ಬೆಂಗಳೂರು: ಐಷಾರಾಮಿ ಜೀವನಕ್ಕಾಗಿ ಬೀಗ ಹಾಕಿದ ಮನೆಗಳಲ್ಲಿ ಕಳ್ಳತನ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಗೋವಿಂದರಾಜನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮೈಸೂರಿನ ಎಚ್.ಡಿ.ಕೋಟೆ ನಿವಾಸಿ ಮಹಮ್ಮದ್ ಫಯಾಜ್(59), ಮಹಮ್ಮದ್ ಫರಾಜ್(35), ಚಿಕ್ಕಮಗಳೂರಿನ ಭೂದೇಶ್(52), ಆರ್.ಟಿ.ನಗರ ನಿವಾಸಿ ಪ್ರಸಾದ್(49) ಬಂಧಿತರು. ಆರೋಪಿಗಳಿಂದ ₹44.24 ಲಕ್ಷ ಮೌಲ್ಯದ 475 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ.
ಆರೋಪಿಗಳ ಪೈಕಿ ಮಹಮ್ಮದ್ ಫಯಾಜ್ ವಿರುದ್ಧ 25 ಪ್ರಕರಣಗಳು, ಫರಾಜ್ ವಿರುದ್ಧ 35 ಪ್ರಕರಣ, ಭೂದೇಶ್ ವಿರುದ್ಧ ಐದು ಪ್ರಕರಣ, ಪ್ರಸಾದ್ ವಿರುದ್ಧ 18 ಪ್ರಕರಣಗಳು ದಾಖಲಾಗಿವೆ.
ಆರೋಪಿಗಳು ಇತ್ತೀಚೆಗೆ ಠಾಣೆ ವ್ಯಾಪ್ತಿಯ ಮೂಡಲಪಾಳ್ಯ ನಿವಾಸಿ ಬಸವರಾಜು ಎಂಬುವವರ ಮನೆಯ ಬೀಗ ಒಡೆದ ಕಳ್ಳತನ ಮಾಡಿ ಪರಾರಿಯಾಗಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ.
ಬಂಧಿತರು ಕೆಲವು ವರ್ಷಗಳಿಂದ ಮನೆ ಕಳ್ಳತನ, ಬ್ಯಾಂಕ್, ಜ್ಯುವೆಲ್ಲರಿ ಶಾಪ್ ದರೋಡೆ ಮಾಡುತ್ತಿದ್ದರು. ಬೀದರ್, ಹುಬ್ಬಳ್ಳಿ, ಚಿತ್ರದುರ್ಗ, ಬೆಂಗಳೂರು, ಹಾಸನ, ಮಂಡ್ಯ ಸೇರಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬ್ಯಾಂಕ್ ಹಾಗೂ ಜ್ಯುವೆಲ್ಲರಿ ಶಾಪ್‌ಗಳಲ್ಲಿ, ಮನೆಕಳ್ಳತನ ಮಾಡಿದ್ದರು ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.