ADVERTISEMENT

41,768 ವಿದ್ಯಾರ್ಥಿಗಳಿಗೆ ನಾಳೆ ಪದವಿ ಪ್ರದಾನ

ಏ. 11ರಂದು ಬೆಂಗಳೂರು ನಗರ ವಿ.ವಿ. ಮೊದಲ ಘಟಿಕೋತ್ಸವ: ಪ್ರಥಮ ರ‍್ಯಾಂಕ್‌ ಪಡೆದ 84 ವಿದ್ಯಾರ್ಥಿಗಳು

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2022, 20:28 IST
Last Updated 9 ಏಪ್ರಿಲ್ 2022, 20:28 IST
ಪೂರ್ವ ಎನ್‌. ಗಾಂಧಿ
ಪೂರ್ವ ಎನ್‌. ಗಾಂಧಿ   

ಬೆಂಗಳೂರು: ಬೆಂಗಳೂರು ನಗರ ವಿಶ್ವವಿದ್ಯಾಲಯದ ಮೊದಲ ವಾರ್ಷಿಕ ಘಟಿಕೋತ್ಸವದಲ್ಲಿ ಒಟ್ಟು 41,768 ವಿದ್ಯಾರ್ಥಿಗಳು ಪದವಿ ಸ್ವೀಕರಿಸಲಿದ್ದಾರೆ. ಇವರಲ್ಲಿ 26,945 (ಶೇ 64.51) ವಿದ್ಯಾರ್ಥಿನಿಯರು.

‘ಏ.11ರಂದು ಬೆಳಿಗ್ಗೆ 10.30ಕ್ಕೆ ಜ್ಞಾನಜ್ಯೋತಿ ಸಭಾಂಗಣದಲ್ಲಿ ಘಟಿ ಕೋತ್ಸವ ನಡೆಯಲಿದ್ದು, ಪ್ರಥಮ ರ‍್ಯಾಂಕ್‌ ಪಡೆದ 84 ವಿದ್ಯಾರ್ಥಿಗಳು ಪ್ರಮಾಣಪತ್ರಗಳನ್ನು ಸ್ವೀಕರಿಸಲಿ
ದ್ದಾರೆ. ಇವರಲ್ಲಿ 2018–20ನೇ ಶೈಕ್ಷಣಿಕ ವರ್ಷದ 32 ಮತ್ತು 2019–21ರ ಶೈಕ್ಷಣಿಕ ವರ್ಷದ 32 ಸ್ನಾತಕೋತ್ತರ ವಿದ್ಯಾರ್ಥಿಗಳು ವಿಶ್ವವಿದ್ಯಾಲಯ ಸ್ಥಾಪಿಸಿರುವ ಚಿನ್ನದ ಪದಕ ( ₹10 ಸಾವಿರ ಮೌಲ್ಯ) ಮತ್ತು₹20 ಸಾವಿರ ನಗದು ಬಹುಮಾನ ಸ್ವೀಕರಿಸಲಿ
ದ್ದಾರೆ’ ಎಂದು ಕುಲಪತಿ ಪ್ರೊ. ಲಿಂಗರಾಜ ಗಾಂಧಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಎಂ.ಎ. ಫ್ರೆಂಚ್‌ ವಿಷಯಕ್ಕೆ ದಿವಂಗತ ಬಿ. ನಂಜುಂಡಯ್ಯ ಐ.ಇ.ಎಸ್‌. ಸ್ಮಾರಕ ಚಿನ್ನದ ಪದಕ, ಎಂ.ಎಸ್ಸಿ. ಜೈವಿಕ ರಸಾಯನವಿಜ್ಞಾನಕ್ಕೆ ಪ್ರೊ.ಪಿ.ಎಸ್‌. ವೀರಭದ್ರಪ್ಪ ಸ್ಮಾರಕ ಚಿನ್ನದ ಪದಕ, ಎಂ.ಎಸ್ಸಿ. ಸೂಕ್ಷ್ಮಜೀವಾಣುವಿಜ್ಞಾನ ವಿಭಾಗಕ್ಕೆ ಡಾ. ಎಂ.ಎಸ್‌. ರಾಮಯ್ಯ ಸ್ಮಾರಕ ಚಿನ್ನದ ಪದಕ ಸ್ಥಾಪಿಸಲಾಗಿದೆ. ಪ್ರತಿ ಚಿನ್ನದ ಪದಕಕ್ಕಾಗಿ ಬ್ಯಾಂಕ್‌ನಲ್ಲಿ ತಲಾ ₹6 ಲಕ್ಷ ಠೇವಣಿ ಇಡಲಾಗಿದ್ದು, ಇದರ ಬಡ್ಡಿ ಮೊತ್ತವನ್ನು ಚಿನ್ನದ ಪದಕಗಳಿಗೆ ವೆಚ್ಚ ಮಾಡಲಾಗುತ್ತಿದೆ’ ಎಂದು ವಿವರಿಸಿದರು.

