(ಸಾಂದರ್ಭಿಕ ಚಿತ್ರ)
ಬೆಂಗಳೂರು: ‘ಬೆಳಕಿನ ಹಬ್ಬ’ ದೀಪಾವಳಿ ವೇಳೆ ರಾಜಧಾನಿಯಲ್ಲಿ ಪಟಾಕಿ ಸಿಡಿತದಿಂದ ಅವಘಡಗಳು ಸಂಭವಿಸಿವೆ.
ಪಟಾಕಿ ಸಿಡಿಸುವಾಗ ಗಾಯಗೊಂಡ 5 ಮಂದಿಗೆ ರಾಜಾಜಿನಗರದ ನಾರಾಯಣ ನೇತ್ರಾಲಯದಲ್ಲಿ ಹಾಗೂ ನಾಲ್ವರಿಗೆ ಮಿಂಟೊ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ಮೂರು ವರ್ಷದ ಬಾಲಕನ ಕಣ್ಣಿಗೆ ಗಾಯಗಳಾಗಿದ್ದು, ನಾರಾಯಣ ನೇತ್ರಾಲಯದಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ. ಉಳಿದ ನಾಲ್ವರಿಗೆ ಚಿಕಿತ್ಸೆ ನೀಡಿ ಮನೆಗೆ ಕಳುಹಿಸಲಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
12 ವರ್ಷ ಹಾಗೂ 14 ವರ್ಷದ ಬಾಲಕರಿಗೆ ಪಟಾಕಿ ಸಿಡಿತದಿಂದ ಕಣ್ಣಿಗೆ ಗಾಯಗಳಾಗಿದ್ದು, ಮಿಂಟೊ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಮನೆಗೆ ಕಳುಹಿಸಲಾಗಿದೆ. ಆಟಂ ಬಾಂಬ್ ಸಿಡಿತದಿಂದ 48 ವರ್ಷದ ವ್ಯಕ್ತಿಯ ಕಣ್ಣಿಗೆ ಗಾಯವಾಗಿದ್ದು, ಚಿಕಿತ್ಸೆ ನೀಡಲಾಗಿದೆ. ಬಿಜಲಿ ಪಟಾಕಿ ಸಿಡಿದು 11 ವರ್ಷದ ಬಾಲಕನ ಕಣ್ಣಿಗೆ ಸಣ್ಣ–ಪುಟ್ಟ ಗಾಯಗಳಾಗಿದ್ದವು. ಇಬ್ಬರಿಗೂ ಚಿಕಿತ್ಸೆ ನೀಡಿ ಮನೆಗೆ ಕಳುಹಿಸಲಾಗಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
‘ಹೆಚ್ಚಿನ ಮಕ್ಕಳು ಪಟಾಕಿ ಸಿಡಿತದಿಂದ ಕಣ್ಣುಗಳಿಗೆ ಗಾಯ ಮಾಡಿಕೊಳ್ಳುತ್ತಾರೆ. ಈ ಬಗ್ಗೆ ಪಾಲಕರು ಎಚ್ಚರಿಕೆ ವಹಿಸಬೇಕು. ಪಟಾಕಿ ಸಿಡಿಸುವಾಗ ಸರಳ ರಕ್ಷಣಾತ್ಮಕ ಕನ್ನಡಕಗಳನ್ನು ಧರಿಸಬೇಕು. ಕಣ್ಣುಗಳಿಗೆ ಯಾವುದೇ ರೀತಿಯ ಗಾಯಗಳಾದರೆ ತಡ ಮಾಡದೇ ಕಣ್ಣಿನ ಆಸ್ಪತ್ರೆಗೆ ಭೇಟಿ ನೀಡಿ, ಚಿಕಿತ್ಸೆ ಪಡೆದುಕೊಳ್ಳಬೇಕು’ ಎಂದು ನಾರಾಯಣ ನೇತ್ರಾಲಯದ ನಿರ್ದೇಶಕ ಡಾ. ನರೇನ್ ಶೆಟ್ಟಿ ಸಲಹೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.