ADVERTISEMENT

Gift Card,ಶುಲ್ಕ ಮನ್ನಾ ಹೆಸರಲ್ಲಿ ವಂಚನೆ: Cyber ವಂಚಕರ ಸುಳಿವು ಪತ್ತೆಯೇ ಸವಾಲು

ಆದಿತ್ಯ ಕೆ.ಎ
Published 14 ಆಗಸ್ಟ್ 2025, 23:30 IST
Last Updated 14 ಆಗಸ್ಟ್ 2025, 23:30 IST
....
....   

ಬೆಂಗಳೂರು: ಗಿಫ್ಟ್‌ ಕಾರ್ಡ್‌ ಕಳುಹಿಸುವ, ಬ್ಯಾಂಕ್‌ ವಾರ್ಷಿಕ ಶುಲ್ಕ ಮನ್ನಾ ಮಾಡುವ ಹಾಗೂ ಹೂಡಿಕೆಯ ಹೆಸರಿನಲ್ಲಿ ವಂಚನೆ ಪ್ರಕರಣಗಳು ರಾಜಧಾನಿ ಬೆಂಗಳೂರಿನಲ್ಲಿ ಹೆಚ್ಚುತ್ತಿವೆ. ಕಳೆದ 15 ದಿನಗಳಲ್ಲಿ ವೈಟ್‌ಫೀಲ್ಡ್‌ ಸೈಬರ್‌ ಅಪರಾಧ ಠಾಣಾ ವ್ಯಾಪ್ತಿಯಲ್ಲಿ ಈ ರೀತಿಯ ಹಲವು ಪ್ರಕರಣಗಳು ನಡೆದಿವೆ.

ಖಾಸಗಿ ಕಂಪನಿ ಉದ್ಯೋಗಿ, ಸಾಫ್ಟ್‌ವೇರ್ ಎಂಜಿನಿಯರ್ ಹಾಗೂ ಉದ್ಯಮಿ ವಂಚಕರ ಬಲೆಗೆ ಬಿದ್ದು ₹24 ಲಕ್ಷ ಕಳೆದುಕೊಂಡಿದ್ದಾರೆ. ಮಾಹಿತಿ ತಂತ್ರಜ್ಞಾನ ಕಾಯ್ದೆ–2000ರ ಯು/ಎಸ್‌–66(ಸಿ), 66(ಡಿ) ಹಾಗೂ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್‌) 2023ರ ಯು/ಎಸ್‌ 318(4), 319(2) ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಸೈಬರ್‌ ಅಪರಾಧ ಪೊಲೀಸರು ತಿಳಿಸಿದರು.

‘ರೈನ್‌ಬೊ ಲೇಔಟ್‌ನ ನಿವಾಸಿ, ದೂರುದಾರ ಜಿ.ಸುರೇಶ್ ಕುಮಾರ್ ಅವರು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ಪೂರ್ವಾಪರವನ್ನು ಸೈಬರ್‌ ವಂಚಕ ಪತ್ತೆಹಚ್ಚಿದ್ದ. ಸುರೇಶ್ ಕುಮಾರ್‌ ಅವರಿಗೆ ಕರೆ ಮಾಡಿ, ‘ತಾವು ಕೆಲಸ ಮಾಡುತ್ತಿರುವ ಕಂಪನಿಯ ವ್ಯವಸ್ಥಾಪಕ’ ಎಂಬುದಾಗಿ ವಂಚಕ ಪರಿಚಯಿಸಿಕೊಂಡಿದ್ದ. ಗಿಫ್ಟ್ ಕಾರ್ಡ್‌ ಕಳುಹಿಸುತ್ತಿರುವುದಾಗಿ ನಂಬಿಸಿದ್ದ. ಅದಕ್ಕೆ ಹಣ ಪಾವತಿ ಮಾಡುವಂತೆಯೂ ತಿಳಿಸಿದ್ದ. ವಂಚಕನ ಮಾತು ನಂಬಿದ್ದ ದೂರುದಾರ, ಹಂತಹಂತವಾಗಿ ಸೈಬರ್ ವಂಚಕ ಸೂಚಿಸಿದ್ದ ಖಾತೆಗೆ ₹10 ಲಕ್ಷ ವರ್ಗಾವಣೆ ಮಾಡಿದ್ದರು’ ಎಂದು ಮೂಲಗಳು ತಿಳಿಸಿವೆ.