ADVERTISEMENT

‘ಪ್ರವಾಸೋದ್ಯಮ ನಿರ್ವಹಣೆ ವಿಷಯದ ಸ್ನಾತಕೋತ್ತರ ಪದವಿಯಲ್ಲಿ ಕಮ್ಯೂನಿಟಿ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ ಸ್ಟಡೀಸ್‌ ಕಾಲೇಜು ವತಿಯಿಂದ ಚಿನ್ನದ ಪದಕ ಹಾಗೂ ಬಿ.ಕಾಂ. ಕೋರ್ಸ್‌ನಲ್ಲಿಡಾ. ಚೆನ್ನರಾಜ್‌ ರಾಯ್‌ಚಂದ್‌ ಸ್ಮಾರಕ ಚಿನ್ನದ ಪದಕ ಹಾಗೂ ಬಿ.ಕಾಂ ಮತ್ತು ಬಿಬಿಎ ಕೋರ್ಸ್‌ನಲ್ಲಿ ಶೇಷಾದ್ರಿಪುರ ಏಜುಕೇಷನಲ್‌ ಟ್ರಸ್ಟ್‌ ವತಿಯಿಂದ ಚಿನ್ನದ ಪದಕ ಸ್ಥಾಪಿಸಲಾಗಿದೆ’
ಎಂದರು.

‘ಕೋವಿಡ್‌ ಕಾರಣಕ್ಕೆ 2021ರಲ್ಲಿ ಘಟಿಕೋತ್ಸವ ನಡೆಸಲು ಸಾಧ್ಯವಾಗಲಿಲ್ಲ. 2021ರಲ್ಲಿ ಕೇವಲ ಸ್ನಾತಕೋತ್ತರ ವಿದ್ಯಾರ್ಥಿಗಳು ಮಾತ್ರ ಇದ್ದರು. ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ಮಾನ್ಯತೆ ಪಡೆದ 242 ಕಾಲೇಜುಗಳು ಮತ್ತು 11 ಸ್ವಾಯತ್ತ ಕಾಲೇಜುಗಳಿವೆ’ ಎಂದು ತಿಳಿಸಿದರು.

‘ಬಾಹ್ಯಾಕಾಶ ವಿಜ್ಞಾನಿ ಡಾ.ಕೆ. ಕಸ್ತೂರಿ ರಂಗನ್‌ ಅವರು ಘಟಿಕೋತ್ಸವ ಭಾಷಣ ಮಾಡಲಿದ್ದಾರೆ. ಗಣ್ಯರು ಮತ್ತು ವಿದ್ಯಾರ್ಥಿಗಳು ಬಿಳಿ ಖಾದಿ ಬಟ್ಟೆ ಧರಿಸಿ ಪಾಲ್ಗೊಳ್ಳಲಿದ್ದಾರೆ’ ಎಂದು ಪ್ರೊ. ಲಿಂಗರಾಜ ಗಾಂಧಿ ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.