gಬೆಂಗಳೂರು: ಮಹಾರಾಷ್ಟ್ರದ ಜತೆಗೆ ನಂಟು ಹೊಂದಿರುವ ನಗರದ ಟೆಕಿಗಳು, ಮಹಿಳಾ ಉದ್ಯಮಿಗಳು, ಕಂಪನಿಗಳ ವ್ಯವಸ್ಥಾಪಕರನ್ನೇ ಗುರಿಯಾಗಿಸಿ ಮುಂಬೈ ಪೊಲೀಸರ ಸೋಗಿನಲ್ಲಿ ವಂಚಿಸುತ್ತಿರುವ ಪ್ರಕರಣಗಳು ಬೆಂಗಳೂರಿನ ವಿವಿಧ ಭಾಗಗಳಲ್ಲಿ ಹೆಚ್ಚು ವರದಿಯಾಗುತ್ತಿವೆ. ಹಣ ಕಳೆದುಕೊಂಡವರು ಸೈಬರ್ ಅಪರಾಧ ಠಾಣೆಯ ಮೆಟ್ಟಿಲೇರುತ್ತಿದ್ದಾರೆ.
ವಂಚನೆಗೆ ಒಳಗಾದವರು ಗೋಲ್ಡನ್ ಅವರ್‌ನಲ್ಲಿ (ಒಂದು ಗಂಟೆಯ ಒಳಗೆ) ‘ರಾಷ್ಟ್ರೀಯ ಸೈಬರ್ ಕ್ರೈಮ್ ಸಹಾಯವಾಣಿ’ಯಲ್ಲಿ ದೂರು ದಾಖಲಿಸದಿರುವ ಕಾರಣಕ್ಕೆ ಹಣ ವಾಪಸ್ ಬರುತ್ತಿಲ್ಲ. ಯಾವ ಖಾತೆಗೆ ಹಣ ವರ್ಗಾವಣೆ ಆಗಿದೆ ಎಂಬುದನ್ನು ಪತ್ತೆ ಹಚ್ಚುವುದಕ್ಕೂ ಸೈಬರ್ ಪೊಲೀಸರಿಗೆ ಸಾಧ್ಯ ಆಗುತ್ತಿಲ್ಲ.
ಪ್ರವಾಸ, ವ್ಯಾಪಾರಕ್ಕೆಂದು ಮುಂಬೈಗೆ ಹೋಗಿದ್ದ ನಗರದ ನಿವಾಸಿಗಳು, ತಮ್ಮ ಮೊಬೈಲ್ ಸಂಖ್ಯೆಯನ್ನು ವಸತಿಗೃಹ, ಹೋಟೆಲ್, ಪ್ರವಾಸಿ ತಾಣದಲ್ಲಿ ನಮೂದಿಸಿರುತ್ತಾರೆ. ಕ್ಯಾಬ್ ಚಾಲಕರಿಗೂ ನೀಡಿ ಬಂದಿರುತ್ತಾರೆ. ಅಲ್ಲದೇ ಡಿಜಿಟಲ್ ವೇದಿಕೆಯ ಮೂಲಕವೂ ವ್ಯವಹಾರ ನಡೆಸಿರುತ್ತಾರೆ. ಅಂತಹವರ ಮೊಬೈಲ್ ಸಂಖ್ಯೆ ಪಡೆದುಕೊಳ್ಳುವ ಸೈಬರ್ ವಂಚಕರು, ಉದ್ಯಮಿಗಳು ಹಾಗೂ ಟೆಕಿಗಳಿಂದ ಕೋಟ್ಯಂತರ ರೂಪಾಯಿ ದೋಚುತ್ತಿದ್ದಾರೆ. ಮುಂಬೈ ಹೆಸರು ಪ್ರಸ್ತಾಪಿಸಿಯೇ ಹೆಚ್ಚಿನ ವಂಚಕರು ಹಣ ಸುಲಿಗೆ ಮಾಡುತ್ತಿದ್ದಾರೆ. ಇದೇ ರೀತಿ ವಂಚಕರ ಬಲೆಗೆ ಬಿದ್ದು ನಗರದ 33 ವರ್ಷದ ಮಹಿಳೆಯೊಬ್ಬರು ಹಣ ಕಳೆದುಕೊಂಡಿದ್ದಾರೆ.