ADVERTISEMENT

‘ಅದಾದ ಸ್ವಲ್ಪ ದಿನ ಕಳೆದ ಮೇಲೆ ಕಂಪನಿಯ ವ್ಯವಸ್ಥಾಪಕರಿಗೆ ಕರೆ ಮಾಡಿದ್ದ ದೂರುದಾರ, ಗಿಫ್ಟ್‌ ಕಾರ್ಡ್ ಖರೀದಿ ಸಂಬಂಧ ವಿಚಾರಿಸಿದ್ದರು. ಅವರು ಯಾವುದೇ ಗಿಫ್ಟ್‌ ಕಾರ್ಡ್‌ಗಳನ್ನು ಖರೀದಿಸಲು ತಿಳಿಸಿರುವುದಿಲ್ಲವೆಂದು ಹೇಳಿದ್ದರು. ಆಗ ಸುರೇಶ್‌ ಅವರಿಗೆ ಸೈಬರ್‌ ವಂಚನೆಗೆ ಒಳಗಾಗಿರುವುದು ಗೊತ್ತಾಗಿತ್ತು’ ಎಂದು ಸೈಬರ್‌ ಪೊಲೀಸರು ಹೇಳಿದರು.


ಟೆಕಿಗೆ ₹7.35 ಲಕ್ಷ ವಂಚನೆ:

ಕೆ.ಆರ್‌. ಪುರದ ಮುನೇಶ್ವರ ಬಡಾವಣೆಯಲ್ಲಿ ನೆಲಸಿರುವ ಸಾಫ್ಟ್‌ವೇರ್‌ ಎಂಜಿನಿಯರ್‌ ಈಶ್ವರ್‌ ರೆಡ್ಡಿ ಅವರಿಂದ ಸೈಬರ್‌ ವಂಚಕರು, ₹7.39 ಲಕ್ಷ ದೋಚಿದ್ದಾರೆ.

ಟೆಕಿ ಈಶ್ವರ್ ರೆಡ್ಡಿ ಅವರನ್ನು ಸೈಬರ್‌ ವಂಚಕರು ‘2025–ಯುಟಿಐ ಇನ್ವೆಸ್ಟ್‌ಮೆಂಟ್‌ ಫ್ರಂಟ್‌ ಆ್ಯಂಡ್‌ ಯುಟಿಐ ವಿಐಪಿ 1ಆನ್‌1 202’ ಎಂಬ ವಾಟ್ಸ್‌ಆ್ಯಪ್‌ ಗ್ರೂಪ್‌ಗೆ ಸೇರಿಸಿದ್ದರು. ಕೆಲವು ದಿನಗಳ ನಂತರ ಸಾನ್ಯಾ ಕಪೂರ್‌ ಹಾಗೂ ಇಮ್ತಿಯಾಜ್‌ ರೆಹಮಾನ್‌ ಎಂಬ ಹೆಸರಿನಲ್ಲಿ ಇಬ್ಬರು ಕರೆ ಮಾಡಿದ್ದರು. ಆ್ಯಪ್‌ವೊಂದನ್ನು ಡೌನ್‌ಲೋಡ್‌ ಮಾಡಿಕೊಂಡು ಅಲ್ಲಿ ನೋಂದಣಿ ಮಾಡಿಕೊಳ್ಳುವಂತೆ ಕೋರಿದ್ದರು. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ, ಹೆಚ್ಚಿನ ಲಾಭ ಬರಲಿದೆ ಎಂಬುದಾಗಿಯೂ ನಂಬಿಸಿದ್ದರು. ಆರಂಭದಲ್ಲಿ ದೂರುದಾರರು, ₹30 ಸಾವಿರ ಹೂಡಿಕೆ ಮಾಡಿದ್ದರು. ನಂತರ, ವಿವಿಧ ಬ್ಯಾಂಕ್‌ನ ಆರು ಖಾತೆಗಳಿಂದ ₹7.50 ಲಕ್ಷ ಹೂಡಿಕೆ ಮಾಡಿದ್ದರು. ಅದಕ್ಕೆ ಪ್ರತಿಯಾಗಿ ಸೈಬರ್ ವಂಚಕರು, ₹11 ಸಾವಿರ ಲಾಭಾಂಶ ಪಾವತಿಸಿದ್ದರು’ ಎಂದು ಪೊಲೀಸ್ ಆಧಿಕಾರಿಯೊಬ್ಬರು ತಿಳಿಸಿದ್ದಾರೆ. ಮತ್ತಷ್ಟು ಹಣ ಹೂಡಿಕೆಗೆ ಒತ್ತಾಯ: ‘ಟೆಕಿಗೆ ಮತ್ತೆ ಕರೆ ಮಾಡಿದ್ದ ವಂಚಕರು, ಮತ್ತಷ್ಟು ಹಣ ಹೂಡಿಕೆ ಮಾಡಿದರೆ ಇನ್ನೂ ಹೆಚ್ಚಿನ ಲಾಭಾಂಶ ಬರಲಿದೆ ಎಂಬುದಾಗಿ ನಂಬಿಸಿದ್ದರು. ಬಳಿಕ ಈಶ್ವರ ರೆಡ್ಡಿ ಅವರಿಗೆ ವಂಚನೆಗೆ ಒಳಗಾಗಿರುವುದು ಗೊತ್ತಾಗಿತ್ತು’ ಎಂದು ಮೂಲಗಳು ತಿಳಿಸಿವೆ.

