲ್) ವಿಚಾರಣೆ ಹೈಕೋರ್ಟ್‌ನಲ್ಲಿ ನಡೆಯಿತು.
‘ವೈಟ್‌ಫೀಲ್ಡ್‌ನಲ್ಲಿರುವ ಪಟ್ಟಂದೂರು ಅಗ್ರಹಾರ ಕೆರೆ ಒಂದು ಸಾವಿರ ವರ್ಷದಿಂದ ಅಸ್ತಿತ್ವದಲ್ಲಿದೆ. ಈ ಕೆರೆಯನ್ನು ಚೋಳರ ಆಳ್ವಿಕೆಯಲ್ಲಿ ನಿರ್ಮಿಸಲಾಗಿದೆ ಎಂಬುದಕ್ಕೆ ಪುರಾತತ್ತ್ವ ಇಲಾಖೆಯಲ್ಲಿ ಪುರಾವೆಗಳಿವೆ. ಕಂದಾಯ ದಾಖಲೆಗಳೂ ಈ ಜಮೀನು ‘ಸರ್ಕಾರಿ ಕೆರೆ’ ಪ್ರದೇಶ ಎಂದೇ ಪ್ರತಿಬಿಂಬಿಸುತ್ತವೆ. ಇಂತಹ ಖಚಿತ ಮತ್ತು ಅಧಿಕೃತ ದಾಖಲೆಗಳಿದ್ದರೂ ಈ ಪ್ರದೇಶವನ್ನು ಅತಿಕ್ರಮಣ ಮಾಡಿರುವವರು ‘ಭೂ ಸುಧಾರಣಾ ಕಾಯ್ದೆಯ ಅಡಿಯಲ್ಲಿ ತಮಗೆ ಈ ಜಮೀನು ನೀಡಲಾಗಿದೆ’ ಎಂಬ ಸುಳ್ಳನ್ನು ಪ್ರತಿಪಾದಿಸುತ್ತಿದ್ದಾರೆ’ ಎಂದು ಅರ್ಜಿದಾರರ ಪರ ವಕೀಲ ಪ್ರಜ್ವಲ್ ಕೆ.ಆರಾಧ್ಯ ಹೇಳಿದರು.
ಪ್ರಕರಣದ ವಿಚಾರಣೆಯನ್ನು ಆಗಸ್ಟ್ 8ಕ್ಕೆ ಮುಂದೂಡಲಾಯಿತು.
ಐತಿಹಾಸಿಕ ಕೆರೆ: ‘975 ವರ್ಷಗಳಷ್ಟು ಹಳೆಯದಾದ ಪಟ್ಟಂದೂರು ಅಗ್ರಹಾರ ಕೆರೆಯನ್ನು ರಕ್ಷಿಸಬೇಕು’ ಎಂದು ಸ್ಥಳೀಯ ನಿವಾಸಿಗಳ ಆಗ್ರಹವಾಗಿದೆ.
‘ಕ್ರಿ.ಶ. 1043ರಲ್ಲಿ ಪಟ್ಟಂದೂರು ಅಗ್ರಹಾರ ಕೆರೆ ಮೂರು ತೂಬುಗಳನ್ನು ಹೊಂದಿತ್ತು. ರಾಜನು ನೀರಿನ ಸುತ್ತಲೂ ದುರ್ಗಾ, ಕ್ಷೇತ್ರಪಾಲ ಮತ್ತು ಗಣಪತಿಯ ಮೂರು ದೇವತೆಗಳ ವಿಗ್ರಹಗಳನ್ನು ಸ್ಥಾಪಿಸಲು ಆದೇಶಿಸಿದ್ದನು ಎಂಬುದು ಕಾಡುಗೋಡಿಯ ಸ್ಮಶಾನವೊಂದರಲ್ಲಿ ಕಲ್ಲಿನ ಮೇಲಿನ ತಮಿಳು ಲಿಪಿ ಕೆತ್ತನೆಗಳಿಂದ ತಿಳಿದುಬರುತ್ತದೆ’ ಎಂದು ಇತಿಹಾಸಕಾರ ಉದಯ ಕುಮಾರ್ ಹೇಳಿದರು.
