ಬೆಂಗಳೂರು: ಹಳೇ ದ್ವೇಷದ ಕಾರಣಕ್ಕೆ ರೌಡಿಶೀಟರ್‌ನನ್ನು ಗುರುವಾರ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದ್ದು, ಈ ಸಂಬಂಧ ಶೇಷಾದ್ರಿಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಜಿತ್‌ಕುಮಾರ್ (25) ಕೊಲೆಯಾದವರು.
ಠಾಣಾ ವ್ಯಾಪ್ತಿಯ ರಿಸಲ್ದಾರ್ ಸ್ಟ್ರೀಟ್‍ನಲ್ಲಿ ಗುರುವಾರ ಸಂಜೆ 4.30ರ ಸುಮಾರಿಗೆ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ. ರಾಮಮೂರ್ತಿ ನಗರದ ಬ್ಲಡ್ ಬ್ಯಾಂಕ್‌ನಲ್ಲಿ ಅಜಿತ್ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದರು.
ಮೂವರಿಂದ ಕೃತ್ಯ ಶಂಕೆ: ಅಜಿತ್ ವಿರುದ್ಧ ಕೊಲೆ ಹಾಗೂ ಕೊಲೆ ಯತ್ನ ಪ್ರಕರಣಗಳು ದಾಖಲಾಗಿದ್ದವು. ಕೊಲೆ ಪ್ರಕರಣದಲ್ಲಿ ಅಜಿತ್ ಜೈಲಿಗೆ ಹೋಗಿದ್ದರು. ಜಾಮೀನ ಮೇಲೆ ಬಿಡುಗಡೆಯಾಗಿದ್ದರು. ಗುರುವಾರ ಮನೆಯಲ್ಲೇ ಇದ್ದ ಅಜಿತ್, ಊಟ ಮುಗಿಸಿ ಸಂಜೆ ಮನೆಯಿಂದ ಹೊರಬಂದು, ರಿಸಲ್ದಾರ್ ಸ್ಟ್ರೀಟ್‌ನಲ್ಲಿ ನಡೆದು ತೆರಳುತ್ತಿದ್ದರು. ಬೈಕ್‌ನಲ್ಲಿ ಬಂದ ಮೂವರು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ ಎಂದು ಮೂಲಗಳು ಹೇಳಿವೆ.
ಕೃತ್ಯ ನಡೆದ ಸ್ಥಳದ ಆಸುಪಾಸಿನ ಸಿಸಿ ಟಿ.ವಿ ದೃಶ್ಯಾವಳಿ ಪರಿಶೀಲಿಸಲಾಗಿದೆ. ಆರೋಪಿಗಳ ಸುಳಿವು ಸಿಕ್ಕಿದ್ದು, ಬಂಧನಕ್ಕೆ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.
ಇನ್ನು ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೋಷಕರು, ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.
‘2022ರಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಅಜಿತ್ ಜೈಲಿಗೆ ಹೋಗಿದ್ದರು. ಹಳೇ ದ್ವೇಷದಿಂದಲೇ ಕೃತ್ಯ ಎಸಗಲಾಗಿದೆ ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ’ ಎಂದು ಪೊಲೀಸರು ಹೇಳಿದರು.
ಸ್ಥಳಕ್ಕೆ ಕೇಂದ್ರ ವಿಭಾಗದ ಡಿಸಿಪಿ ಶೇಖರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ನೀಡಲಾಗಿದೆ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.