ADVERTISEMENT

ತಾಪಮಾನ ಕುಸಿತ, ಕಳಪೆ ಆಹಾರ–ನೀರು ಸೇವನೆ: ರಸ್ತೆಬದಿಯಲ್ಲೇ ನಲುಗುತ್ತಿವೆ ಜೀವಗಳು..

40 ದಿನಗಳಲ್ಲಿ 15 ಮಂದಿ ನಿರಾಶ್ರಿತರು ಮೃತ

​ಪ್ರಜಾವಾಣಿ ವಾರ್ತೆ
Published 3 ಜನವರಿ 2026, 23:31 IST
Last Updated 3 ಜನವರಿ 2026, 23:31 IST
<div class="paragraphs"><p>ರಸ್ತೆಬದಿಯಲ್ಲಿ ನಿದ್ರೆಗೆ ಜಾರಿರುವ ನಿರಾಶ್ರಿತರು  </p></div>

ರಸ್ತೆಬದಿಯಲ್ಲಿ ನಿದ್ರೆಗೆ ಜಾರಿರುವ ನಿರಾಶ್ರಿತರು

   

ಪ್ರಜಾವಾಣಿ ಚಿತ್ರ/ ವಿ.ಪುಷ್ಕರ್

ಬೆಂಗಳೂರು: ವಿಪರೀತ ಚಳಿ, ದೂಳು, ಪುಂಡರ ಕಾಟ, ಬೀದಿನಾಯಿಗಳ ಹಾವಳಿ... ಇಂತಹ ಸಂಕಷ್ಟಗಳ ನಡುವೆ ನಿರಾಶ್ರಿತರು ನಗರದಲ್ಲಿ ನಲುಗುತ್ತಿದ್ದಾರೆ. ರಸ್ತೆಬದಿಯಲ್ಲಿಯೇ ಅವರ ಜೀವನ ಕಮರುತ್ತಿದೆ. 

ADVERTISEMENT

ಹೊರ ರಾಜ್ಯ, ಹೊರ ಜಿಲ್ಲೆಯಿಂದ ಕೂಲಿ ಅರಸಿ ನಗರಕ್ಕೆ ಬಂದವರು, ಭಿಕ್ಷುಕರು ಆಶ್ರಯ ತಾಣವಿಲ್ಲದೇ ಪಾದಚಾರಿ ಮಾರ್ಗ, ರಸ್ತೆಬದಿ, ಮಳಿಗೆಗಳ ಎದುರು, ಮೇಲ್ಸೇತುವೆ ಕೆಳಗೆ, ಮೆಜೆಸ್ಟಿಕ್‌ನಲ್ಲಿ ರಾತ್ರಿ ವೇಳೆ ನಿದ್ರೆಗೆ ಜಾರುತ್ತಿದ್ದಾರೆ. ಪುಟ್ಟ ಮಕ್ಕಳು, ವಯೋವೃದ್ಧರು ಚಳಿಗೆ ಥರಗುಟ್ಟುತ್ತಿದ್ದಾರೆ.

ಡಿಸೆಂಬರ್‌ನಲ್ಲಿ ತಾಪಮಾನವು ಕನಿಷ್ಠ ಮಟ್ಟಕ್ಕೆ ಕುಸಿದಿತ್ತು. ಅಂತಹ ಸಂದರ್ಭದಲ್ಲಿ ನಿರಾಶ್ರಿತರು ನಲುಗಿ ಹೋಗಿದ್ದರು. ಅಂತವರಿಗೆ ಸ್ವಯಂ ಸೇವಾ ಸಂಸ್ಥೆಗಳು (ಎನ್‌ಜಿಒ) ಬೆಡ್‌ಶೀಟ್ ಹಾಗೂ ಬಟ್ಟೆ ವಿತರಣೆ ಮಾಡಿದ್ದವು. ಆದರೂ, ಅವರ ಕಣ್ಣೀರು ನಿಂತಿಲ್ಲ.

ಪಾದಚಾರಿ ಮಾರ್ಗದಲ್ಲಿ ಮಲಗಿದ್ದವರಿಗೆ ವಾಹನ ಡಿಕ್ಕಿಯಾಗಿ, ಚಳಿ ಸೇರಿದಂತೆ ಬೇರೆ ಬೇರೆ ಕಾರಣಕ್ಕೆ ನಗರದಲ್ಲಿ ಕಳೆದ 40 ದಿನಗಳಲ್ಲಿ 15 ಮಂದಿ ನಿರಾಶ್ರಿತರು ಮೃತಪಟ್ಟಿದ್ದಾರೆ.

