
ಬೆಂಗಳೂರು: ಐದು ನಗರ ಪಾಲಿಕೆಗಳು 2026–27ನೇ ಸಾಲಿನ ಬಜೆಟ್ ಸಿದ್ಧತೆಗೆ ಅಣಿಯಾಗುತ್ತಿವೆ. ಆದರೆ, ಐದು ತಿಂಗಳಲ್ಲಿ ಸಂಪನ್ಮೂಲ ಕ್ರೋಡೀಕರಣದಲ್ಲಿ ಹಿಂದುಳಿದ್ದು, ಪ್ರಸಕ್ತ ಆರ್ಥಿಕ ವರ್ಷದಲ್ಲಿ ಶೇ 57ರಷ್ಟು ಮಾತ್ರ ಆಸ್ತಿ ತೆರಿಗೆಯನ್ನು ಸಂಗ್ರಹಿಸಿವೆ.
2025–26ನೇ ಸಾಲಿನ ಮೊದಲ ಎರಡು ತಿಂಗಳಲ್ಲಿಯೇ ₹2 ಸಾವಿರ ಕೋಟಿಗೂ ಹೆಚ್ಚು ತೆರಿಗೆ ಸಂಗ್ರಹವಾಗಿತ್ತು. ನಂತರ, ಬಿಬಿಎಂಪಿಯಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರವಾಗಿ ಐದು ನಗರ ಪಾಲಿಕೆ ರಚನೆಯಾಗುವ ಪ್ರಕ್ರಿಯೆಯಲ್ಲಿ ಆಸ್ತಿ ತೆರಿಗೆ ಸಂಗ್ರಹ ನನೆಗುದಿಗೆ ಬಿದ್ದಿದೆ.
2024–25ನೇ ಸಾಲಿನಲ್ಲಿ ಫೆಬ್ರುವರಿ 13ವರೆಗೆ ಒಟ್ಟು ₹4,547 ಕೋಟಿ ಆಸ್ತಿ ತೆರಿಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಸಂಗ್ರಹವಾಗಿತ್ತು. ಅದೇ ವ್ಯಾಪ್ತಿಯಲ್ಲಿ ಐದು ನಗರ ಪಾಲಿಕೆಗಳಿದ್ದರೂ, ತೆರಿಗೆ ಸಂಗ್ರಹದಲ್ಲಿ ಈ ವರ್ಷ ಒಂದೂವರೆ ಸಾವಿರ ಕೋಟಿಯಷ್ಟು ಕಡಿಮೆಯಾಗಿದೆ.
ಬಿಬಿಎಂಪಿಯ ಬಜೆಟ್ ಅನ್ನು ಐದು ನಗರ ಪಾಲಿಕೆಗಳಿಗೆ ವಿಭಜನೆ ಮಾಡಲಾಗಿತ್ತು. ಅದರಲ್ಲಿ ಆಸ್ತಿ ತೆರಿಗೆ ಸಂಗ್ರಹವೇ ಪ್ರಮುಖ ಸಂಪನ್ಮೂಲವಾಗಿದ್ದರೂ ಅದನ್ನು ಸಂಗ್ರಹಿಸುವಲ್ಲಿ ಹೊಸ ನಗರ ಪಾಲಿಕೆಗಳು ವಿಫಲವಾಗಿವೆ. 2025ರ ಸೆಪ್ಟೆಂಬರ್‌ನಿಂದ ರಸ್ತೆ ಪರಿಶೀಲನೆ, ಪಾದಚಾರಿ ಮಾರ್ಗದಲ್ಲಿ ಕಸ ತೆರವು ಪರಿಶೀಲನೆ ಎಂದು ನಗರ ಪಾಲಿಕೆ ವ್ಯಾಪ್ತಿಗೆ ಬಂದಿರುವ ಹೊಸ ಆಯುಕ್ತರು, ಅಧಿಕಾರಿಗಳೆಲ್ಲರೂ ಬೀದಿಗಿಳಿದಿದ್ದಾರೆ. ಆದರೆ, ಸಂಪನ್ಮೂಲ ಕ್ರೋಡಿಕರಣದಲ್ಲಿ ಹಿಂದೆ ಬಿದ್ದಿದ್ದಾರೆ.