‘ಮಾನವ ನಿರ್ಮಿತ ಕೆರೆಗಳ ಜಾಲದಲ್ಲಿ ಪಟ್ಟಂದೂರು ಅಗ್ರಹಾರ ಕೆರೆಯೂ ಒಂದಾಗಿದೆ. ಬೇಸಿಗೆಯಲ್ಲಿ ಒಣಗಿ ಮಳೆಗಾಲದಲ್ಲಿ ತುಂಬುತ್ತಿದ್ದ ಈ ಕಾಲೋಚಿತ ನೀರಿನ ಮೂಲವು ಬೆಂಗಳೂರಿನ ಕೃಷಿ ಸಮುದಾಯದ ಜೀವನೋಪಾಯದ ಕೇಂದ್ರವಾಗಿತ್ತು’ ಎಂದರು.
‘ಅಕ್ರಮವಾಗಿ ತ್ಯಾಜ್ಯ ಸುರಿಯುವ ಮೂಲಕ ಪಟ್ಟಭದ್ರ ಹಿತಾಸಕ್ತಿಗಳು ಕೆರೆಯ ತಳಭಾಗವನ್ನು ಸಮತಟ್ಟು ಮಾಡಿವೆ. ಬಿಬಿಎಂಪಿ ಕಣ್ಣು ಮುಚ್ಚಿಕೊಂಡಿದ್ದು ಮಾತ್ರವಲ್ಲದೆ, ಮರಗಳನ್ನು ಕಡಿದು ಈ ವರ್ಷದ ಆರಂಭದಲ್ಲಿ ಕೆರೆಯ ತಳಭಾಗದಲ್ಲಿ 80 ಅಡಿ ಉದ್ದದ ರಸ್ತೆ ನಿರ್ಮಿಸಲು ಪ್ರಾರಂಭಿಸಿತು. ಹಲವು ಭಾಗದಲ್ಲಿ ಒತ್ತುವರಿಯಾಗಿದೆ. ಅದೆಲ್ಲವನ್ನೂ ತೆರವುಗೊಳಿಸಬೇಕು’ ಎಂದು ಪಟ್ಟಂದೂರು ಅಗ್ರಹಾರ ಆರ್‌ಡಬ್ಲ್ಯೂಎ ಫೆಡರೇಷನ್ ಸದಸ್ಯ ಸಂದೀಪ್ ಅನಿರುಧನ್ ಹೇಳಿದರು.
‘1865ರ ಬ್ರಿಟಿಷ್ ಯುಗದ ನಕ್ಷೆಯಲ್ಲಿ ಪಟ್ಟಂದೂರು ಕೆರೆ ಮತ್ತು ಅದಕ್ಕೆ ಸಂಪರ್ಕ ಹೊಂದಿದ ರಾಜಕಾಲುವೆಗಳ ಮಾಹಿತಿ ಇದೆ. 1950ರ ಸಮೀಕ್ಷೆಯಲ್ಲಿ ಈ ಪ್ರದೇಶವನ್ನು ಕೆರೆ ಎಂದೇ ಗುರುತಿಸಲಾಗಿದೆ. ಇದು ಸರ್ಕಾರಿ ಆಸ್ತಿಯಾಗಿದ್ದರೂ, 1970ರ ದಶಕದಲ್ಲಿ ಕೆರೆಯನ್ನು ಅತಿಕ್ರಮಿಸಿ, ಕೃಷಿಭೂಮಿಯನ್ನಾಗಿ ಪರಿವರ್ತಿಸಲಾಗಿದೆ. ಈ ಕೆರೆಯ ಒತ್ತುವರಿಯನ್ನು ತೆರವುಗೊಳಿಸಿ, ಜಲಮೂಲವಾಗಿ ಉಳಿಸಬೇಕು ಎಂಬುದು ವೈಟ್‌ಫೀಲ್ಡ್‌ನಲ್ಲಿರುವ ನಾಗರಿಕರ ಹಲವು ಗುಂಪುಗಳ ಒತ್ತಾಯವಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.