ಕೆ.ಆರ್. ಮಾರುಕಟ್ಟೆ, ಮಲ್ಲೇಶ್ವರ, ಮೆಜೆಸ್ಟಿಕ್‌, ರೈಲ್ವೆ ನಿಲ್ದಾಣಗಳ ಸುತ್ತಮುತ್ತ ಇಂತಹ ಕಹಿ ಘಟನೆಗಳು ನಡೆದಿವೆ. ಆಯಾ ಠಾಣಾ ವ್ಯಾಪ್ತಿಯ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ.

‘ಬೆಂಗಳೂರಿಗೆ ಕೆಲಸ ಅರಸಿ ಬರುವ ಕಾರ್ಮಿಕರ ಸಂಖ್ಯೆ ಹೆಚ್ಚಿದೆ. ಈ ವರ್ಷ ಡಿಸೆಂಬರ್‌ನಲ್ಲಿ ಚಳಿ ಹೆಚ್ಚಿತ್ತು. ಡಿ.22ರಿಂದ 25ರ ನಡುವೆ ರಾತ್ರಿ ವೇಳೆ ತಾಪಮಾನ ತೀವ್ರವಾಗಿ ಕುಸಿದಿತ್ತು. ಅದರಲ್ಲೂ ಒಂದು ದಿನ ಕನಿಷ್ಠ ಉಷ್ಣಾಂಶ 13 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದಿತ್ತು. ಬೇಸಿಗೆ ದಿನಗಳಲ್ಲಿ ಉಷ್ಣಾಂಶ ಏರಿಕೆ ಆಗಿದ್ದರೆ ಅಥವಾ ಚಳಿಗಾಲದಲ್ಲಿ ತಾಪಮಾನ ತೀವ್ರ ಕುಸಿದಂತಹ ಸಂದರ್ಭಗಳಲ್ಲಿ ಸಾವು–ನೋವುಗಳು ಸಂಭವಿಸುವ ಸಾಧ್ಯತೆಯಿದೆ. 15 ಮಂದಿ ನಿರಾಶ್ರಿತರ ಸಾವಿಗೆ ಚಳಿಯೇ ಕಾರಣವೆಂದು ನೇರವಾಗಿ ಹೇಳಲು ಸಾಧ್ಯವಿಲ್ಲ. ಅವರ ಆರೋಗ್ಯ ಸಮಸ್ಯೆಯೂ ಕಾರಣವೂ ಇರಬಹುದು’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಹೇಳಿದರು.

ತಾಪಮಾನ ಕುಸಿತ, ಕಲುಷಿತ ಗಾಳಿ, ಕಳಪೆಮಟ್ಟದ ಆಹಾರ ಹಾಗೂ ನೀರು ಸೇವನೆಯಿಂದ ಆರೋಗ್ಯ ಸಮಸ್ಯೆ ಆಗುತ್ತದೆ. ನಿರಾಶ್ರಿತರು ಸಹಜವಾಗಿ ಚಳಿಯ ಸಂದರ್ಭದಲ್ಲೂ ರಸ್ತೆಬದಿಯಲ್ಲಿ ರಾತ್ರಿ ಮಲಗಿದಾಗ ಸಾವು ಸಂಭವಿಸುವಂತಹ ಅಪಾಯ ಇರುತ್ತದೆ ಎಂದು ವೈದ್ಯರೊಬ್ಬರು ಹೇಳುತ್ತಾರೆ.

ಈ ರೀತಿಯ ಸನ್ನಿವೇಶ ಕಂಡು ಬೆಂಗಳೂರು ಪೊಲೀಸರು ಸಹ ನಿರಾಶ್ರಿತರಿಗೆ ನೆರವು ನೀಡಿದ್ದರು. ಅಲ್ಲದೇ ಕೆಲವು ಎನ್‌ಜಿಒಗಳು ಮೂಲಕವು ಬೆಡ್‌ಶೀಟ್ ಹಾಗೂ ಬೆಚ್ಚನೆಯ ಉಡುಗೆಗಳನ್ನು ವಿತರಣೆ ಮಾಡುವಂತೆಯೂ ಮನವಿ ಮಾಡಿದ್ದರು.