ಮಾರತ್‌ಹಳ್ಳಿಯ ನಿವಾಸಿ ಶ್ರೇಯಾ ಅವರನ್ನು ಸೈಬರ್ ವಂಚಕರು ಬೆದರಿಸಿ ₹3.62 ಕೋಟಿ ಸುಲಿಗೆ ಮಾಡಿದ್ದಾರೆ. ಶ್ರೇಯಾ ಅವರಿಗೆ ಆಗಸ್ಟ್‌ನಲ್ಲಿ ಕರೆ ಮಾಡಿದ್ದ ವಂಚಕರು, ನಿರಂತರವಾಗಿ ಬೆದರಿಸಿ ಸುಲಿಗೆ ಮಾಡಿದ್ದಾರೆ. ಕೊನೆಯ ಹಂತದಲ್ಲಿ, ತಾವು ವಂಚನೆಗೆ ಒಳಗಾಗಿರುವುದು ಶ್ರೇಯಾ ಅವರಿಗೆ ಗೊತ್ತಾಗಿದ್ದು, ಅಕ್ಟೋಬರ್ 3ರಂದು ವೈಟ್‌ಫೀಲ್ಡ್ ಸೈಬರ್ ಅಪರಾಧ ಠಾಣೆಗೆ ಅವರು ದೂರು ನೀಡಿದ್ದಾರೆ. ಮಾಹಿತಿ ತಂತ್ರಜ್ಞಾನ ಕಾಯ್ದೆ ಹಾಗೂ ಬಿಎನ್‌ಎಸ್‌ನ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ಶ್ರೇಯಾ ಅವರಿಗೆ ಅಪರಿಚಿತ ಮೊಬೈಲ್ ಸಂಖ್ಯೆಯಿಂದ ಕರೆಯೊಂದು ಬಂದಿತ್ತು. ಕರೆ ಮಾಡಿದ್ದ ವ್ಯಕ್ತಿ, ತಾನು ಮುಂಬೈ ಪೊಲೀಸ್ ವಿಶಾಲ್ ಎಂಬುದಾಗಿ ಪರಿಚಯಿಸಿಕೊಂಡಿದ್ದ. ತಮ್ಮ ದಾಖಲೆಗಳು ಹಾಗೂ ಹೆಸರು ಬಳಸಿಕೊಂಡು ಅಕ್ರಮವಾಗಿ ಹಣ ವರ್ಗಾವಣೆ ಆಗುತ್ತಿದೆ. ತಮ್ಮ ಕರೆಯನ್ನು ಹಿರಿಯ ಅಧಿಕಾರಿಗಳಿಗೆ ವರ್ಗಾವಣೆ ಮಾಡಲಾಗುವುದು ಎಂದು ಬೆದರಿಸಿದ್ದ. ಸ್ವಲ್ಪ ಸಮಯದ ಬಳಿಕ ವಿಡಿಯೊ ಕರೆ ಮಾಡಿದ್ದ ಮತ್ತೊಬ್ಬ ವಂಚಕ, ‘ಮುಂಬೈ ಸೈಬರ್ ಕ್ರೈಂ ಪೊಲೀಸ್ ಅಧಿಕಾರಿ’ ಎಂದು ಹೇಳಿಕೊಂಡಿದ್ದ. ತಮ್ಮ ಬ್ಯಾಂಕ್ ಖಾತೆಗಳನ್ನು ಪರಿಶೀಲನೆ ನಡೆಸಬೇಕಿದೆ. ಖಾತೆಯಲ್ಲಿದ್ದ ಹಣವನ್ನು ವರ್ಗಾವಣೆ ಮಾಡಬೇಕು. ಇಲ್ಲದಿದ್ದರೆ ಅರೆಸ್ಟ್ ಮಾಡಲಾಗುವುದು ಎಂಬುದಾಗಿ ಬೆದರಿಸಿದ್ದ’ ಎಂದು ಸೈಬರ್ ಪೊಲೀಸರು ಹೇಳಿದರು.
43 ಖಾತೆಗೆ ಹಣ ವರ್ಗ: ‘ಆತಂಕಗೊಂಡಿದ್ದ ಶ್ರೇಯಾ ಅವರು ವಂಚಕರು ಹೇಳಿದಂತೆಯೇ ಕೇಳಿದ್ದರು. ಸೈಬರ್ ವಂಚಕರು ತಿಳಿಸಿದ್ದ 43 ಖಾತೆಗಳಿಗೆ ತಮ್ಮ ಮೂರು ಬ್ಯಾಂಕ್ ಖಾತೆಗಳಿಂದ ₹3.62 ಕೋಟಿಯನ್ನು ವರ್ಗಾವಣೆ ಮಾಡಿದ್ದರು’ ಎಂದು ಮೂಲಗಳು ಹೇಳಿವೆ.