ವೈಟ್‌ಫೀಲ್ಡ್‌ ವ್ಯಾಪ್ತಿಯಲ್ಲಿ ಹೆಚ್ಚಿನ ಪ್ರಕರಣ 
‘ಸೈಬರ್‌ ವಂಚನೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರಲ್ಲಿ ಪೊಲೀಸರು ಜಾಗೃತಿ ಮೂಡಿಸುತ್ತಿದ್ದಾರೆ. ಆದರೂ ವಂಚಕರ ಆಮಿಷಕ್ಕೆ ಒಳಗಾಗಿ ಜನರು ಲಕ್ಷಾಂತರ ರೂಪಾಯಿ ಕಳೆದುಕೊಳ್ಳುತ್ತಿದ್ದಾರೆ. ಈ ಸಂಬಂಧ ವೈಟ್‌ಫೀಲ್ಡ್‌ ವಿಭಾಗದ ವಿವಿಧ ಠಾಣೆಗಳಲ್ಲಿ ಹೆಚ್ಚಿನ ಪ್ರಕರಣಗಳು ದಾಖಲಾಗುತ್ತಿವೆ’ ಎಂದು ಮೂಲಗಳು ತಿಳಿಸಿವೆ.
ಜನ್ಮ ದಿನಾಂಕದ ಮಾಹಿತಿ ಪಡೆದು ಮೋಸ
ಮತ್ತೊಂದು ಪ್ರಕರಣದಲ್ಲಿ 41 ವರ್ಷದ ವಿಕಾಸ್‌ಕುಮಾರ್ ಅವರಿಗೆ ಕರೆ ಮಾಡಿದ್ದ ವಂಚಕರು ಜನ್ಮದಿನಾಂಕದ ಮಾಹಿತಿ ಪಡೆದು ಕ್ರೆಡಿಟ್‌ ಕಾರ್ಡ್‌ನಿಂದ ₹5.94 ಲಕ್ಷ ಡ್ರಾ ಮಾಡಿಕೊಂಡು ಮೋಸ ಮಾಡಿದ್ದಾರೆ. ‘ದೂರುದಾರರು ಹೊಂದಿದ್ದ ಬ್ಯಾಂಕ್‌ ಖಾತೆಯ ವಾರ್ಷಿಕ ಶುಲ್ಕವಾದ ₹2900 ಅನ್ನು ಮನ್ನಾ ಮಾಡಲಾಗಿದೆ ಎಂದು ವಾಟ್ಸ್‌ಆ್ಯಪ್‌ ಸಂದೇಶ ಬಂದಿತ್ತು. ಎಪಿಕೆ ಫೈಲ್‌ ಅನ್ನು ವಾಟ್ಸ್‌ಆ್ಯಪ್‌ಗೆ ಕಳುಹಿಸಿದ್ದ ಆರೋಪಿ ಅಪ್ಲಿಕೇಶನ್‌ ಡೌನ್‌ಲೋಡ್‌ ಮಾಡಿಕೊಂಡು ಶುಲ್ಕ ಮನ್ನಾದ ವಿವರಗಳನ್ನು ಪರಿಶೀಲನೆ ಮಾಡುವಂತೆ ಸೂಚಿಸಿದ್ದ. ಅಲ್ಲದೇ ಜನ್ಮದಿನಾಂಕದ ಮಾಹಿತಿಯನ್ನೂ ಪಡೆದುಕೊಂಡಿದ್ದ. ಕೆಲವೇ ಕ್ಷಣಗಳಲ್ಲಿ ದೂರುದಾರರ ಮೂರು ಬ್ಯಾಂಕ್‌ಗಳ ಕ್ರೆಡಿಟ್‌ ಕಾರ್ಡ್‌ಗಳಿಂದ ₹5.94 ಲಕ್ಷ ಮಾಯ ಆಗಿತ್ತು’ ಎಂದು ಸೈಬರ್ ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.