ನಿರಾಶ್ರಿತರಿಗೆ ರಾತ್ರಿ ವೇಳೆ ವಾಸ್ತವ್ಯಕ್ಕೆ ಜಿಬಿಎ 74 ನಿರಾಶ್ರಿತರ ಕೇಂದ್ರಗಳನ್ನು ಮಂಜೂರು ಮಾಡಿತ್ತು. ಆದರೆ, 48 ಅಷ್ಟೇ ನಿರ್ಮಾಣಗೊಂಡು ಕಾರ್ಯಾಚರಣೆ ನಡೆಸುತ್ತಿವೆ. ಅದರಲ್ಲೂ ಕೆಲವು ನಿರಾಶ್ರಿತರ ಕೇಂದ್ರಗಳಲ್ಲಿ ಸೌಲಭ್ಯಗಳೇ ಇಲ್ಲವಾಗಿದೆ. ನಿರಾಶ್ರಿತರ ಕೇಂದ್ರಗಳಲ್ಲಿ 2022ರಲ್ಲಿದ್ದ ಪರಿಸ್ಥಿತಿಯೇ ಈಗಲೂ ಇದೆ ಎಂದು ಆರೋಪವಿದೆ. ನಗರದಲ್ಲಿ ನಿರಾಶ್ರಿತರ ಸಂಖ್ಯೆ ಹೆಚ್ಚಿದೆ. ಕನಿಷ್ಠ 120 ಆಶ್ರಯ ತಾಣಗಳು ಬೇಕಿವೆ ಎಂದು ಅಂದಾಜಿಸಲಾಗಿದೆ.  

ಬಹುತೇಕ ನಿರಾಶ್ರಿತರ ಕೇಂದ್ರಗಳು ರಾತ್ರಿ ವೇಳೆ ಭರ್ತಿಯೇ ಆಗಿರುವುದಿಲ್ಲ. ಆದರೂ, ನಿರಾಶ್ರಿತರು ರಸ್ತೆಬದಿಯಲ್ಲೇ ಮಲಗುತ್ತಿದ್ದಾರೆ. ಇದಕ್ಕೆ ಕಾರಣ ಹುಡುಕುತ್ತಾ ಸಾಗಿದಾಗ, ‘ಕೆಲವು ಕೇಂದ್ರಗಳಲ್ಲಿ ಒಂದು ಹೊತ್ತು ಮಾತ್ರ ಊಟ ಸಿಗುತ್ತದೆ. ಭಿಕ್ಷೆ ಬೇಡುವುದಕ್ಕೂ ಬಿಡುವುದಿಲ್ಲ. ಅದೇ ರಸ್ತೆಯ ಬದಿಯಲ್ಲಿ ಮಲಗಿದರೆ ಎನ್‌ಜಿಗಳು ಊಟ, ಬಟ್ಟೆ ನೀಡುತ್ತಾರೆ’ ಎಂದು ಕೆಲವು ನಿರಾಶ್ರಿತರು ಹೇಳಿದರು.

ಅನುದಾನದ ಕೊರತೆ
ಕೇಂದ್ರ ಪುರಸ್ಕೃತ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ (ಡೇ–ನಲ್ಮ್‌) ಅಡಿ ಸ್ಥಳೀಯ ಸಂಸ್ಥೆಗಳು ನಿರಾಶ್ರಿತರ ನೋಂದಣಿ ಮಾಡಿಕೊಂಡು ಅವರಿಗೆ ಆಶ್ರಯ ಕಲ್ಪಿಸಬೇಕು. ನಿರಾಶ್ರಿತರ ಕೇಂದ್ರಗಳನ್ನು ನಡೆಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳಿಗೆ ಸ್ಥಳೀಯ ಸಂಸ್ಥೆಗಳಿಂದ ಪ್ರೋತ್ಸಾಹ ಹಾಗೂ ಅನುದಾನ ಹಂಚಿಕೆ ಕಡಿಮೆಯಾಗಿದೆ. ನಿರಾಶ್ರಿತರ ನೋಂದಣಿ ಸಹ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಆದರೆ ಅನುದಾನ ಹಂಚಿಕೆ ಕಡಿಮೆ ಇರುವ ಕಾರಣಕ್ಕೆ ನಿರಾಶ್ರಿತರು ರಸ್ತೆಬದಿಯಲ್ಲೇ ಆಶ್ರಯ ಪಡೆದುಕೊಳ್ಳುವ ಸ್ಥಿತಿಯಿದೆ ಎಂದು ಎನ್‌ಜಿಒ ಪ್ರತಿನಿಧಿಯೊಬ್ಬರು ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.