
ಪ್ರಾತಿನಿಧಿಕ ಚಿತ್ರ
ಬೆಂಗಳೂರು: ಸಾರ್ವಜನಿಕ ಸ್ಥಳಗಳ ಸ್ವಚ್ಛತೆ ಕುರಿತು ಜಾಗೃತಿ ಮೂಡಿಸಲು ಉತ್ತರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಹಮ್ಮಿಕೊಂಡಿರುವ ‘ಸುಂದರ ನಗರ ಪಾಲಿಕೆಗಾಗಿ ಸಾಮೂಹಿಕ ಮಹಾ ಸ್ವಚ್ಛತಾ ಅಭಿಯಾನ’ ದಲ್ಲಿ 39 ಕೆರೆ–ಕಟ್ಟೆ ಹಾಗೂ ನಾಲಾಗಳ ಬಳಿ ಸ್ವಚ್ಛತೆ ನಡೆಸಿದ್ದು, 20.2 ಟನ್ ತ್ಯಾಜ್ಯ ತೆರವುಗೊಳಿಸಲಾಗಿದೆ.
ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ, ಸ್ವಯಂ ಸೇವಕರು ಹಾಗೂ ನಾಗರಿಕರು ಸೇರಿದಂತೆ 1,476 ಮಂದಿ ಸಹಯೋಗದೊಂದಿಗೆ ತ್ಯಾಜ್ಯ ತೆರವುಗೊಳಿಸಲಾಯಿತು ಎಂದು ಆಯುಕ್ತ ಪೊಮ್ಮಲ ಸುನೀಲ್‌ಕುಮಾರ್ ತಿಳಿಸಿದರು.
ಬ್ಯಾಟರಾಯನಪುರ ವಿಭಾಗದಲ್ಲಿ 3.90 ಟನ್, ದಾಸರಹಳ್ಳಿ ವಿಭಾಗದಲ್ಲಿ 2.5 ಟನ್, ಹೆಬ್ಬಾಳ ವಿಭಾಗದಲ್ಲಿ 4.6 ಟನ್, ಪುಲಿಕೇಶಿನಗರ ವಿಭಾಗದಲ್ಲಿ 2.1 ಟನ್, ಆರ್.ಆರ್. ನಗರ ವಿಭಾಗದಲ್ಲಿ 1.5 ಟನ್, ಯಲಹಂಕ ವಿಭಾಗದಲ್ಲಿ 1.9 ಟನ್, ಸರ್ವಜ್ಞನಗರ ವಿಭಾಗದಲ್ಲಿ 3.7 ಟನ್ ತ್ಯಾಜ್ಯ ತೆರವು ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಮಾಂಸ ಮಾರಾಟ ಮಳಿಗೆ ತಪಾಸಣೆ: ಬೆಂಗಳೂರು ಉತ್ತರ ನಗರ ಪಾಲಿಕೆಯ ಯಲಹಂಕ ಉಪನಗರ ವ್ಯಾಪ್ತಿಯಲ್ಲಿರುವ ಕೋಳಿ ಹಾಗೂ ಮಾಂಸ ಮಾರಾಟ ಮಳಿಗೆಗಳಲ್ಲಿ ಸ್ವಚ್ಛತೆ ಕಾಪಾಡಲು ಸೂಚಿಸಲಾಗಿದೆ.
ತಪಾಸಣೆ ಸಂದರ್ಭದಲ್ಲಿ ಕೋಳಿ ಮತ್ತು ಮಾಂಸ ಮಾರಾಟದ 10 ಮಳಿಗೆಗಳಿಗೆ ಭೇಟಿ ನೀಡಿ, ಉದ್ದಿಮೆ ಪರವಾನಗಿ, ಆರೋಗ್ಯ ಮತ್ತು ಸ್ವಚ್ಛತಾ ಮಾನದಂಡಗಳು, ಶೀತಲೀಕರಣ ವ್ಯವಸ್ಥೆ, ಮಾಂಸದ ಸಂಗ್ರಹಣೆ ಹಾಗೂ ಪ್ರದರ್ಶನ ವಿಧಾನ, ಕಸದ ವಿಲೇವಾರಿ ವ್ಯವಸ್ಥೆ, ಸಿಬ್ಬಂದಿ ಆರೋಗ್ಯ ಮತ್ತು ಸುರಕ್ಷತಾ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಲಾಯಿತು.
ತಪಾಸಣೆಯಲ್ಲಿ ಕೆಲವು ಮಳಿಗೆಗಳಲ್ಲಿ ಪರವಾನಗಿ ನವೀಕರಣ ಮಾಡದಿರುವುದು, ಸ್ವಚ್ಛತಾ ಕೊರತೆ ಮತ್ತು ನಿಯಮಿತ ಆರೋಗ್ಯ ಮಾನದಂಡಗಳನ್ನು ಪಾಲಿಸದಿರುವುದು ಕಂಡುಬಂದಿದೆ. ಅಗತ್ಯ ದಾಖಲೆಗಳನ್ನು ಹೊಂದಿರದ ಹಾಗೂ ನಿಯಮ ಉಲ್ಲಂಘನೆ ಮಾಡಿದ ಮಳಿಗೆಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಆಯುಕ್ತ ಪೊಮ್ಮಲ ಸುನೀಲ್‌ಕುಮಾರ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.