ADVERTISEMENT

ಮಾರಕಾಸ್ತ್ರ: ಆರೋಪಿಗಳ ಹೆಸರು ರೌಡಿಪಟ್ಟಿಗೆ

ಪಟಾಕಿ ಕಿಡಿ ತಾಗಿದ ವಿಚಾರಕ್ಕೆ ಗಲಾಟೆ: ಆರೋಪಿಗಳ ತಪ್ಪೊಪ್ಪಿಗೆ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2025, 14:12 IST
Last Updated 21 ಅಕ್ಟೋಬರ್ 2025, 14:12 IST
ಪೊಲೀಸರು ಆರೋಪಿಗಳಿಂದ ಜಪ್ತಿ ಮಾಡಿರುವ ಉಪಕರಣ, ಮಾರಕಾಸ್ತ್ರ ಹಾಗೂ ಮೊಬೈಲ್‌ಗಳು
ಪೊಲೀಸರು ಆರೋಪಿಗಳಿಂದ ಜಪ್ತಿ ಮಾಡಿರುವ ಉಪಕರಣ, ಮಾರಕಾಸ್ತ್ರ ಹಾಗೂ ಮೊಬೈಲ್‌ಗಳು   

ಬೆಂಗಳೂರು: ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯ ದೊಡ್ಡರಾಮಣ್ಣ ಮತ್ತು ಚಿಕ್ಕಣ್ಣ ಬಡಾವಣೆ ಮುಖ್ಯರಸ್ತೆಯಲ್ಲಿ ಭಾನುವಾರ ರಾತ್ರಿ ಮಾರಕಾಸ್ತ್ರಗಳನ್ನು ಬೀಸಿ, ಇಬ್ಬರ ಮೇಲೆ ಹಲ್ಲೆ ನಡೆಸಿ ಪುಂಡಾಟ ತೋರಿದ್ದ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ಐದಕ್ಕೆ ಏರಿದೆ. 

ಅಮೀನ್‌ ಷರೀಫ್‌ (24), ಸೈಯದ್ ಅರ್ಬಾಜ್‌ (20), ಸೈಯದ್ ಖಾದರ್‌ (21) ಜತೆಗೆ ಕಾನೂನು ಸಂಘರ್ಷಕ್ಕೆ ಒಳಗಾದ ಇಬ್ಬರು ಬಾಲಕರನ್ನೂ ಹೆಣ್ಣೂರು ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕರನ್ನು ಬಾಲಮಂದಿರಕ್ಕೆ ಕಳುಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

‘ಪಟಾಕಿ ಕಿಡಿ ತಾಗಿದ್ದಕ್ಕೆ ಮಾತಿಗೆ ಮಾತು ಬೆಳೆದು ಗಲಾಟೆ ಆಗಿತ್ತು. ಆ ಸಂದರ್ಭದಲ್ಲಿ ಇಬ್ಬರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದೆವು ಎಂಬುದಾಗಿ ಆರೋಪಿಗಳು ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾರೆ’ ಎಂದು ಪೊಲೀಸರು ಹೇಳಿದರು.

ADVERTISEMENT

‘ಆ.19ರಂದು ಬೆಳಿಗ್ಗೆ ಕಿರಣ್ ಅವರು ಮನೆ ಎದುರು ಪಟಾಕಿ ಹೊಡೆಯುವಾಗ ಬೈಕ್​ನಲ್ಲಿ ಬರುತ್ತಿದ್ದ ಆರೋಪಿ ಒಬ್ಬನಿಗೆ ಪಟಾಕಿ ಕಿಡಿ ತಾಗಿತ್ತು. ಇದರಿಂದ ಅಸಮಾಧಾನಗೊಂಡಿದ್ದ ಆರೋಪಿಯೊಬ್ಬ ಕಿರಣ್​ ಅವರೊಂದಿಗೆ ವಾಗ್ವಾದ ನಡೆಸಿದ್ದರು. ಬಳಿಕ, ರಾತ್ರಿ 9 ಗಂಟೆ ಸುಮಾರಿಗೆ ಮಾರಕಾಸ್ತ್ರಗಳ ಸಮೇತ ಹುಡುಗರನ್ನು ಕರೆಯಿಸಿಕೊಂಡಿದ್ದರು. ನಂತರ, ಆ ಹುಡುಗರು ಕಿರಣ್ ಮೇಲೆ ಲಾಂಗ್​​ನಿಂದ ಹಲ್ಲೆ ನಡೆಸಿದ್ದರು. ಇದನ್ನು ತಡೆಯಲು ಬಂದಿದ್ದ ಸ್ನೇಹಿತ ಭರತ್ ಮೇಲೆಯೂ ಆರೋಪಿಗಳು ಹಲ್ಲೆ ನಡೆಸಿದ್ದರು’ ಎಂದು ಪೊಲೀಸರು ಹೇಳಿದರು.

‘ಆರೋಪಿಗಳ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ನ್ಯಾಯಾಲಯಕ್ಕೆ ಹಾಜರುಪಡಿಸಿ ಮೂವರು ಆರೋಪಿಗಳನ್ನು ಪೊಲೀಸ್‌ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಆರೋಪಿಗಳಿಗೆ ಮಾರಕಾಸ್ತ್ರಗಳು ಎಲ್ಲಿ ಸಿಕ್ಕಿದವು ಎಂಬುದನ್ನು ಪತ್ತೆ ಮಾಡಲಾಗುತ್ತಿದೆ’ ಎಂದು ಪೊಲೀಸರು ಹೇಳಿದರು.

ಆರೋಪಿಗಳು ರೌಡಿಪಟ್ಟಿಗೆ: ಆರೋಪಿಗಳು ರಸ್ತೆಯಲ್ಲಿ ಮಾರಕಾಸ್ತ್ರ ಬೀಸಿ ಭಯದ ವಾತಾವರಣ ಸೃಷ್ಟಿಸಿದ್ದರು. ಅಲ್ಲದೇ ಸಮಾಜದ ಸ್ವಾಸ್ಥ್ಯ ಹಾಳು ಮಾಡಿದ್ದಾರೆ. ಬಂಧಿತರ ಪೈಕಿ ಅಮೀನ್‌ ಷರೀಫ್‌, ಸೈಯದ್ ಅರ್ಬಾಜ್‌, ಸೈಯದ್ ಖಾದರ್‌ ಅವರನ್ನು ರೌಡಿಪಟ್ಟಿಗೆ ಸೇರಿಸಲಾಗುವುದು ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.