‘ನಗರ ಪಾಲಿಕೆಯಲ್ಲಿ ಹಣವಿಲ್ಲ, ಅನುದಾನವಿಲ್ಲ’ ಎಂಬುದೇ ಮೊದಲ ಮಾತಾಗಿರುವಾಗ, ಸಂಪನ್ಮೂಲ ಕ್ರೋಡೀಕರಿಸದೆ ಹೊಸ ಬಜೆಟ್‌ನಲ್ಲಿ ಸರ್ಕಾರದ ಅನುದಾನದ ಮೇಲೆ ಹೆಚ್ಚಿನ ನಿಗಾವಹಿಸಿ ಸಿದ್ಧತೆ ನಡೆಸಿದ್ದಾರೆ.
ಉತ್ತರ ಕೊನೆ: ಐದು ನಗರ ಪಾಲಿಕೆಗಳಲ್ಲಿ ಬೆಂಗಳೂರು ಉತ್ತರ ನಗರ ಪಾಲಿಕೆ ಆಸ್ತಿ ತೆರಿಗೆ ಸಂಗ್ರಹದಲ್ಲಿ ತುಂಬಾ ಹಿಂದೆ ಇದೆ. ₹1,242 ಕೋಟಿ ಪೈಕಿ ₹651 ಕೋಟಿ ಅಷ್ಟೇ ಸಂಗ್ರಹಿಸಿ ಕೊನೆ ಸ್ಥಾನದಲ್ಲಿದೆ.
ಆಸ್ತಿ ತೆರಿಗೆಯಲ್ಲಿ ಅತಿಹೆಚ್ಚು ಕೊಡುಗೆ ನೀಡುವ ಪೂರ್ವ ನಗರ ಪಾಲಿಕೆಯಲ್ಲೂ ಕಳೆದ ಆರ್ಥಿಕ ವರ್ಷಕ್ಕಿಂತ ಶೇ 16.10ರಷ್ಟು ಕಡಿಮೆ ಸಂಗ್ರಹವಾಗಿದೆ. ₹1,000 ಕೋಟಿಯ ಗಡಿ ದಾಟಿದ್ದರೂ ಒಟ್ಟಾರೆ ಪ್ರಮಾಣದಲ್ಲಿ ಶೇ 60ರಲ್ಲೇ ಇದೆ. ಪಶ್ಚಿಮ, ಕೇಂದ್ರ, ದಕ್ಷಿಣ ನಗರ ಪಾಲಿಕೆಗಳೂ ಆಸ್ತಿ ತೆರಿಗೆ ಸಂಗ್ರಹದಲ್ಲಿ ಹೆಚ್ಚಿನ ಸಾಧನೆ ಮಾಡಿಲ್ಲ.
‘ಆರ್ಥಿಕ ವರ್ಷದ ಕೊನೆಯ ತಿಂಗಳು ಮಾರ್ಚ್‌ನಲ್ಲಿ ಬಾಕಿ ಉಳಿದಿರುವ ಆಸ್ತಿ ತೆರಿಗೆಯನ್ನು ಸಂಗ್ರಹಿಸಲು ಯೋಜಿಸಲಾಗಿದೆ. ಅತಿ ಹೆಚ್ಚು ಪ್ರಯಾಸಪಟ್ಟರೂ ಶೇ 85ರ ಆಸುಪಾಸಿನಲ್ಲಿ ಸಂಗ್ರಹ ಸಾಧ್ಯವಾಗಬಹುದು. ಶೇ 100ರಷ್ಟು ಗುರಿ ಮುಟ್ಟಲು ಸಾಧ್ಯ ಇಲ್ಲ’ ಎಂದು ಅಧಿಕಾರಿಗಳು ತಿಳಿಸಿದರು.