ಸೈಬರ್ ವಂಚನೆಗೆ ಒಳಗಾಗಿ ಹಣ ಕಳೆದುಕೊಂಡವರು ಗಾಬರಿಗೊಂಡು ಸಮಯ ವ್ಯರ್ಥ ಮಾಡದೇ ‘ಗೋಲ್ಡನ್ ಅವರ್’ನಲ್ಲಿ ಸಹಾಯವಾಣಿ 1930ಕ್ಕೆ ಕರೆ ಮಾಡಿ ದೂರು ದಾಖಲಿಸಬೇಕು. ಅಥವಾ ಸಮೀಪದ ಠಾಣೆಗೆ ತೆರಳಿ ತ್ವರಿತವಾಗಿ ದೂರು ದಾಖಲಿಸಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ.
ಸಾಲ ಮರುಪಾವತಿಯಲ್ಲಿ ‘ಆಫರ್’ ನೀಡುವುದಾಗಿ ಹೇಳಿ ಬರುವ ವಾಟ್ಸ್‌ಆ್ಯಪ್ ಸಂದೇಶಗಳಿಗೆ ಪ್ರತಿಕ್ರಿಯಿಸುವುದು ಬೇಡ. ಆ ಸಂದೇಶವನ್ನು ನಂಬಿ ಆನ್‌ಲೈನ್‌ನಲ್ಲಿ ಪಾವತಿಸಿದರೆ ಹಣ ಕಳೆದುಕೊಳ್ಳುವ ಸಾಧ್ಯತೆ ಇದೆ–ಎಂ.ಎ.ಸಲೀಂ ರಾಜ್ಯ ಪೊಲೀಸ್ ಮಹಾನಿರ್ದೇಶಕ
‘ಡಿಜಿಟಲ್ ಅರೆಸ್ಟ್’ ಹೆಸರಿನಲ್ಲಿ ಬೆದರಿಸಿ ವಂಚಿಸುತ್ತಿದ್ದ ಪ್ರಕರಣಗಳು ಆರು ತಿಂಗಳ ಅವಧಿಯಲ್ಲಿ ಕಡಿಮೆ ಆಗಿದ್ದವು. ಈಗ ಅದೇ ಮಾದರಿಯಲ್ಲಿ ವಂಚಿಸುತ್ತಿರುವ ಪ್ರಕರಣಗಳು ಹೆಚ್ಚು ವರದಿ ಆಗುತ್ತಿವೆ–ಸಿ.ವಂಶಿಕೃಷ್ಣ ಹೆಚ್ಚುವರಿ ಪೊಲೀಸ್ ಕಮಿಷನರ್ (ಪಶ್ಚಿಮ ವಿಭಾಗ)
ಮಕ್ಕಳ ಶಿಕ್ಷಣ ವಾಹನ ಹಾಗೂ ನಿವೇಶನ ಖರೀದಿ ಮನೆ ನಿರ್ಮಾಣ ಸೇರಿ ವಿವಿಧ ಕಾರಣಕ್ಕೆ ಜನಸಾಮಾನ್ಯರು ಬ್ಯಾಂಕ್‌ಗಳಿಂದ ಸಾಲ ಪಡೆದುಕೊಂಡಿರುತ್ತಾರೆ. ಸಾಲ ಪಡೆದವರನ್ನೂ ಗುರಿಯಾಗಿಸಿ ಅರ್ಧ ಸಾಲ ಮನ್ನಾ ಹೆಸರಿನಲ್ಲೂ ವಂಚಿಸಲಾಗುತ್ತಿದೆ. ‘ನಿಮ್ಮ ವಾಹನದ ಮೇಲೆ ಸಾಲ ಇಲ್ಲದಿದ್ದರೂ ಹಳೆಯ ಸಾಲ ಬಾಕಿಯಿದ್ದು ಅದನ್ನು ಚುಕ್ತಾ ಮಾಡಲು ತಮ್ಮ ಬಳಿ ‘ಆಫರ್’ ಇದೆ ಎಂಬುದಾಗಿ ವಂಚಕರು ನಂಬಿಸುತ್ತಿದ್ದಾರೆ. ₹5 ಲಕ್ಷ ಸಾಲವಿದ್ದರೆ ₹4 ಲಕ್ಷ ಮಾತ್ರ ಪಾವತಿಸಿದರೆ ಸಾಕು ಎಂದು ಹೇಳಿ ಸಂದೇಶ ಕಳುಹಿಸುತ್ತಿದ್ದಾರೆ. ಆ ರೀತಿಯ ಸಂದೇಶಗಳನ್ನು ನಂಬಿ ಆನ್‌ಲೈನ್‌ನಲ್ಲಿ ಹಣ ಪಾವತಿಸಿದವರು ಹಣ ಕಳೆದುಕೊಂಡಿದ್ದಾರೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.