‘ವಾಸ್ತವದಲ್ಲಿ ಅಧಿಕ ತೆರಿಗೆ ಸಂಗ್ರಹ’
‘ನಮ್ಮದು ಸಿಬಿಡಿ ಪ್ರದೇಶವಾಗಿದ್ದು, ಇಲ್ಲಿ ಹೊಸ ಕಟ್ಟಡಗಳು ನಿರ್ಮಾಣ ವಾಗುವುದಿಲ್ಲ. ವಾಣಿಜ್ಯ ಕಟ್ಟಡಗಳೇ ಹೆಚ್ಚಿದ್ದು, ಅವುಗಳಿಂದ ಪ್ರತಿವರ್ಷ
ನಿರ್ದಿಷ್ಟ ತೆರಿಗೆ ಮಾತ್ರ ಬರುತ್ತದೆ. ಸಾಮಾನ್ಯವಾಗಿ, ಪ್ರತಿ ವರ್ಷ ಶೇ 20ರಷ್ಟು
ಹೆಚ್ಚು ಗುರಿ ನೀಡಲಾಗುತ್ತದೆ. ಅಭಿವೃದ್ಧಿಯಾಗುತ್ತಿರುವ ನಗರ ಪಾಲಿಕೆಗಳಲ್ಲಿ ಸಂಗ್ರಹ ಹೆಚ್ಚಾಗಲು ಸಾಧ್ಯವಿದೆ. ಆದರೆ, ಕೇಂದ್ರ ನಗರ ಪಾಲಿಕೆಯಲ್ಲಿ ಒಂದೇ ರೀತಿಯ ತೆರಿಗೆ ಸಂಗ್ರಹವಾಗುತ್ತದೆ. ಹೀಗಾಗಿ, ಗುರಿಯನ್ನು ಹೊರತುಪಡಿಸಿದರೆ, ನಾವು ಹೆಚ್ಚಿನ ಸಂಗ್ರಹವನ್ನೇ ಮಾಡಿದ್ದೇವೆ. ಇಲ್ಲಿನ ಬಹುತೇಕ ವಾಣಿಜ್ಯೋದ್ಯಮಿಗಳು ಮಾರ್ಚ್‌ನಲ್ಲಿ ತೆರಿಗೆ ಪಾವತಿಸುತ್ತಾರೆ. ಮುಂದಿನ ತಿಂಗಳು ಸಂಗ್ರಹ ಹೆಚ್ಚಾಗಲಿದ್ದು, ವಾಸ್ತವದ ಗುರಿಯಲ್ಲಿ ಶೇ 5ರಿಂದ ಶೇ 6ರಷ್ಟು ಹೆಚ್ಚು ತೆರಿಗೆ ಸಂಗ್ರಹವಾಗಲಿದೆ’ ಎಂದು ಕೇಂದ್ರ ನಗರ ಪಾಲಿಕೆಯ ಆಯುಕ್ತ ರಾಜೇಂದ್ರ ಚೋಳನ್ ಹೇಳಿದರು.
ಆಸ್ತಿ ತೆರಿಗೆ ಸಂಗ್ರಹ
ನಗರ ಪಾಲಿಕೆ; 2025–26ರ ಗುರಿ; ಸಂಗ್ರಹ; ಶೇಕಡ
ದಕ್ಷಿಣ; ₹1,228.85 ಕೋಟಿ; ₹745.33 ಕೋಟಿ; ಶೇ 60.65
ಪೂರ್ವ; ₹1,673.46 ಕೋಟಿ; ₹1,010.42 ಕೋಟಿ; ಶೇ 60.38
ಪಶ್ಚಿಮ; ₹1,281.59 ಕೋಟಿ; ₹761.35 ಕೋಟಿ; ಶೇ 59.41
ಕೇಂದ್ರ; ₹1,273.78 ಕೋಟಿ; ₹724.77 ಕೋಟಿ; ಶೇ 56.90
ಉತ್ತರ; ₹1,242.33 ಕೋಟಿ; ₹651.92 ಕೋಟಿ; ಶೇ 52.48
ಒಟ್ಟು; ₹6,700 ಕೋಟಿ; ₹3,893.79 ಕೋಟಿ; ಶೇ 57.96
21,73,617; ಐದು ನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಆಸ್ತಿಗಳು
4,53,117; ಐದು ನಗರ ಪಾಲಿಕೆ ವ್ಯಾಪ್ತಿಯಲ್ಲಿ ತೆರಿಗೆ ಪಾವತಿಸಬೇಕಿರುವವರು
₹903 ಕೋಟಿ; ತೆರಿಗೆ ಪಾವತಿಯಾಗಬೇಕಾದ ಮೊತ್ತ
1,80,795; ಐದು ನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ತೆರಿಗೆ ಸುಸ್ತಿದಾರರು
₹644.81 ಕೋಟಿ; ಸುಸ್ತಿದಾರರಿಂದ ಬಾಕಿಯಿರುವ ಮೊತ್ತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.